ಕಾಂಗ್ರೆಸ್ಸಿಗೆ ಮಾರಕವಾದ ಜಿಪಂ ಮೀಸಲಾತಿ ನಿಗದಿ..!

By Kannadaprabha NewsFirst Published Jul 4, 2021, 12:23 PM IST
Highlights

* ಮೀಸಲಾತಿ ನಿಗದಿಯಲ್ಲಿಯೂ ರಾಜಕೀಯ ಹಸ್ತಕ್ಷೇಪದ ಮಾತು
* ನ್ಯಾಯಾಲಯದ ಮೆಟ್ಟಿಲೇರುವ ಸಾಧ್ಯತೆ
* ಬಿಜೆಪಿ ಕಾಂಗ್ರೆಸ್‌ ನಾಯಕರಿಗೆ ಬಿಸಿ ಮುಟ್ಟಿದ ಜಿಪಂ ಮೀಸಲಾತಿ 
 

ಶಿವಕುಮಾರ ಕುಷ್ಟಗಿ

ಗದಗ(ಜು.04): ಜಿಲ್ಲೆಯ 24 ಕ್ಷೇತ್ರಗಳಿಗೆ ರಾಜ್ಯ ಚುನಾವಣಾ ಆಯೋಗ ಮೀಸಲಾತಿ ನಿಗದಿ ಮಾಡಿ ಕರಡು ಪ್ರತಿ ಹೊರಡಿಸಿದ ಬೆನ್ನಲ್ಲಿಯೇ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ಮೀಸಲಾತಿ ನಿಗದಿಯಲ್ಲಿ ಹಸ್ತಕ್ಷೇಪದ ಚರ್ಚೆ ಮುನ್ನೆಲೆಗೆ ಬಂದಿದೆ.

ಕಳೆದ ಬಾರಿ ಗದಗ ಜಿಪಂನಲ್ಲಿ ಒಟ್ಟು 19 ಕ್ಷೇತ್ರಗಳಿದ್ದವು. ಈ ಬಾರಿ ಕ್ಷೇತ್ರ ಮರುವಿಂಗಡಣೆಯಾಗಿ ಹೊಸದಾಗಿ 5 ಕ್ಷೇತ್ರಗಳು ಜನ್ಮ ತಳೆದಿದ್ದು, ಆ ಎಲ್ಲಾ ಹೊಸ ಕ್ಷೇತ್ರಗಳು ಸೇರಿದಂತೆ ಮೀಸಲಾತಿ ನಿಗದಿ ಸಂದರ್ಭದಲ್ಲಿ ಸಿಕ್ಕಿರುವ ಅವಕಾಶವನ್ನು ಆಡಳಿತಾರೂಢ ಬಿಜೆಪಿಯವರು ಬಳಕೆ ಮಾಡಿಕೊಂಡಿದ್ದು, ಹಲವಾರು ಜನ ಮರು ಆಯ್ಕೆ ಬಯಸಿದ್ದ ಮಾಜಿ ಜಿಪಂ ಸದಸ್ಯರು, ಅಧ್ಯಕ್ಷರಿಗೆ ಬಿಸಿ ಮುಟ್ಟಿಸಿದ್ದಾರೆ.

ವಿರೋಧ ಪಕ್ಷಗಳಿಗೆ ಬಿಸಿ:

ಈಗ ನಿಗದಿಯಾಗಿರುವ ಮೀಸಲಾತಿಯಲ್ಲಿ ಮರು ಆಯ್ಕೆ ಬಯಸಿ ತೀವ್ರ ಹುಮ್ಮಸ್ಸಿನಲ್ಲಿದ್ದ ಹಲವಾರು ಪ್ರಮುಖ ನಾಯಕರು ತಮ್ಮ ಕ್ಷೇತ್ರ ಕಳೆದುಕೊಂಡಿದ್ದಾರೆ. ಅದರಲ್ಲಿಯೂ ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದ ಸಂದರ್ಭದಲ್ಲಿಯೇ ಗದಗ ಜಿಲ್ಲಾ ಪಂಚಾಯ್ತಿಯಲ್ಲಿ ಕಾಂಗ್ರೆಸ್‌ ಸ್ಪಷ್ಟಬಹುಮತದೊಂದಿಗೆ ಅಧಿಕಾರದ ಗದ್ದುಗೆ ಹಿಡಿದಿತ್ತು. ಅದರ ಭಾಗವಾಗಿಯೇ ಇತ್ತೀಚಿಗಷ್ಟೇ ಅಧಿಕಾರ ಮುಗಿಸಿರುವ ಕಾಂಗ್ರೆಸ್ಸಿನ 4 ಜನ ಮಾಜಿ ಜಿಪಂ ಅಧ್ಯಕ್ಷರು ತಮ್ಮ ಕ್ಷೇತ್ರ ಕಳೆದುಕೊಂಡಿದ್ದು, ಚುನಾವಣೆ ಪೂರ್ವದಲ್ಲಿಯೇ ಆಡಳಿತಾರೂಢ ಬಿಜೆಪಿ ಕಾಂಗ್ರೆಸ್‌ ನಾಯಕರಿಗೆ ಭರ್ಜರಿ ಬಿಸಿ ಮುಟ್ಟಿಸಿದೆ.

