ಕಾಯ್ದೆಗೆ ತಿದ್ದುಪಡಿ ತಂದು ಇಂಥ ಹೇಳಿಕೆ ನೀಡಿದ ಸಿದ್ದರಾಮಯ್ಯನವರಿಗೂ ಶಿಕ್ಷೆಯಾಗುವಂತೇ ನೋಡಿಕೊಳ್ಳಬೇಕು|ಶೀಘ್ರದಲ್ಲೇ ವಿಜಯನಗರ ಜಿಲ್ಲೆ ಅಧಿಕೃತವಾಗಿ ಅನುಷ್ಠಾನವಾಗಲಿದೆ. ವಿಜಯನಗರ ಜಿಲ್ಲೆ ರಚನೆಗೆ ಆನಂದ್ ಸಿಂಗ್ ಅವರ ಶ್ರಮ ಬಹಳಷ್ಟಿದೆ: ಜಗದೀಶ್ ಶೆಟ್ಟರ್|
ಹೊಸಪೇಟೆ(ಜ.14): ಮಾಜಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರು ಗೋಮಾಂಸ ತಿನ್ನುತ್ತೇವೆ ಎಂದು ಬಹಿರಂಗ ಹೇಳಿಕೆ ನೀಡುವುದು ಸರಿಯಲ್ಲ. ಕಾಯ್ದೆಗೆ ತಿದ್ದುಪಡಿ ತಂದು ಇಂಥ ಹೇಳಿಕೆ ನೀಡಿದ ಸಿದ್ದರಾಮಯ್ಯನವರಿಗೂ ಶಿಕ್ಷೆಯಾಗುವಂತೇ ನೋಡಿಕೊಳ್ಳಬೇಕು ಎಂದು ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ನಗರದ ಖಾಸಗಿ ಹೋಟೆಲ್ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜನಸೇವಕ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಗೋಕಾಯ್ದೆ ವಿರೋಧ ಮಾಡುವ ವಿಷಯ ಬೇರೆ. ಆದರೆ ಗೋಮಾಂಸ ತಿನ್ನುತ್ತೇವೆ ಎನ್ನುವ ಹೇಳಿಕೆ ನೀಡಿದ್ದಾರೆ. ಅವರಿಗೆ ನಾಚಿಕೆಯಾಗಬೇಕು. ದೇಶದಲ್ಲಿ 100 ಕೋಟಿ ಹಿಂದೂಗಳಿದ್ದಾರೆ. ಸಿದ್ದರಾಮಯ್ಯನವರೇ ಹಿಂದೂಗಳು ಸುಮ್ಮನೇ ಕೂರುವುದಿಲ್ಲ. ಮುಂದಿನ ಅಧಿವೇಶನದಲ್ಲಿ ಇಂಥ ಹೇಳಿಕೆ ನೀಡುವವರಿಗೂ ಶಿಕ್ಷೆಯಾಗುವಂತೇ ಕಾಯ್ದೆಗೆ ತಿದ್ದುಪಡಿ ತರಬೇಕು. ಸಿದ್ದರಾಮಯ್ಯನವರಿಗೂ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಅವರಿಗೆ ವೇದಿಕೆಯಲ್ಲೇ ಸಲಹೆ ನೀಡಿದರು.
ಅಂತಿಮ ಯಾತ್ರೆ:
ಕಾಂಗ್ರೆಸ್ ಸಂಕಲ್ಪ ಯಾತ್ರೆ ಮಾಡುತ್ತಿಲ್ಲ. ತನ್ನ ಅಂತಿಮ ಯಾತ್ರೆ ಮಾಡುತ್ತಿದೆ. ಕಾಂಗ್ರೆಸ್‌ಗೆ ಜನಬೆಂಬಲ ಇಲ್ಲ. ಕಾಂಗ್ರೆಸ್ ಕುಟುಂಬ ರಾಜಕೀಯ ಮಾಡುತ್ತಿದೆ. ಗಾಂಧಿ ಕುಟುಂಬಕ್ಕೆ ಸೀಮಿತವಾಗಿದೆ. ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಮಹತ್ತರ ಸಾಧನೆ ಮಾಡಿದೆ. ಬಿಜೆಪಿ ಬೆಂಬಲಿತರು 3100ಕ್ಕೂ ಅಧಿಕ ಪಂಚಾಯಿತಿಯಲ್ಲಿ ಯಾರ ನೆರವು ಇಲ್ಲದೇ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದರು.
