'ಲಸಿಕೆ ಒದಗಿಸುವಲ್ಲಿ ಸರ್ಕಾರ ವಿಫಲ: ವ್ಯಾಕ್ಸಿನ್‌ಗೆ 1 ಕೋಟಿ ಅನುದಾನ ನೀಡುವೆ, ಭೀಮಾನಾಯ್ಕ

By Kannadaprabha NewsFirst Published Jun 10, 2021, 1:58 PM IST
Highlights

* ಬ್ಲ್ಯಾಕ್‌ ಫಂಗಸ್‌ ಔಷಧಿ ಪೂರೈಕೆಗೆ ಸರ್ಕಾರ ವಿಫಲ
* ಸಮರ್ಪಕವಾಗಿ ಲಸಿಕೆ ಪೂರೈಸುವ ನಿಟ್ಟಿನಲ್ಲಿ ಕ್ರಮ ವಹಿಸದಿದ್ದರೆ ಅಪಾಯ ನಿಶ್ಚಿತ
* ಬ್ಲ್ಯಾಕ್‌ ಫಂಗಸ್‌ ನಿಯಂತ್ರಣದ ಸವಾಲನ್ನು ಜಿಲ್ಲಾಡಳಿತ ಸಮರ್ಪಕವಾಗಿ ನಿರ್ವಹಿಸಬೇಕು 

ಹೊಸಪೇಟೆ(ಜೂ.10): ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೋವಿಡ್‌ ತಡೆಗೆ ಲಸಿಕೆ ಸಮರ್ಪಕವಾಗಿ ಒದಗಿಸುವಲ್ಲಿ ವಿಫಲವಾಗಿದ್ದು, ತಮ್ಮ ಶಾಸಕರ ಅನುದಾನದಲ್ಲಿ ಲಸಿಕೆ ಖರೀದಿಗೆ 1 ಕೋಟಿ ಅನುದಾನ ಒದಗಿಸಲಾಗುವುದು ಎಂದು ಶಾಸಕ ಎಸ್‌. ಭೀಮಾನಾಯ್ಕ ತಿಳಿಸಿದ್ದಾರೆ. 

ಹಗರಿಬೊಮ್ಮನಹಳ್ಳಿ ಪಟ್ಟಣದ ಕಾತ್ಯಾಯಿನಿ ಮರಡಿ ರಸ್ತೆಯ ಬಿಸಿಎಂ ವಿದ್ಯಾರ್ಥಿ ವಸತಿ ನಿಲಯದಲ್ಲಿ ಬಾಲಚೈತನ್ಯ ಯೋಜನೆಯಡಿ ಮಕ್ಕಳ ಆರೈಕೆ ಕೇಂದ್ರ ಉದ್ಘಾಟಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಕ್ಷೇತ್ರದ ಮರಿಯಮ್ಮನಹಳ್ಳಿ, ಕೊಟ್ಟೂರು ಮತ್ತು ಹಗರಿಬೊಮ್ಮನಹಳ್ಳಿ ವ್ಯಾಪ್ತಿ ಪ್ರತಿಯೊಬ್ಬರಿಗೂ ಲಸಿಕೆ ಒದಗಿಸಲು ಶೀಘ್ರ 1 ಕೋಟಿ ಅನುದಾನವನ್ನು ಜಿಲ್ಲಾಧಿಕಾರಿಗೆ ಪತ್ರದ ಮೂಲಕ ಹಸ್ತಾಂತರಿಸಲಾಗುವುದು. ಇನ್ನಾದರೂ ಜಿಲ್ಲಾಧಿಕಾರಿಗಳು ಸಮರ್ಪಕವಾಗಿ ಲಸಿಕೆ ಪೂರೈಸುವ ನಿಟ್ಟಿನಲ್ಲಿ ಕ್ರಮ ವಹಿಸದಿದ್ದರೆ ಅಪಾಯ ನಿಶ್ಚಿತ. ತಾಲೂಕಿನಲ್ಲಿ ಫಸ್ಟ್‌ ಡೋಸ್‌ ಲಸಿಕೆ ಪಡೆದ 48 ಸಾವಿರ ಜನರಲ್ಲಿ ಕೇವಲ 4 ಸಾವಿರ ಜನರಿಗೆ 2ನೇ ಡೋಸ್‌ ಒದಗಿರುವುದು ಲಸಿಕೆ ಪೂರೈಕೆಯಲ್ಲಿ ವಿಫಲವಾಗಿರುವುದಕ್ಕೆ ಸಾಕ್ಷಿಯಾಗಿದೆ ಎಂದರು.

