ಉಪಚುನಾವಣೆ ಬಳಿಕ ಕಾಂಗ್ರೆಸ್‌ ಹೇಳ ಹೆಸರಿಲ್ಲದಂತಾಗಲಿದೆ: ವಿಜಯೇಂದ್ರ

By Kannadaprabha News  |  First Published Feb 21, 2021, 3:08 PM IST

ಅಂಜನಾದ್ರಿ ಪರ್ವತ ಅಭಿವೃ​ದ್ಧಿಗೆ ಸರಕಾರದಿಂದ 20 ಕೋಟಿ ಅನುದಾನ| ಮೋದಿ ನಾಯಕತ್ವದಲ್ಲಿ ಅಯೋಧ್ಯಾ ಶ್ರೀರಾಮ ಮಂದಿರಕ್ಕೆ ನಿಧಿ ಸಂಗ್ರಹ ಕಾರ್ಯ ನಡೆದಿದ್ದು, ಇದಕ್ಕೆ ವ್ಯಾಪಕ ಬೆಂಬಲ| ವಿಜಯೇಂದ್ರಗೆ ಬೆಳ್ಳಿ ಗದೆ ನೀಡಿ ಸನ್ಮಾನಿಸಿದ ಕಾರ್ಯಕರ್ತರು| 


ಗಂಗಾವತಿ(ಫೆ.21):  ರಾಜ್ಯದಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಹೀನಾಯ ಸೋಲನುಭವಿಸಿ ಈಗ ಅಡ್ರೆಸ್‌ ಇಲ್ಲದಂತಾಗಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ವ್ಯಂಗ್ಯವಾಡಿದ್ದಾರೆ. 

ತಾಲೂಕಿನ ಅಂಜನಾದ್ರಿ ಪರ್ವತಕ್ಕೆ ಭೇಟಿ ನೀಡಿದ ನಂತರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಈಚೆಗೆ ರಾಜ್ಯದಲ್ಲಿ ಜರುಗಿದ 15 ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ 12 ಕ್ಷೇತ್ರಗಳಲ್ಲಿ ಬಿಜೆಪಿ ಜಯ ಸಾಧಿಸಿದೆ. ಇದರಿಂದ ಕಾಂಗ್ರೆಸ್‌ ಧೂಳೀಪಟವಾಗಿದೆ. ಈಗ ಮಸ್ಕಿ ಮತ್ತು ಬಸವಕಲ್ಯಾಣ ಕ್ಷೇತ್ರಗಳಲ್ಲಿ ಉಪ ಚುನಾವಣೆ ಸಮೀಪಿಸುತ್ತಿದ್ದು, ಇದರಲ್ಲಿ ಕಾಂಗ್ರೆಸ್‌ ಹೇಳ ಹೆಸರಿಲ್ಲದಂತಾಗಲಿದೆ ಎಂದರು.

Latest Videos

undefined

ತಮ್ಮ ತಂದೆ ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ಉತ್ತರ ಕರ್ನಾಟಕ ಜನತೆ ಕಾರಣರಾಗಿದ್ದಾರೆ. ಅವರಿಗೆ ಹಲವಾರು ಕಷ್ಟಗಳು ಬಂದಿದ್ದರೂ ಈ ಭಾಗದ ಆರಾಧ್ಯ ದೈವನಾಗಿರುವ ಅಂಜನಾದ್ರಿ ಆಂಜನೇಯಸ್ವಾಮಿಯೇ ಪರಿಹಾರ ನೀಡಿದ್ದಾರೆ ಎಂದು ಸ್ಮರಿಸಿದರು.

ಅಯೋಧ್ಯೆಯಲ್ಲಿ ಶ್ರೀರಾಮಚಂದ್ರ ಕ್ಷೇತ್ರದಂತೆ ಹನುಮನ ನಾಡು ಎನಿಸಿಕೊಂಡಿರುವ ಅಂಜನಾದ್ರಿ ಪರ್ವತ ಅಭಿವೃ​ದ್ಧಿಗೆ ಸರಕಾರ 20 ಕೋಟಿ ಅನುದಾನ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಅಯೋಧ್ಯಾ ಶ್ರೀರಾಮ ಮಂದಿರಕ್ಕೆ ನಿಧಿ ಸಂಗ್ರಹ ಕಾರ್ಯ ನಡೆದಿದ್ದು, ಇದಕ್ಕೆ ವ್ಯಾಪಕ ಬೆಂಬಲ ದೊರಕಿದೆ. ಹೀಗಿರುವಾಗ ಕೆಲವರು ಟೀಕಿಸುತ್ತಿರುವದು ಸರಿಯಲ್ಲ ಎಂದರು.