ಬಿಜೆಪಿ-ಜೆಡಿಎಸ್‌ ತೊರೆದು ನೂರಾರು ಕಾರ್ಯಕರ್ತರು ಕಾಂಗ್ರೆಸ್‌ ಸೇರ್ಪಡೆ

ಕ್ಷೇತ್ರ ಕಳೆದುಕೊಂಡವರು

ಗದಗ ಜಿಪಂನ ಮೊದಲ ಅವಧಿಯ ಅಧ್ಯಕ್ಷರಾಗಿದ್ದ ವಾಸಣ್ಣ ಕುರುಡಗಿ ಅವರು ಪ್ರತಿನಿಧಿಸುತ್ತಿದ್ದ ಸೊರಟೂರ ಕ್ಷೇತ್ರ, ಮೂರನೇ ಅವಧಿಗೆ ಅಧ್ಯಕ್ಷರಾಗಿದ್ದ ಸಿದ್ದಲಿಂಗೇಶ್ವರ ಪಾಟೀಲ ಪ್ರತಿನಿಧಿಸಿದ್ದ ಲಕ್ಕುಂಡಿ, ನಾಲ್ಕನೆ ಅವಧಿಗೆ ಅಧ್ಯಕ್ಷರಾಗಿದ್ದ ರಾಜುಗೌಡ ಕೆಂಚನಗೌಡ ಪ್ರತಿನಿಧಿಸುತ್ತಿದ್ದ ಕೊಣ್ಣೂರು ಕ್ಷೇತ್ರ ಹಾಗೂ ಕೊನೆಯ ಅವಧಿಗೆ ಅಧ್ಯಕ್ಷರಾಗಿದ್ದ ಈರಪ್ಪ ನಾಡಗೌಡರ ಅವರು ಪ್ರತಿನಿಧಿಸುತ್ತಿದ್ದ ಹಿರೇವಡ್ಡಟ್ಟಿ ಕ್ಷೇತ್ರಗಳೆಲ್ಲಾ ಮಹಿಳೆಯರಿಗೆ ಮೀಸಲಾಗಿದ್ದು, ಈ ಎಲ್ಲಾ ನಾಯಕರು ಅತಂತ್ರರಾಗಿದ್ದಾರೆ.

2ನೇ ಅವಧಿಗೆ ಜಿಪಂ ಅಧ್ಯಕ್ಷರಾಗಿದ್ದ ಎಸ್‌.ಪಿ ಬಳಿಗಾರ ಅವರು ಪ್ರತಿನಿಧಿಸುತ್ತಿದ್ದ ಶಿಗ್ಲಿ ಕ್ಷೇತ್ರ ಒಂದು ಮಾತ್ರ ಉಳಿದಿದೆ.

ಹಲವು ಚರ್ಚೆಗೆ ವೇದಿಕೆ:

ಸದ್ಯ ಹೊರಡಿಸಿರುವ ಮೀಸಲಾತಿಯ ಬಗ್ಗೆ ಕೇವಲ ವಿರೋಧ ಪಕ್ಷದಲ್ಲಿ ಮಾತ್ರವಲ್ಲ, ವಿವಿಧ ಸಮುದಾಯಗಳಲ್ಲಿಯೂ ಸಾಕಷ್ಟುಆಕ್ಷೇಪಗಳು ಕೇಳಿ ಬರುತ್ತಿವೆ. ಸ್ವತಃ ಆಡಳಿತಾರೂಢ ಬಿಜೆಪಿಯಲ್ಲಿಯೂ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಇವರಿಗೆ ಕೊಟ್ಟರೆ ಅವರಿಗೆ ಸಿಟ್ಟು, ಅವರಿಗೆ ಕೊಟ್ಟರೆ ಇವರಿಗೆ ಸಿಟ್ಟು ಎನ್ನುವ ಸ್ಥಿತಿ ಇತ್ತು. ಅದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಅವರೆಲ್ಲಾ ಸ್ಪರ್ಧೆ ಮಾಡದಂತೆ ಮೀಸಲಾತಿ ನಿಗದಿ ಮಾಡಲಾಗಿದೆ ಎನ್ನುವ ಚರ್ಚೆಗಳು ಕೇಳಿ ಬರುತ್ತಿವೆ.

ಮುಂದೇನು?

ಸದ್ಯ ರಾಜ್ಯ ಚುನಾವಣಾ ಆಯೋಗ ಹೊರಡಿಸಿರುವ ಮೀಸಲಾತಿಯ ಕರಡು ಪ್ರತಿಯಲ್ಲಿ ಸಮಸ್ಯೆ ಇದೆ ಎಂದು ಆಕಾಂಕ್ಷಿಗಳು ನ್ಯಾಯಾಲಯದ ಮೆಟ್ಟಿಲೇರಬಹುದು. ಇಲ್ಲವೇ ಈ ಹೊಸ ಮೀಸಲಾತಿಯ ಆಧಾರದಲ್ಲಿಯೇ ತಮ್ಮ ಮನೆಯ ಅಥವಾ ತಮ್ಮ ಹಿಂಬಾಲಕರ ಪತ್ನಿಯರನ್ನು ಕಣಕ್ಕಿಳಿಸಬೇಕಾದ ಅನಿವಾರ್ಯವಾಗಿದೆ. ಇದೂ ಸಾಧ್ಯವಾಗದೇ ಇದ್ದಾಗ ಬೇರೆ ಕ್ಷೇತ್ರಗಳನ್ನೇ ಹುಡುಕಿಕೊಳ್ಳಬೇಕಿದೆ.
 

click me!