ರಂಗೇರಿದ ಚುನಾವಣಾ ಅಖಾಡ: ಗ್ರಾಪಂ ಸದಸ್ಯ ಸ್ಥಾನಗಳು ಲಕ್ಷ ಲಕ್ಷಕ್ಕೆ ಹರಾಜು..!

By Kannadaprabha News  |  First Published Dec 16, 2020, 2:36 PM IST

ರಥ ನಿರ್ಮಾಣಕ್ಕಾಗಿ ಗ್ರಾಪಂನ 3 ಸ್ಥಾನಗಳು ಹರಾಜು| ಗ್ರಾಮದ ದೇವಸ್ಥಾನದ ರಥಕ್ಕೆ ಈ ಹಣ ವಿನಿಯೋಗಿಸಲು ಗ್ರಾಮಸ್ಥರ ನಿರ್ಧಾರ| ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಗ್ರಾಮವೊಂದರಲ್ಲಿ ನಡೆದ ಘಟನೆ| ಯಾರಾದರೂ ನಾಮಪತ್ರ ಹಾಕಿದರೆ ಗ್ರಾಮದ ಹರಾಜು ಪ್ರಕ್ರಿಯೆಗೆ ಪಂಗನಾಮ| 


ಹೂವಿನಹಡಗಲಿ(ಡಿ.16): ಹಳ್ಳಿಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ರಂಗೇರುತ್ತಿದ್ದು, ಗೆಲುವಿಗಾಗಿ ಹತ್ತಾರು ರೀತಿಯ ಹರಸಾಹಸ ಮಾಡುತ್ತಿದ್ದಾರೆ. ತಾಲೂಕಿನ ಹಳ್ಳಿಯೊಂದರ ಗ್ರಾಪಂ 3 ಸದಸ್ಯ ಸ್ಥಾನಗಳು 12.50 ಲಕ್ಷ ರು. ಗಳಿಗೆ ಹರಾಜು ಆಗಿರುವ ಸಂಗತಿ ಬೆಳಕಿಗೆ ಬಂದಿದೆ. ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು(ಡಿ. 16) ಕೊನೆಯ ದಿನವಾಗಿರುವ ಹಿನ್ನೆಲೆಯಲ್ಲಿ ಅಲ್ಲಿಯ ವರೆಗೂ ಅವಿರೋಧ ಆಯ್ಕೆಯ ಈ ವಿಚಾರವನ್ನು ಗೌಪ್ಯವಾಗಿ ಇಡಲಾಗಿದೆ.

ಈ ಗ್ರಾಮದ 3 ಕ್ಷೇತ್ರಗಳನ್ನು ಸಾಮಾನ್ಯ, ಅನುಸೂಚಿತ ಜಾತಿ ಪುರುಷ ಮತ್ತು ಅನುಸೂಚಿತ ಮಹಿಳೆಗೆ ಸ್ಥಾನಗಳು ಮೀಸಲಿಡಲಾಗಿದೆ. ಮೀಸಲಾತಿಗೆ ಸಂಬಂಧ ಪಟ್ಟಂತೆ ಎರಡೂ ಪಕ್ಷಗಳ ಮುಖಂಡರು ಸಭೆ ಮೇಲೆ ಸಭೆ ಮಾಡುತ್ತಾ, ಅವಿರೋಧ ಆಯ್ಕೆಗೆ ಏನೆಲ್ಲಾ ಕಸರತ್ತು ನಡೆಸುತ್ತಿದ್ದಾರೆ. ಜತೆಗೆ ಕೆಲ ಷರತ್ತುಗಳನ್ನು ವಿಧಿಸಲಾಗುತ್ತಿದೆ.