ಬಳ್ಳಾರಿ ಜಿಲ್ಲೆ ವಿಭಜನೆಗೆ ಕಾಂಗ್ರೆಸ್ ವಿರೋಧ
ಹತ್ತು ಸ್ಥಾನಗಳಲ್ಲಿ ಗೆಲುವು:
2023ರ ವಿಧಾನಸಭೆ ಚುನಾವಣೆಯಲ್ಲಿ ಅಖಂಡ ಬಳ್ಳಾರಿ ಜಿಲ್ಲೆಯ ಹತ್ತು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತೇವೆ. ಮುಂಬರುವ ಜಿಪಂ, ತಾಪಂ ಚುನಾವಣೆಯಲ್ಲೂ ಬಿಜೆಪಿ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದರು. ಅರಣ್ಯ ಹಾಗೂ ಪರಿಸರ ಸಚಿವ ಆನಂದ್ ಸಿಂಗ್ ಮಾತನಾಡಿ, ಗ್ರಾಪಂ ಸದಸ್ಯರು ಜನರ ಸೇವೆ ಮಾಡಬೇಕು. ಸರ್ಕಾರ ಕೂಡ ಜನರ ಸೇವೆಗೆ ಕಟಿಬದ್ಧವಾಗಿದೆ. ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದರು.
ಮಹಿಳಾ ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಕೇವಲ ಒಂದು ಬಟನ್ ಒತ್ತುವುದರ ಮೂಲಕ ಪ್ರಧಾನಿ ಮೋದಿ ಅವರು ದೇಶಾದ್ಯಂತ ರೈತರ ಖಾತೆಗೆ ಹಣ ಹಾಕಿದ್ದಾರೆ. ಗ್ರಾಪಂ ಚುನಾವಣೆಗಳಲ್ಲಿ ವಿಜಯಶಾಲಿಗಳಾಗಿರುವ ಮಹಿಳಾ ಅಭ್ಯರ್ಥಿಗಳು ನಿಮ್ಮ ಯಜಮಾನರನ್ನು ಆಡಳಿತಕ್ಕೆ ಬಿಡದೇ ಕೇವಲ ಬೆಂಬಲ ಮಾತ್ರ ಪಡೆದು ಧೈರ್ಯವಾಗಿ ಮುನ್ನುಗ್ಗಿ ಆಡಳಿತ ನಡೆಸಿ ಎಂದು ಸಲಹೆ ನೀಡಿದರು.
ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಮಾತನಾಡಿ, ಮುಂದಿನ ಮುಖ್ಯಮಂತ್ರಿ ಸ್ಥಾನಕ್ಕೆ ಡಿ.ಕೆ. ಶಿವಕುಮಾರ ಮತ್ತು ಸಿದ್ದರಾಮಯ್ಯನವರ ನಡುವೆ ಗುದ್ದಾಟ ನಡೆದಿದೆ. ಆದರೆ, ಕಾಂಗ್ರೆಸ್ ಪಕ್ಷವನ್ನು ಜನರೇ ಮರೆತಿದ್ದಾರೆ. ಗೋಸಂರಕ್ಷಣೆಯೇ ನನ್ನ ಧ್ಯೇಯವಾಗಿದ್ದು, ಗೋವು ಕಡಿದವರನ್ನು ನಾನು ಬಿಡುವುದಿಲ್ಲ. 3 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ .10 ಲಕ್ಷದವರೆಗೂ ದಂಡ ವಸೂಲಿಗೆ ಕಾನೂನನ್ನು ತರಲಾಗಿದೆ ಎಂದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ್ ಮಾತನಾಡಿ, ಕಾಂಗ್ರೆಸ್ ಚೇಲಾಗಳ ಪಾರ್ಟಿಯಾಗಿದೆ. ಬರೀ ಗಾಂಧಿಗಳ ಗುಣಗಾನ ಮಾಡಬೇಕು. ಹೀಗಾಗಿ ಕಲಬುರಗಿಯ ದೊಡ್ಡ ನಾಯಕನನ್ನು ಸೋಲಿಸಿ ನಾವು, ಇಲ್ಲಿಗೆ ಬಂದಿದ್ದೇವೆ ಎಂದರು.