ಕೊಟ್ಟೂರಲ್ಲಿ 'ಮಲ್ಟಿಸ್ಪೆಷಾಲಿಟಿ’ ಆಸ್ಪತ್ರೆಗೆ ಗ್ರೀನ್‌ ಸಿಗ್ನಲ್‌..!

ರಾಜ್ಯ ಸರ್ಕಾರಕ್ಕೆ ಒಟ್ಟು 100 ಕೋಟಿ ಅನುದಾನವನ್ನು ಕಾಂಗ್ರೆಸ್‌ ಶಾಸಕರು ಮತ್ತು ಸಂಸದರ ಅನುದಾನದಲ್ಲಿ ಒದಗಿಸುವ ನಿರ್ಣಯ ಕೈಗೊಳ್ಳಲಾಗಿದೆ. ಒಟ್ಟು 100 ಕೋಟಿ ಅನುದಾನದಲ್ಲಿ ಕೆಪಿಸಿಸಿಯಿಂದ 10 ಕೋಟಿ ಮೊತ್ತ ಭರಿಸಲಾಗುವುದು. ರಾಜ್ಯದ ಕಾಂಗ್ರೆಸ್‌ ಶಾಸಕ ಮತ್ತು ಸಂಸದರಿಗೆ ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸೂಚಿಸಿದರು. ಶೀಘ್ರದಲ್ಲೆ ಅನುದಾನವನ್ನು ಜಿಲ್ಲಾಧಿಕಾರಿಗೆ ಹಸ್ತಾಂತರಿಸಲಾಗುವುದು ಎಂದು ಹೇಳಿದರು.

ಜಿಲ್ಲೆಯಲ್ಲಿ ಬ್ಲ್ಯಾಕ್‌ ಫಂಗಸ್‌ಗೆ ಚಿಕಿತ್ಸೆಗೆ ದಾಖಲಾದ 66 ರೋಗಿಗಳಿಗೆ ಜಿಲ್ಲಾಡಳಿತ ಸಮರ್ಪಕ ಔಷಧಿ ಪೂರೈಸಲು ಮೀನಮೇಷ ಎಣಿಸುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಬೆಲೆಗೆ ಮಾರಾಟವಾಗುತ್ತಿದ್ದರೂ ಜಿಲ್ಲಾಡಳಿತ ಕಣ್ಣುಮುಚ್ಚಿ ಕುಳಿತಿದೆ. ಸೂಕ್ತ ಚಿಕಿತ್ಸೆ ಇಲ್ಲದೆ 14 ಜನರು ಮೃತಪಟ್ಟಿರುವುದು ದುರ್ದೈವದ ಸಂಗತಿಯಾಗಿದೆ. ಸಮರ್ಪಕ ಔಷಧಿ ಪೂರೈಸುವಂತೆ ಡಿಸಿ, ಡಿಎಚ್‌ಒಗಳನ್ನು ಒತ್ತಾಯಿಸಲಾಗಿದೆ. ವಿಮ್ಸ್‌ ನಿರ್ದೇಶಕರಿಗೆ ದೂರವಾಣಿ ಕರೆ ಮಾಡಿ ಔಷಧಿ ಲಭ್ಯತೆ ಕುರಿತಂತೆ ಚರ್ಚೆ ನಡೆಸಲಾಗಿದೆ. ಜಿಲ್ಲಾ ಖನಿಜನಿಧಿಯಡಿ ಸರ್ಕಾರ ತಕ್ಷಣವೇ ಬ್ಲ್ಯಾಕ್‌ ಫಂಗಸ್‌ ಪೀಡಿತರಿಗೆ ಸಮರ್ಪಕ ಔಷಧಿ ಪೂರೈಸಬೇಕು. ಕೋವಿಡ್‌ ಪ್ರಮಾಣ ತಗ್ಗಿರುವುದು ಆರೋಗ್ಯಕರವಾದರೂ, ಬ್ಲ್ಯಾಕ್‌ ಫಂಗಸ್‌ ನಿಯಂತ್ರಣದ ಸವಾಲನ್ನು ಜಿಲ್ಲಾಡಳಿತ ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಒತ್ತಾಯಿಸಿದರು.

ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ, ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಕನ್ನಿಹಳ್ಳಿ ಚಂದ್ರಶೇಖರ, ಗ್ರಾಪಂ ಮಾಜಿ ಸದಸ್ಯರಾದ ಹಾಲ್ದಾಳ್‌ ವಿಜಯಕುಮಾರ, ಪವಾಡಿ ಹನುಮಂತಪ್ಪ ಇದ್ದರು.
 

click me!