2008, 2018ರಲ್ಲಿ ಬಿಜೆಪಿ ಅಗತ್ಯ ಬಹುಮತ ಹೊಂದದೇ ಹೋದರೂ ಸಹ ಶಾಸಕರನ್ನು ಖರೀದಿಸಿ ಸರ್ಕಾರ ಮಾಡಿದೆ, ಇದನ್ನೇ ಹಿಂಬಾಗಿಲ ಸರ್ಕಾರ ಅನ್ನೋದು| ಸಭಾ ಕಲಾಪ ಮುಂದೂಡಿದ ಮೇಲೆ ವಿಧಾನ ಪರಿಷತ್ ಸಭಾ ಕಲಾಪ ಕರೆದದ್ದೇ ತಪ್ಪು ಎಂದ ಶಾಸಕ ಡಾ.ಅಜಯ್ ಸಿಂಗ್|
ಕಲಬುರಗಿ(ಡಿ.16): ರಾಜ್ಯ ಬಿಜೆಪಿಯು ಹಿಂಬಾಗಿಲ ಪ್ರವೇಶದ ಸರ್ಕಾರವಾಗಿದೆ ಎಂದು ಶಾಸಕ ಡಾ.ಅಜಯ್ ಸಿಂಗ್ ಲೇವಡಿ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2008, 2018ರಲ್ಲಿ ಬಿಜೆಪಿ ಅಗತ್ಯ ಬಹುಮತ ಹೊಂದದೇ ಹೋದರೂ ಸಹ ಶಾಸಕರನ್ನು ಖರೀದಿಸಿ ಸರ್ಕಾರ ಮಾಡಿದೆ. ಇದನ್ನೇ ಹಿಂಬಾಗಿಲ ಸರ್ಕಾರ ಅನ್ನೋದು ಎಂದರು.
ಸಭಾ ಕಲಾಪ ಮುಂದೂಡಿದ ಮೇಲೆ ವಿಧಾನ ಪರಿಷತ್ ಸಭಾ ಕಲಾಪ ಕರೆದದ್ದೇ ತಪ್ಪು ಎಂದ ಡಾ.ಅಜಯ್ ಸಿಂಗ್, ಬಿಜೆಪಿ ಸದನ ಕಲಾಪ ಸಮಿತಿಯಲ್ಲಿ ಹೇಳೋದೊಂದು, ವಾಸ್ತವದಲ್ಲಿ ಮಾಡೋದೇ ಮತ್ತೊಂದು ಎಂದು ಟೀಕಿಸಿದರು. ಈ ಸರಕಾರಕ್ಕೆ ಅಭಿವೃದ್ಧಿ ಬೇಕಿಲ್ಲ, ಬರೀ ರಾಜಕೀಯ ಮಾಡುತ್ತಿದೆ. ರಾಜ್ಯದಲ್ಲಿ ಎಲ್ಲಾಕಡೆ ಅನುದಾನ ನೀಡುತ್ತದೆ. ಕಲ್ಯಾಣ ನಾಡಿನ ವಿಚಾರ ಬಂದಾಗ ಹಣವಿಲ್ಲ ಎಂದು ರಾಗ ಎಲೆಯುತ್ತದೆ. ಈ ಸರಕಾರದಿಂದ ಕಲ್ಯಾಣ ನಾಡಿಗೆ ಅನ್ಯಾಯವಾಗುತ್ತಿದೆ ಎಂದರು.
KSRTC ಮುಷ್ಕರ : ಶಿಶುವಿನೊಂದಿಗೆ ನಿಲ್ದಾಣದಲ್ಲಿ ಮೂರು ದಿನ ಕಾಲ ಕಳೆದ ಬಾಣಂತಿ
ಬೆಳೆ ಹಾನಿ ಪರಿಹಾರದಲ್ಲಿ ಕೇಂದ್ರ ರಾಜ್ಯಕ್ಕೆ ಅನ್ಯಾಯ ಮಾಡಿದ್ದರೂ ಸಹ ಬಿಜೆಪಿಯ 25 ಸಂಸದರು ಚಕಾರ ಎತ್ತದ ಸಂಗತಿಯನ್ನು ಖಂಡಿಸಿದ ಡಾ. ಜಯ್ ಸಿಂಗ್ ಜನ ಸಂಕಷ್ಟದಲ್ಲಿದ್ದಾಗ ಅದೆಂತಹ ರಾಜಕೀಯ ಮಾಡುತ್ತಾರೋ ಇವರು ಎಂದು ಬಿಜೆಪಿಯ ನಡೆಯನ್ನು ಖಂಡಿಸಿದರು.
ನೆರೆಯಿಂದಾದ ಬೆಳೆಹಾನಿ ಪರಿಹಾರ ಇನ್ನೂ ನೀಡಿಲ್ಲ. ಎನ್‌ಡಿಆರ್‌ಎಫ್ ನಿಯಮಗಳಂತೆ ಹಣ ನೀಡಿದರೆ ಹೆಕ್ಟೇರ್‌ಗೆ 6,800 ರು. ಬರಲಿದೆ. ಬೆಳಗಾವಿ ಮಾದರಿಯಲ್ಲಿ ಎಕರೆಗೆ 10 ಸಾವಿರ ರು. ಪರಿಹಾರ ನೀಡಬೇಕೆಂಬುದು ನಮ್ಮ ಆಗ್ರಹ, ಸರ್ಕಾರ ಹೆಚ್ಚಿನ ಪರಿಹಾರ ನೊಂದವರಿಗೆ ನೀಡುವತ್ತ ಗಮನ ಹರಿಸಬೇಕು ಎಂದು ಡಾ. ಶರಣ ಪ್ರಕಾಶ, ಡಾ. ಅಜಯ್ ಸಿಂಗ್ ಆಗ್ರಹಿಸಿದರು.