ಕಾರ್ಯಕ್ರಮದ ಆರಂಭದಲ್ಲಿ ನೂತನವಾಗಿ ಆಯ್ಕೆಯಾದ ಗ್ರಾಮ ಪಂಚಾಯತಿ ಸದಸ್ಯರಿಗೆ ಹೂಮಳೆಯನ್ನು ಮುಖಂಡರು ಸುರಿಸಿದರು. ಸಮಾವೇಶದಲ್ಲಿ ಸಂಸದ ವೈ. ದೇವೇಂದ್ರಪ್ಪ, ಮಾಜಿ ಶಾಸಕರಾದ ನೇಮಿರಾಜ್ ನಾಯ್ಕ, ಚಂದ್ರನಾಯ್ಕ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ತೆಂಗಿನಕಾಯಿ, ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ್, ಯುವ ಮೋರ್ಚಾ ಅಧ್ಯಕ್ಷ ಸಂದೀಪ್, ಜಿಲ್ಲಾ ಅಧ್ಯಕ್ಷ ಚನ್ನಬಸನಗೌಡ ಪಾಟೀಲ್, ವಿಭಾಗ ಪ್ರಭಾರಿ ಸಿದ್ದೇಶ್ ಯಾದವ್, ಹುಡಾ ಅಧ್ಯಕ್ಷ ಅಶೋಕ್ ಜೀರೆ, ಮಂಡಲಾಧ್ಯಕ್ಷ ಬಸವರಾಜ ನಾಲತ್ವಾಡ್, ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಕವಿತಾ ಈಶ್ವರ್ ಸಿಂಗ್, ಪ್ರಧಾನ ಕಾರ್ಯದರ್ಶಿ ಅನಿಲ್ ನಾಯ್ಡು, ತಾಲೂಕು ಯುವ ಮೋರ್ಚಾ ಉಪಾಧ್ಯಕ್ಷ ರಾಘವೇಂದ್ರ, ಮುಖಂಡರಾದ ಮಹಿಪಾಲ ರೆಡ್ಡಿ, ವಿರೂಪಾಕ್ಷಗೌಡ ಮತ್ತಿತರರಿದ್ದರು. ಮಂಡಲಾಧ್ಯಕ್ಷರು, ನೂತನ ಗ್ರಾಪಂ ಸದಸ್ಯರು, ಕಾರ್ಯಕರ್ತರು ಇದ್ದರು.
ಶೀಘ್ರವೇ ವಿಜಯನಗರ ಜಿಲ್ಲೆ ಅನುಷ್ಠಾನ
ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಮಾತನಾಡಿ, ಮುಖ್ಯಮಂತ್ರಿಗಳು ವಿಜಯನಗರ ಹೊಸ ಜಿಲ್ಲೆ ಘೋಷಣೆಗೆ ಅಧಿಸೂಚನೆ ನೀಡಿದ್ದಾರೆ. ಶೀಘ್ರದಲ್ಲೇ ವಿಜಯನಗರ ಜಿಲ್ಲೆ ಅಧಿಕೃತವಾಗಿ ಅನುಷ್ಠಾನವಾಗಲಿದೆ. ವಿಜಯನಗರ ಜಿಲ್ಲೆ ರಚನೆಗೆ ಆನಂದ್ ಸಿಂಗ್ ಅವರ ಶ್ರಮ ಬಹಳಷ್ಟಿದೆ ಎಂದರು.
ಮಂಗಳಮುಖಿ ಸುಧಾ ಜೋಗತಿಗೆ ಸನ್ಮಾನ
ಹೊಸಪೇಟೆ ತಾಲೂಕಿನ ಕಲ್ಲಹಳ್ಳಿ ಗ್ರಾಪಂನ ರಾಜಾಪುರ ಮತಕ್ಷೇತ್ರದಿಂದ 622 ಮತಗಳನ್ನು ಪಡೆದು 491 ಮತಗಳ ಅಂತರದಿಂದ ಗೆದ್ದಿರುವ ಮಂಗಳಮುಖಿ ಸುಧಾ ಜೋಗತಿ ಅವರನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಅವರು ವೇದಿಕೆಗೆ ಆಹ್ವಾನಿಸಿ ಸನ್ಮಾನಿಸಿದರು.
ಇಡೀ ಕಾರ್ಯಕ್ರಮ ಕೇಸರಿಮಯ
ವೇದಿಕೆ ಮೇಲಿದ್ದ ಗಣ್ಯರು ಹಾಗೂ ಕಾರ್ಯಕರ್ತರು ಮತ್ತು ಗ್ರಾಪಂ ಸದಸ್ಯರು ಕೂಡ ಕೇಸರಿಪೇಟ ಧರಿಸಿದ್ದರು. ಇಡೀ ಕಾರ್ಯಕ್ರಮ ಕೇಸರಿಮಯವಾಗಿತ್ತು.