'ಬಿಜೆಪಿ ಸಂಪರ್ಕದಲ್ಲಿ ಕಾಂಗ್ರೆಸ್ಸಿನ 15-20 ಶಾಸಕರು: ಹೊಸ ಬಾಂಬ್‌ ಸಿಡಿಸಿದ ಕಟೀಲ್‌

By Kannadaprabha NewsFirst Published Feb 18, 2021, 2:43 PM IST
Highlights

ಕಾಂಗ್ರೆಸ್ಸಿನಲ್ಲಿ ಅಸಮಾಧಾನವಿದ್ದಂತೆ ಕಾಣುತ್ತಿದೆ| ಮುಂದಿನ ಚುನಾವಣೆಯಲ್ಲಿಯೂ ಅವರನ್ನು ತೆಗೆದುಕೊಳ್ಳುವ ಅವಶ್ಯಕತೆಯೂ ಇಲ್ಲ| ರಾಮ ಏನು, ರಾಮಮಂದಿರ ಅಂದರೆ ಏನು ಎಂಬುವುದರ ಬಗ್ಗೆ ಗೌರವವಿದ್ದರೆ ದೇಣಿಗೆ ಕೊಡಿ ಎಂದು ಎಚ್ಡಿಕೆಗೆ ಟಾಂಗ್‌ ನೀಡಿದ ಕಟೀಲ್‌| 

ವಿಜಯಪುರ(ಫೆ.18):  ಸಚಿವ ರಮೇಶ ಜಾರಕಿಹೊಳಿ ಅವರು ಹೇಳಿದ್ದು ನಿಜ. ಕಾಂಗ್ರೆಸ್ಸಿನ 15-20 ಮಂದಿ ಶಾಸಕರು ಬಿಜೆಪಿಗೆ ಬರಲು ಸಂಪರ್ಕದಲ್ಲಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನಕುಮಾರ ಕಟೀಲ್‌ ಅವರು ಹೊಸ ಬಾಂಬ್‌ ಎಸೆದಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಸದ್ಯ ನಮಗೆ ಅವರ ಅವಶ್ಯಕತೆ ಇಲ್ಲ ಎಂದು ಸುಮ್ಮನಿದ್ದೇವೆ. ಕಾಂಗ್ರೆಸ್‌ ಶಾಸಕರು ನಮ್ಮ ಪಕ್ಷಕ್ಕೆ ಬರಲು ಅವರೇ ನಮಗೆ ಕೇಳುತ್ತಿದ್ದಾರೆ. ಕಾಂಗ್ರೆಸ್ಸಿನಲ್ಲಿ ಅಸಮಾಧಾನವಿದ್ದಂತೆ ಕಾಣುತ್ತಿದೆ. ಮುಂದೆ ಚುನಾವಣೆಯಲ್ಲಿಯೂ ಅವರನ್ನು ತೆಗೆದುಕೊಳ್ಳುವ ಅವಶ್ಯಕತೆಯೂ ಇಲ್ಲ ಎಂದರು.

ಬರಲಿರುವ ನಾಲ್ಕು ಉಪ ಚುನಾವಣೆಯಲ್ಲಿ (ಮೂರು ವಿಧಾನಸಭೆ ಹಾಗೂ ಒಂದು ಲೋಕಸಭೆ ಉಪ ಚುನಾವಣೆ) ಬಿಜೆಪಿ ಗೆಲುವು ನಿಶ್ಚಿತ ಎಂದ ಅವರು, ಸಿಂದಗಿ ವಿಧಾನಸಭೆ ಉಪ ಚುನಾವಣೆ ಅಭ್ಯರ್ಥಿ ಕುರಿತು ಪಕ್ಷ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಈ ಸಂಬಂಧ ಚರ್ಚೆ ನಡೆಸಿ ಯಾರು ಗೆಲ್ಲುವ ಅಭ್ಯರ್ಥಿ ಎಂಬುವುದನ್ನು ಅರಿತು ಅಂಥವರಿಗೆ ಟಿಕೆಟ್‌ ನೀಡಲಾಗುವುದು ಎಂದು ಹೇಳಿದರು.

