ಸೀಡಿ ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿ ತಕ್ಷಣ ಅರೆಸ್ಟ್ ಆಗಲಿ ಎಂದು ಆಗ್ರಹಿಸಲಾಗಿದೆ. ಸದ್ಯ ಪ್ರಕರಣದ ವಿಚಾರಣೆ ನಡೆಯುತ್ತಿದ್ದು ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ.
ಚಿಕ್ಕಮಗಳೂರು (ಮಾ.31): ಅತ್ಯಾಚಾರ ಪ್ರಕರಣದಲ್ಲಿ ದೂರು ದಾಖಲಾಗಿರುವ ಹಿನ್ನೆಲೆಯಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಕೂಡಲೇ ಬಂಧಿಸಬೇಕು ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ.ಎಲ್.ಮೂರ್ತಿ ಆಗ್ರಹಿಸಿದರು.
ಅತ್ಯಾಚಾರಕ್ಕೆ ಸಂಬಂಧಿಸಿದ ಸಿಡಿ ಪ್ರಕರಣವನ್ನು ಹೈಕೋರ್ಟ್ ಮುಖ್ಯ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ತಾನು ಮಾಡದಿರುವ ತಪ್ಪಿಗೆ ಸಿಲುಕಿಸಿದ್ದಾರೆ ಎಂದು ಹೇಳುವ ರಮೇಶ್ ಜಾರಕಿಹೊಳಿ ಜನರನ್ನು ದಾರಿ ತಪ್ಪಿಸಲು ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸ್ ಇಲಾಖೆ ಕಣ್ಣುಮುಚ್ಚಿ ಕುಳಿತಿದೆ. ಸರ್ಕಾರ ಸತ್ತುಹೋಗಿದೆ. ಸಾಂವಿಧಾನಿಕ ಅಧಿಕಾರವಿರುವ ಮಹಿಳಾ ಆಯೋಗ ಕೂಡ ಮೌನವಾಗಿದೆ. ಇದೆಲ್ಲ ದೇಶ ದ್ರೋಹದ ಕೆಲಸ ಆಗುತ್ತದೆ ಎಂದರು.
ಸಂತ್ರಸ್ತೆ ಹೇಳಿಕೆ ದಾಖಲು ಮಾಡಿಕೊಳ್ಳುವುದು ಹೇಗೆ? ಕಾನೂನು ಮಾನದಂಡಗಳು
ಡಿ.ಕೆ.ಶಿವಕುಮಾರ್ ಅವರಿಗೆ ಬೆದರಿಕೆ ಹಾಕಿದಾಕ್ಷಣ ಶಾಸಕರು ಸಾಚ ಆಗಲು ಸಾಧ್ಯವಿಲ್ಲ, ಪ್ರಜಾತಂತ್ರದ ಮೌಲ್ಯ ಉಳಿಯಬೇಕಾದರೆ ಮಂತ್ರಿ ಸ್ಥಾನಕಷ್ಟೇ ಅಲ್ಲ, ಶಾಸಕ ಸ್ಥಾನಕ್ಕೂ ರಾಜಿನಾಮೆ ಸಲ್ಲಿಸಿ ನೈತಿಕತೆ ಉಳಿಸಿಕೊಳ್ಳಬೇಕು. ಬುದ್ಧಿಜೀವಿಗಳು, ಪ್ರಜಾತಂತ್ರದ ಬಗ್ಗೆ ಕಾಳಜಿ ಇರುವವರು ಇಂತಹ ಪ್ರಕರಣಗಳನ್ನು ಪಕ್ಷಾತೀತವಾಗಿ ಖಂಡಿಸಬೇಕು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ ಮಾತನಾಡಿ, ರಮೇಶ್ ಜಾರಕಿಹೊಳಿ ಅವರನ್ನು ಬಂಧಿಸಿ ವಿಚಾರಣೆ ನಡೆಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾ ವಕ್ತಾರ ಎಚ್.ಎಸ್. ಪುಟ್ಟಸ್ವಾಮಿ, ರೂಬಿನ್ ಮೊಸೆಸ್, ಪವನ್ ಉಪಸ್ಥಿತರಿದ್ದರು.