
ಯಾದಗಿರಿ(ಏ.02): ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ರಾಜ್ಯ ಗೃಹ ಸಚಿವ ಬೊಮ್ಮಾಯಿ ಅವರು ಗುಲಾಮರಂತೆ ವರ್ತಿಸುತ್ತಿದ್ದಾರೆ ಎಂದು ಯಾದಗಿರಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಸ್ಯಾಂಸನ್ ಮಾಳೀಕೇರಿ ಟೀಕಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಜಾರಕಿಹೊಳಿ ವಿರುದ್ಧ ಅತ್ಯಾಚಾರ ಕೇಸ್ ದಾಖಲಾಗಿದೆ. ಆದರೂ ಸರ್ಕಾರ ಆರೋಪಿಯಾಗಿರುವ ಅವರನ್ನು ಬಂಧಿಸಿಲ್ಲ. ಪೊಲೀಸರು ಕೂಡ ಸರ್ಕಾರದ ಅಣತಿಯಂತೆ ನಡೆದುಕೊಳ್ಳುತ್ತಿದ್ದು ಇದು ರಾಜ್ಯದ ದುರಂತ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರು ಬೆಳಗಾವಿಗೆ ತೆರಳಿದಾಗ ಅವರ ಬೆಂಗಾವಲು ಕಾರಿನ ಮೇಲೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬೆಂಬಲಿಗರು ದಾಳಿ ನಡೆಸಿರುವುದು ಖಂಡನೀಯ ಎಂದ ಅವರು, ಡಿಕೆಶಿ ಅವರ ಕಾರು ತಡೆದು ಮುತ್ತಿಗೆ ಹಾಕಲು ಪ್ರಯತ್ನಿಸಿದ್ದಾರೆ. ಅಲ್ಲದೆ ಕಾರಿನ ಮೇಲೆ ಚಪ್ಪಲಿ ಎಸೆದಿದ್ದಾರೆ. ಬೆಂಗಾವಲು ವಾಹನಗಳ ಗಾಜು ಪುಡಿಪುಡಿ ಮಾಡಿ ಪುಂಡಾಟಿಕೆ ಮೆರೆದಿದ್ದಾರೆ. ಈ ಘಟನೆಯನ್ನು ಜಿಲ್ಲಾ ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸುತ್ತದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.
ರಾಸಲೀಲೆ ಪ್ರಕರಣ: 'ಡಿಕೆಶಿಗೂ ಸಿಡಿ ಭಯ ಕಾಡುತ್ತಿದೆ'
ಸಿಡಿ ಪ್ರಕರಣದಲ್ಲಿ ಡಿಕೆಶಿ ಅವರ ಹೆಸರು ಉದ್ದೇಶಪೂರ್ವಕವಾಗಿ ಬಳಸಿಕೊಳ್ಳಲಾಗುತ್ತಿದೆ ಹೊರತು, ಯಾವುದೇ ಪುರಾವೆಗಳಿಲ್ಲ. ರಮೇಶ ಜಾರಕಿಹೊಳಿ ಅವರು ಬಹಿರಂಗವಾಗಿ ಡಿಕೆಶಿ ವಿರುದ್ಧ ಅಸಂವಿಧಾನಿಕ ಶಬ್ದಗಳಿಂದ ನಿಂದಿಸಿರುವುದು. ಅವರ ಸಂಸ್ಕೃತಿ ತೋರಿಸಿಕೊಡುತ್ತದೆ ಎಂದ ಸ್ಯಾಂಸನ್, ಮಾಡಿದ ತಪ್ಪು ಮುಚ್ಚಿಕೊಳ್ಳಲು ಏನೆಲ್ಲಾ ಹೇಳಿಕೆಗಳನ್ನು ನೀಡುತ್ತಾ, ಅನಗತ್ಯವಾಗಿ ಡಿಕೆಶಿ ಅವರ ಹೆಸರು ಪ್ರಸ್ತಾಪಿಸಿದ್ದಾರೆ ಎಂದು ಹರಿಹಾಯ್ದರು.
ಜಾರಕಿಹೊಳಿ ಅವರ ಸೀಡಿ ಪ್ರಕರಣ ಬಯಲಿಗೆ ಬರುತ್ತಿದ್ದಂತೆ, ಇನ್ನುಳಿದ 6 ಜನ ಶಾಸಕರು ಕೋರ್ಟ್‌ಗೆ ಮೊರೆಹೋಗಿ ತಮ್ಮ ವಿರುದ್ಧ ಯಾವುದೇ ಮಾನಹಾನಿಗೆ ಸಂಬಂಧಿಸಿದ ಸುದ್ದಿ ಬಿತ್ತರಿಸಬಾರದೆಂದು ತಡೆಯಾಜ್ಞೆ ತಂದಿದ್ದಾರೆ. ಪೂರ್ವಾಗ್ರಹ ಪೀಡಿತರಾಗಿ ಮಾಡಿದ ತಪ್ಪನ್ನು ಮುಚ್ಚಿಕೊಳ್ಳಲು ಹೊರಟಿರುವ ಶಾಸಕರೂ ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು. ವಿಧಾನಪರಿಷತ್ ಮಾಜಿ ಸದಸ್ಯ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ, ಶ್ರೀನಿವಾಸರೆಡ್ಡಿ ಕಂದಕೂರು, ರಾಘವೇಂದ್ರ ಮಾನಸಗಲ್, ಮರೆಪ್ಪ ಬಿಳ್ಹಾರ್, ಶರಣಪ್ಪ ಕೂಡ್ಲೂರ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.