ರಾಮಮಂದಿರ ದೇಣಿಗೆ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಎಚ್‌.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯನವರು ನೀಡಿದ ಹೇಳಿಕೆಗೆ ತಿರುಗೇಟು ನೀಡಿದ ಕಟೀಲ್‌, ದೊಡ್ಡವರಾಗಿ ಇಂತಹ ಸಣ್ಣತನದ ಹೇಳಿಕೆ ನೀಡಬಾರದು. ಅಂತ ವ್ಯಕ್ತಿ ಬಾಯಿಂದ ಇಂತಹ ಮಾತನ್ನು ನಾನು ನಿರೀಕ್ಷಿರಲಿಲ್ಲ. ರಾಮ ಏನು, ರಾಮಮಂದಿರ ಅಂದರೆ ಏನು ಎಂಬುವುದರ ಬಗ್ಗೆ ಗೌರವವಿದ್ದರೆ ದೇಣಿಗೆ ಕೊಡಿ ಎಂದು ಎಚ್ಡಿಕೆಗೆ ಟಾಂಗ್‌ ನೀಡಿದರು. ವಿವಾದಾತ್ಮಕ ಸ್ಥಳದಲ್ಲಿ ನಿರ್ಮಿಸುತ್ತಿರುವ ರಾಮ ಮಂದಿರಕ್ಕೆ ಹಣ ನೀಡಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಕಟೀಲ್‌ ತಿರುಗೇಟು ನೀಡಿ, ರಾಮನ ಮೇಲೆ ಗೌರವ ಉಂಟು. ಆದರೆ ಸುಪ್ರೀಂ ಕೋರ್ಟ್‌ ಮೇಲೆ ಇಲ್ಲವೆ ಎಂದು ಪ್ರಶ್ನಿಸಿದರು.

ಎಣ್ಣೆ ಹೊಡೆಯೋ ಚಟ ಬಿಡಿಸಲು ಆಂಜನೇಯನಿಗೆ ಪತ್ರ ಬರೆದ ಕುಡುಕ ಭಕ್ತ..!

ರಾಮಮಂದಿರ ನಿರ್ಮಾಣದ ಕುರಿತು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ. ಇದನ್ನು ಪ್ರಧಾನಿ ನರೇಂದ್ರ ಮೋದಿ ಆಗಲಿ, ವಿಶ್ವ ಹಿಂದೂ ಪರಿಷತ್‌ ಆಗಲಿ ಹೇಳಿಲ್ಲ. ಸುಪ್ರೀಂ ಕೋರ್ಟ್‌ ಟ್ರಸ್ಟ್‌ ರಚನೆ ಮಾಡಿದೆ. ಇದು ಸುಪ್ರೀಂ ಕೋರ್ಟ್‌ ತೀರ್ಪಿನ ಆಧಾರದ ಮೇಲೆ ಟ್ರಸ್ಟ್‌ ರಚನೆಯಾಗಿದೆ. ಸುಪ್ರೀಂ ಕೋರ್ಟ್‌ ಹಾಗೂ ಸಂವಿಧಾನದ ಮೇಲೆ ಯಾರಿಗೆ ಗೌರವ ಇಲ್ಲವೋ ಅವರು ಇಂತಹ ಮಾತುಗಳನ್ನು ಆಡುತ್ತಾರೆ ಎಂದು ಹೇಳಿದರು.

ಶಾಸಕ ಯತ್ನಾಳಗೆ ನೋಟಿಸ್‌:

ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಕೇಂದ್ರ ಶಿಸ್ತು ಸಮಿತಿ ನೋಟಿಸ್‌ ನೀಡಿದೆ. ನೋಟಿಸ್‌ ತಲುಪಿದ ನಂತರ ಯತ್ನಾಳ ಅವರೇ ಉತ್ತರ ನೀಡುತ್ತಾರೆ. ಈಶ್ವರಪ್ಪ, ಶ್ರೀರಾಮುಲು ಮೀಸಲಾತಿ ಹೋರಾಟ ವಿಚಾರವಾಗಿ ಪಕ್ಷ ಎಲ್ಲವನ್ನೂ ಗಮನಿಸುತ್ತಿದೆ. ಯಾವ ಸಂದರ್ಭದಲ್ಲಿ ಏನು ತೀರ್ಮಾನ ಕೈಗೊಳ್ಳಬೇಕೋ ಅದನ್ನು ಕೈಗೊಳ್ಳಲಾಗುವುದು. ನಾಯಕರು ಮೀಸಲಾತಿ ಹೋರಾಟದಲ್ಲಿ ಭಾಗವಹಿಸಬಾರದು ಎಂಬ ಬಗ್ಗೆ ಸೂಚನೆ ಇಲ್ಲ. ಆದರೆ ಎಲ್ಲರನ್ನೂ ಕರೆದು ಮಾತನಾಡಲಾಗುವುದು. ಎಲ್ಲ ಸಮಾಜಗಳಿಗೆ ಗೌರವ ಕೊಡುವ ಹಾಗೂ ನ್ಯಾಯ ನೀಡುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು. ಈ ಬಗ್ಗೆ ಮುಖ್ಯಮಂತ್ರಿ, ಸರ್ಕಾರ ಹಾಗೂ ಪಕ್ಷ ಎಲ್ಲವನ್ನೂ ಚರ್ಚೆ ಮಾಡುತ್ತದೆ ಎಂದರು.
 

click me!