ಹಣಕ್ಕಾಗಿ ಅಭ್ಯರ್ಥಿ ಹಾಕಿದ ಜೆಡಿಎಸ್: ಜಮೀರ್ ಆರೋಪ| ಬಿಜೆಪಿ ಬಳಿ 10 ಕೋಟಿ ಪಡೆದು ಎಚ್‌ಡಿಕೆ ಬಳಿಕ ಅಲ್ಪಸಂಖ್ಯಾತ ಅಭ್ಯರ್ಥಿಗೆ ಟಿಕೆಟ್| ಅನುದಾನ ಇಳಿಸಿದ್ದ ಕುಮಾರಸ್ವಾಮಿ| ಗೋ ಹತ್ಯೆ ಬಿಲ್ ಪಾಸ್ ಆಗಲು ಜೆಡಿಎಸ್ಸೇ ಕಾರಣ: ಜಮೀರ್|
ಬಸವಕಲ್ಯಾಣ(ಏ.08): ಅಲ್ಪಸಂಖ್ಯಾತ ಮುಸ್ಲಿಂ ಅಭ್ಯರ್ಥಿ ಗೆಲ್ಲೋ ಕ್ಷೇತ್ರನಾ ಇದು. ಬಿಜೆಪಿ ಬಳಿ 10 ಕೋಟಿ ಪಡೆದು ಅಲ್ಪಸಂಖ್ಯಾತ ಅಭ್ಯರ್ಥಿಗೆ ಟಿಕೆಟ್ ನೀಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜೆಡಿಎಸ್ ಗೆಲುವಿಗಾಗಿ ಹೋರಾಡುತ್ತಿಲ್ಲ, ಬದಲಾಗಿ ಬಿಜೆಪಿ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ. ಧಮ್ ಇದ್ರೆ ಈ ವಿಚಾರವಾಗಿ ಅವರು ನನ್ನ ಜೊತೆ ಬಹಿರಂಗ ಚರ್ಚೆಗೆ ಬರಲಿ ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಸವಾಲೆಸೆದಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಲಿಂಗಾಯತರೇ ಬಹುಸಂಖ್ಯಾತರಿರುವ ಈ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರ ಗೆಲುವು ಸಾಧ್ಯವೇ? ಬೆಳಗಾವಿ, ಮಸ್ಕಿಯಲ್ಲಿ ಅಭ್ಯರ್ಥಿ ಹಾಕದವರು ಬಸವಕಲ್ಯಾಣಕ್ಕೆ ಏಕೆ ಹಾಕಿದ್ರು? ನಾನೂ ಇಲ್ಲೇ ಇದ್ದೇನೆ, ಕುಮಾರಸ್ವಾಮಿ ಅವರೂ ಇಲ್ಲೇ ಇದ್ದಾರೆ. ಎಲ್ಲರ ಮುಂದೆ ಬಹಿರಂಗ ಚರ್ಚೆಗೆ ಬರಲಿ ನೋಡೋಣ ಎಂದು ಸವಾಲು ಹಾಕಿದರು.
ಸಿದ್ದು ಮತ್ತೆ ಸಿಎಂ ಆಗಲಿದ್ದಾರೆ: ಜಮೀರ್
ಮುಂದಿನ ಚುನಾವಣೆಯಲ್ಲಿ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸ್ಪಷ್ಟಬಹುಮತದೊಂದಿಗೆ ಬರಲಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮತ್ತೆ ರಾಜ್ಯದ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಜಮೀರ್ ಅಹ್ಮದ್ ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಗುರು-ಶಿಷ್ಯರ ಕಾಳಗ: ಜಮೀರ್ ಅಹ್ಮದ್ ಖಾನ್‌ಗೆ ಸವಾಲು ಹಾಕಿದ ಕುಮಾರಸ್ವಾಮಿ!
