ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಸರ್ಕಾರಿ ಒಡೆತನದಲ್ಲಿದ್ದ ಸಕ್ಕರೆ ಕಾರ್ಖಾನೆ ಇದೀಗ ಖಾಸಗಿ ಒಡೆತನದಲ್ಲಿ ಆರಂಭ| ಇದು ಇಲ್ಲಿನ ಜನರಿಗೆ ದ್ರೋಹವೆಸಗಿ ಹಣ ಕೊಳ್ಳೆ ಹೊಡೆಯಲು ನಡೆಸುತ್ತಿರುವ ರಾಜಕೀಯ ಕುತಂತ್ರ| ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ: ಗಣೇಶ್|
ಕಂಪ್ಲಿ(ಫೆ.20): ಕಂಪ್ಲಿ ಸಕ್ಕರೆ ಕಾರ್ಖಾನೆ ವಿಚಾರವಾಗಿ ಸಚಿವ ಶ್ರೀರಾಮುಲು ಹಾಗೂ ಮಾಜಿ ಶಾಸಕ ಟಿ.ಎಚ್. ಸುರೇಶ್ ಬಾಬು ಸಾರ್ವಜನಿಕರ ಮುಂದೆ ಬಹಿರಂಗ ಚರ್ಚೆಗೆ ಬರಲಿ ಎಂದು ಶಾಸಕ ಜೆ.ಎನ್. ಗಣೇಶ್ ಸವಾಲೊಡ್ಡಿದ್ದರು.
ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಸರ್ಕಾರಿ ಒಡೆತನದಲ್ಲಿದ್ದ ಸಕ್ಕರೆ ಕಾರ್ಖಾನೆ ಇದೀಗ ಖಾಸಗಿ ಒಡೆತನದಲ್ಲಿ ಆರಂಭಗೊಳ್ಳುತ್ತಿದೆ. ಇದು ಇಲ್ಲಿನ ಜನರಿಗೆ ದ್ರೋಹವೆಸಗಿ ಹಣ ಕೊಳ್ಳೆ ಹೊಡೆಯಲು ನಡೆಸುತ್ತಿರುವ ರಾಜಕೀಯ ಕುತಂತ್ರವಾಗಿದೆ ಎಂದು ಆರೋಪಿಸಿದರು.
ಇನ್ನು ಗ್ಯಾಸ್, ಪೆಟ್ರೋಲ್, ಡಿಸೇಲ್, ದಿನಸಿ ಸಾಮಾನುಗಳ ಬೆಲೆ ಏರಿಕೆಯಿಂದ ಜನ ಸಾಮಾನ್ಯರು ತತ್ತರಿಸಿದ್ದಾರೆ. ಇದರೊಂದಿಗೆ ಬಿಜೆಪಿ ಸರ್ಕಾರ ವಿವಿಧ ಕಾಯ್ದೆಗಳ ತಿದ್ದುಪಡಿ ಮೂಲಕ ರೈತರನ್ನು ಸಂಕಷ್ಟಕ್ಕೆ ದೂಡಲು ಮುಂದಾಗುತ್ತಿದೆಯೇ ಹೊರೆತು ಜನ ಸಾಮಾನ್ಯರ, ರೈತರ ಪರ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿಲ್ಲ ಎಂದರು.
ತಾಲೂಕಿನ ಹಲವು ಮಾರ್ಗಗಳ ರಸ್ತೆ, ಕಂಪ್ಲಿ ಸೇತುವೆ ಬಡಜನರಿಗೆ ಮನೆಗಳ ವ್ಯವಸ್ಥೆ ಹೀಗೆ ಹಲವು ಯೋಜನೆಗಳನ್ನು ಒದಗಿಸುವಂತೆ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿಕೊಂಡರು ಯಾವುದೇ ಪ್ರಯೋಜನವಾಗಿಲ್ಲ. ಹೊಸಪೇಟೆಗೆ ಹೊಂದಿಕೊಂಡಿದ್ದಂತಹ ಕಂಪ್ಲಿ ತಾಲೂಕನ್ನು ನೂತನ ವಿಜಯನಗರ ಜಿಲ್ಲೆಯಿಂದ ಕೈಬಿಟ್ಟಿರುವುದು ಈ ಎಲ್ಲಾ ವಿಷಯಗಳನ್ನು ತಾಲೂಕಿನ ಜನತೆ ಮನದಲ್ಲಿಟ್ಟುಕೊಂಡು ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶೂನ್ಯದತ್ತ ವಾಲುತ್ತಿದೆ ಕೊರೋನಾ ವೈರಸ್ ಪ್ರಕರಣ..!
ನಾನು ಶಾಸಕನಾಗುವ ಮುಂಚೆ ಅರಳಿಹಳ್ಳಿಗೆ ಭೇಟಿ ನೀಡಿದಾಗ ಮೂಲಭೂತ ಸೌಕರ್ಯಗಳಿಲ್ಲದೆ ಇಲ್ಲಿನ ಗ್ರಾಮಸ್ಥರು ಸಮಸ್ಯೆ ಅನುಭವಿಸುತ್ತಿದ್ದರು. ಗ್ರಾಮಾಭಿವೃದ್ಧಿ ನಿಟ್ಟಿನಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಿಸಲಾಗಿದೆ. ವಿವಾಹಗಳಂತಹ ಕಾರ್ಯಕ್ರಮಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಭವನ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದರು.
2020-21ನೇ ಸಾಲಿನ ಲೋಕೋಪಯೋಗಿ ಇಲಾಖೆ ಯೋಜನೆಯ ಅಡಿಯಲ್ಲಿ ತಾಂಡಾ ಅಭಿವೃದ್ಧಿ ನಿಗಮದ ವತಿಯಿಂದ ಲೆಕ್ಕ ಶೀರ್ಷಿಕೆ 8443- ಅಡಿಯಲ್ಲಿ ಅಂದಾಜು 30 ಲಕ್ಷ ರು. ವೆಚ್ಚದ ಸಿಸಿ ರಸ್ತೆ ಮತ್ತು ಚರಂಡಿ ಹಾಗೂ ಅಂದಾಜು ಮೊತ್ತ 20 ಲಕ್ಷ ರು. ವೆಚ್ಚದ ಶ್ರೀ ಸೇವಾಲಾಲ್ ಸಮುದಾಯ ಭವನ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಜ್ಯೋತಿ ನಾಯಕ, ಸದಸ್ಯರಾದ ಗವಿಸಿದ್ದಪ್ಪ, ಸಿ. ಹನುಮಂತ, ವೀರನಗೌಡ, ಪಿಡಿಒ ಶೇಷಗಿರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.