BSY ಕುಟುಂಬದ ವಿರುದ್ಧ ಆರೋಪಿಸಿದ್ರೂ ಯತ್ನಾಳ್‌ ಮೇಲೆ ಅಪಾರ ಪ್ರೀತಿ ಇದೆ: ವಿಜಯೇಂದ್ರ

ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ಹೆಚ್ಚಿನ ಮಹತ್ವ ನೀಡಿದ್ದು, ಮುಂಬ​ರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ಬಿಡುಗಡೆ ಮಾಡಲಿದ್ದಾರೆ. ನುಡಿದಂತೆ ನಡೆಯುವ ಎದೆ​ಗಾ​ರಿ​ಕೆ ಮುಖ್ಯಮತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಮಾತ್ರ ಇದೆ ಎಂದು ಸಮರ್ಥಿಸಿಕೊಂಡರು.

ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರಗಳು ಗ್ರಾಮೀಣ ಭಾಗದ ಜನರಿಗೆ ವಿವಿಧ ಯೋಜನೆ ಜಾರಿಗೆ ತಂದಿದ್ದಾರೆ. ಗಂಗಾವತಿ ಕ್ಷೇತ್ರದಲ್ಲಿ ಅಭಿಮಾನಿಗಳು ಅಭೂತಪೂರ್ವ ಸ್ವಾಗತ ನೀಡಿದ್ದಾರೆ. ಈ ನಿಮ್ಮ ಅಭಿಮಾನವನ್ನು ನಾನು ಎಂದೂ ಮರೆಯುವುದಿಲ್ಲ. ಮಸ್ಕಿ ಉಪ ಚುನಾವಣೆಯಲ್ಲಿ ಈ ಭಾಗದ ಕಾರ್ಯಕರ್ತರು ಭಾಗವಹಿಸಿ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕು ಎಂದು ಮನವಿ ಮಡಿದರು. ಇದೇ ಸಂದರ್ಭದಲ್ಲಿ ಕಾರ್ಯಕರ್ತರು ವಿಜಯೇಂದ್ರ ಅವರಿಗೆ ಬೆಳ್ಳಿ ಗದೆ ನೀಡಿ ಸನ್ಮಾನಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಶಾಸಕ ಪರಣ್ಣ ಮುನವಳ್ಳಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಪಕ್ಷದ ಸಂಘಟನೆಗೆ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದಾರೆ. ಸರಕಾರದ ಯೋಜನೆಗಳು ಕಾರ್ಯಗತವಾಗಿದ್ದು, ಮುಂಬರುವ ದಿನಗಳಲ್ಲಿ ಮತ್ತೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುತ್ತದೆ. ಮುಖ್ಯಮಂತ್ರಿಗಳು ಅಂಜನಾದ್ರಿ ಪರ್ವತ ಅಭಿವೃದ್ಧಿಗೆ . 20 ಕೋಟಿ ಅನುದಾನ ನೀಡಿದ್ದಾರೆ ಎಂದು ಸ್ಮರಿಸಿದರು.

ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ರಮೇಶಗೌಡ, ಉಣ್ಣೆ ನಿಗಮದ ಅಧ್ಯಕ್ಷ ಶರಣು ತಳ್ಳಿಕೇರಿ, ಗ್ರಾಪಂ ಅಧ್ಯಕ್ಷೆ ದುರಗಮ್ಮ, ಮಾಜಿ ಶಾಸಕ ಜಿ. ವೀರಪ್ಪ, ಜಿಪಂ ಸದಸ್ಯ ಗವಿಸಿದ್ದಪ್ಪ ಕರಡಿ, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ, ಹೊಸಕೇರಿ ಗಿರೇಗೌಡ, ಸಿ.ವಿ. ಚಂದ್ರಶೇಖರ, ಸಂತೋಷ ಕೆಲೋಜಿ, ಸಾಗರ ಮುನವಳ್ಳಿ, ಅಮರೇಶ ಕರಡಿ, ಎಚ್‌.ಎಂ. ಸಿದ್ದರಾಮಸ್ವಾಮಿ, ಚಂದ್ರಪ್ಪ ಕಲ್ಗುಡಿ, ಉಪ್ಪಾರ, ಪುಷ್ಪಾಂಜಲಿ ಗುನ್ನಾಳ, ನಗರಸಭಾ ಸದಸ್ಯ ವಾಸುದೇವ ನವಲಿ ಉಪಸ್ಥಿತರಿದ್ದರು. ಸಾಗರ ಮುನವಳ್ಳಿ ಸ್ವಾಗತಿಸಿದರು. ನರಸಿಂಗರಾವ್‌ ಕುಲಕರ್ಣಿ ನಿರೂಪಿಸಿದರು.
 

click me!