Latest Videos

undefined

100ಕ್ಕೂ ಹೆಚ್ಚು ಕಾಂಗ್ರೆಸ್‌ ಮುಖಂಡರು ಬಿಜೆಪಿಗೆ ಸೇರ್ಪಡೆ

ತಾಲೂಕಿನ ಗ್ರಾಮವೊಂದರ ಆರಾಧ್ಯ ದೇವರ ರಥ ನಿರ್ಮಾಣ ಕಾರ್ಯ ನಡೆಯುತ್ತಿದೆ, ಇದಕ್ಕೆ ಅಗತ್ಯವಿರುವ ಹಣ ಸಂಗ್ರಹಿಸಬೇಕೆಂಬ ಉದ್ದೇಶದಿಂದ ಗ್ರಾಮಸ್ಥರು ಅವಿರೋಧ ಆಯ್ಕೆ ನಿರ್ಧಾರಕ್ಕೆ ಬಂದಿದ್ದಾರೆ. ತೇರು ನಿರ್ಮಾಣಕ್ಕೆ ಹೆಚ್ಚಿನ ಹಣ ಯಾರು ನೀಡುತ್ತಾರೋ ಅಂತವರನ್ನು ಅವಿರೋಧ ಆಯ್ಕೆ ಮಾಡುವುದಾಗಿ ಸುದ್ದಿ ಹರಿ ಬಿಟ್ಟಿದ್ದರು. ಈ ಸಂದರ್ಭದಲ್ಲಿ ಆರಂಭದಲ್ಲೇ ಸಾಮಾನ್ಯ ಕ್ಷೇತ್ರದ ಆಕಾಂಕ್ಷಿಯೊಬ್ಬರು 6 ಲಕ್ಷ ರು.ಗಳನ್ನು ಘೋಷಿಸಿದ್ದಾರೆ. ಇದಕ್ಕೆ ಪ್ರತಿ ಸವಾಲಾಗಿ ಮತ್ತೊಬ್ಬ ವ್ಯಕ್ತಿ 6.50 ಲಕ್ಷ ಎಂದು ಕೂಗಿದ್ದಾರೆ. ಹೀಗೆ ಹರಾಜು ನಡೆದಾಗ ಕೊನೆ ಗಳಿಗೆಯಲ್ಲಿ ಪ್ರಮುಖ ವ್ಯಕ್ತಿಯೊಬ್ಬರು 7.50 ಲಕ್ಷ ರು.ಗಳ ನೀಡುತ್ತೇನೆಂದು ಘೋಷಿಸಿದ್ದರು. ಅಂತಿಮ ಹಂತದಲ್ಲಿ ಇವರನ್ನು ಅವಿರೋಧ ಆಯ್ಕೆ ಮಾಡಲು ಸಭೆಯಲ್ಲಿ ಸೇರಿದ್ದ ಗ್ರಾಮಸ್ಥರು ಮತ್ತು ಮುಖಂಡರು ನಿರ್ಧರಿಸಿದ್ದಾರೆ. ಜತೆಗೆ ಅನುಸೂಚಿತ ಜಾತಿ ಪುರುಷ ಹಾಗೂ ಮಹಿಳಾ ಮೀಸಲು ಕ್ಷೇತ್ರಗಳಿಗೂ ತಲಾ ಎರಡೂವರೆ ಲಕ್ಷ ರು.ಗಳಿಗೆ ಹರಾಜು ಮಾಡಿ ಒಟ್ಟು ಮೂವರನ್ನೂ ಅಂತಿಮವಾಗಿ ಅವಿರೋಧ ಮಾಡಬೇಕಿದೆ. ಹಾಗಾಗಿ ಗ್ರಾಮದಲ್ಲಿ ಯಾರೂ ಕೂಡ ನಾಮಪತ್ರ ಸಲ್ಲಿಸಬಾರದೆಂದು ಗ್ರಾಮಸ್ಥರು ತೀರ್ಮಾನ ತೆಗೆದುಕೊಂಡಿದ್ದಾರೆ.

ಇದರ ನಡುವೆ ಡಿ. 16ರಂದು ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿದ್ದು, ಅಂದು ಸಾಯಂಕಾಲ 3 ಗಂಟೆವರೆಗೂ ಹರಾಜಾಗಿರುವ ಅಭ್ಯರ್ಥಿಗಳ ಭವಿಷ್ಯ ತೂಗುಯ್ಯಾಲೆಯಲ್ಲಿದೆ. ಇದರ ಮಧ್ಯೆ ಯಾರಾದರೂ ನಾಮಪತ್ರ ಹಾಕಿದರೆ ಗ್ರಾಮದ ಮುಖಂಡರು ಕೈಗೊಂಡಿರುವ ಹರಾಜು ಪ್ರಕ್ರಿಯೆಗೆ ಪಂಗನಾಮ ಬೀಳಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.
 

click me!