ಮ್ಯಾಚ್ ಫಿಕ್ಸಿಂಗ್:
ಮುಸ್ಲಿಮರ ಮೇಲೆ ಅಷ್ಟೊಂದು ಪ್ರೀತಿ ಇದ್ದರೆ ರಾಮನಗರ, ಚನ್ನಪಟ್ಟಣ, ಹಾಸನ, ಹೊಳೆನರಸೀಪುರದಿಂದ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ಕೊಟ್ಟು ಗೆಲ್ಲಿಸಿಕೊಂಡು ಬರಬೇಕಿತ್ತಲ್ಲವೆ? ಜೆಡಿಎಸ್‌ನಲ್ಲಿ ಮುಸ್ಲಿಂ ಸಮುದಾಯಕ್ಕೆ ಏನೂ ಇಲ್ಲ. ಇದೇ ಕಾರಣಕ್ಕೆ ಸಿ.ಎಂ. ಇಬ್ರಾಹಿಂ, ಇಕ್ಬಾಲ್ ಅನ್ಸಾರಿ, ನಬಿ ಹಾಗೂ ಅಜೀಂ ಅವರು ಪಕ್ಷ ಬಿಟ್ಟು ಹೊರಬಂದರು. ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡು ಮುಸ್ಲಿಂ ಮತ ವಿಭಜನೆಗೆ ಹೊರಟಿದ್ದಾರೆ. ಇದು ನೂರಕ್ಕೆ ನೂರು ಮ್ಯಾಚ್ ಫಿಕ್ಸಿಂಗ್. ಲಾಭ ಇಲ್ಲದೆ ಕುಮಾರಸ್ವಾಮಿ ಆಟನೇ ಆಡುವುದಿಲ್ಲ. ಹಣ ತೆಗೆದುಕೊಂಡಿದ್ದು ಸತ್ಯ. ಅವರೇ ಪ್ರೆಸ್‌ಮೀಟ್ ಮಾಡಿ ನಮ್ಮ ಬಳಿ ದುಡ್ಡು ಇಲ್ಲ ಸ್ಪರ್ಧೆಗೆ ಇಳಿಯಲ್ಲ ಎಂದವರು ಹೇಗೆ ಚುನಾವಣೆಗೆ ಅಭ್ಯರ್ಥಿ ಹಾಕಿದರು ಎಂದು ಪ್ರಶ್ನಿಸಿದರು.
ಅನುದಾನ ಇಳಿಸಿದ್ದ ಎಚ್ಡಿಕೆ:
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಅಲ್ಪಸಂಖ್ಯಾತರ ಏಳ್ಗೆಗಾಗಿ 3350 ಕೋಟಿ ಅನುದಾನ ಇಟ್ಟಿದ್ದನ್ನು ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗುತ್ತಿದ್ದಂತೆ 1800 ಕೋಟಿಗೆ ಇಳಿಸಿದರು. ಹಜ್ ಯಾತ್ರಿಕರ ಕಾರ್ಯಕ್ರಮ ಉದ್ಘಾಟನೆಗೆ ಅಂದು ಎರಡೆರೆಡು ಬಾರಿ ಗೈರಾದ್ರು. ಅಷ್ಟೇ ಅಲ್ಲ, ಟಿಪ್ಪು ಜಯಂತಿಯನ್ನು ಬ್ಯಾಂಕ್ವೆಟ್ ಹಾಲ್‌ನಿಂದ ರವೀಂದ್ರ ಕಲಾಕ್ಷೇತ್ರಕ್ಕೆ ಎತ್ತಂಗಡಿ ಮಾಡಲು ಪ್ರಯತ್ನಿಸಿದರು, ಗೋ ಹತ್ಯೆ ಬಿಲ್ ಪಾಸ್ ಆಗಲು ಜೆಡಿಎಸ್ಸೇ ಕಾರಣ ಎಂದು ಜಮೀರ್ ಆರೋಪಿಸಿದರು.