ನಾವು ಯಾವ ವಿಚಾರದ ಬಗ್ಗೆಯೂ ಚರ್ಚೆ ಮಾಡಿಲ್ಲ. ದಯವಿಟ್ಟು ಯಾವುದೇ ವಿವಾದ ಬೇಡ. ಸೌಹಾರ್ದಯುತವಾಗಿ ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಿದ್ದೇವೆ ಅಷ್ಟೆ ಎಂದ ಪಾಟೀಲ್
ವರದಿ: ಆಲ್ದೂರು ಕಿರಣ್ ಏಷ್ಯಾನೆಟ್, ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಸೆ.11): ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನ ರಂಭಾಪುರಿ ಮಠಕ್ಕೆ ನಿನ್ನೆ(ಶನಿವಾರ) ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಭೇಟಿ ನೀಡಿ ರಂಭಾಪುರಿ ಶ್ರೀಗಳ ಜೊತೆ ಮಾತುಕತೆ ನಡೆಸಿದ್ದಾರೆ. ರಂಭಾಪುರಿ ಮಠಕ್ಕೆ ಭೇಟಿ ನೀಡಿದ ಎಂ.ಬಿ.ಪಾಟೀಲ್ ಮಠದ ಆವರಣದಲ್ಲಿರುವ ಕ್ಷೇತ್ರನಾಥ ವೀರಭದ್ರಸ್ವಾಮಿ, ಚೌಡೇಶ್ವರಿ ಹಾಗೂ ರೇಣುಕಾಚಾರ್ಯರ ದರ್ಶನ ಪಡೆದರು. ಬಳಿಕ ರಂಭಾಪುರಿ ಮಠದ ಪ್ರಸನ್ನ ವೀರ ಸೋಮೇಶ್ವರ ಶಿವಾಚಾರ್ಯ ಶ್ರೀಗಳ ದರ್ಶನ ಪಡೆದು ಮಾತುಕಥೆ ನಡೆಸಿದರು. ಸುಮಾರು ಅರ್ಧಗಂಟೆಗಳ ಕಾಲ ಎಂ.ಬಿ.ಪಾಟೀಲ್ ಹಾಗೂ ರಂಭಾಪುರಿ ಶ್ರೀಗಳು ಮಾತುಕಥೆ ನಡೆಸಿದರು.
ದಯವಿಟ್ಟು ಯಾವುದೇ ವಿವಾದ ಬೇಡ
ನಾವು ಯಾವ ವಿಚಾರದ ಬಗ್ಗೆಯೂ ಚರ್ಚೆ ಮಾಡಿಲ್ಲ. ದಯವಿಟ್ಟು ಯಾವುದೇ ವಿವಾದ ಬೇಡ ಎಂದು ಮಾಜಿ ಗೃಹ ಸಚಿವ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಹೇಳಿದ್ದಾರೆ. ರಂಭಾಪುರಿ ಶ್ರೀಗಳೊಂದಿಗೆ ಚರ್ಚೆ ಬಳಿಕ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ನಾವು ಯಾವ ವಿಚಾರದ ಬಗ್ಗೆಯೂ ಚರ್ಚೆ ಮಾಡಿಲ್ಲ. ದಯವಿಟ್ಟು ಯಾವುದೇ ವಿವಾದ ಬೇಡ. ಸೌಹಾರ್ದಯುತವಾಗಿ ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಿದ್ದೇವೆ ಅಷ್ಟೆ ಎಂದಿದ್ದಾರೆ. ಸಮಾಜಕ್ಕೆ ಏನು ಬೇಕು, ಸಮಾಜದ ಉನ್ನತಿಗೆ ಏನು ಮಾಡಬೇಕು ಅದನ್ನ ಮಾತನಾಡಿದ್ದೇವೆ ಎಂದರು. ಲಿಂಗಾಯುತ ಒಳ ಪಂಗಡಗಳು ಒಗ್ಗೂಡಬೇಕು. ಮೀಸಲಾತಿ ಸಿಗಬೇಕು ಎಂದರು. ನೆರೆ, ಚಿಕ್ಕಮಗಳೂರು ಸಮಸ್ಯೆ, ಕಸ್ತೂರಿ ರಂಗನ್ ವರದಿ ಬಗ್ಗೆಯೂ ಶ್ರೀಗಳು ಮಾತನಾಡಿದರು ಅಷ್ಟೆ. ಅದನ್ನ ಬಿಟ್ಟು ಬೇರೆ ಏನೂ ಮಾತನಾಡಿಲ್ಲ ಎಂದರು.
ಚಿಕ್ಕಮಗಳೂರು: ದಶಕಗಳಿಂದ ಹದಗೆಟ್ಟ ರಸ್ತೆ: ರಿಪೇರಿಗೆ ಆಗ್ರಹಿಸಿ ರೋಡ್‌ನಲ್ಲಿ ಗಿಡನೆಟ್ಟು ಮಹಿಳೆಯರ ಪ್ರತಿಭಟನೆ
ಸರ್ಕಾರದ ವಿರುದ್ಧ ಕಿಡಿ
ಬಿಜೆಪಿ ಜನಸ್ಪಂದನ ಕಾರ್ಯಕ್ರಮಕ್ಕೆ ಎಂ.ಬಿ ಪಾಟೀಲ್ ವ್ಯಂಗ್ಯವಾಡಿದರು. ಬಿಜೆಪಿಯವರು ಏನು ಸಾಧನೆ ಮಾಡಿದ್ದಾರೆ ಅಂತಾ ಕಾರ್ಯಕ್ರಮ ಮಾಡುತ್ತಿದ್ದಾರೆ ಎಂದು ಪ್ರಶ್ನೆ ಮಾಡಿ ಬೆಂಗಳೂರು ಸ್ವಿಮ್ಮಿಂಗ್ ಫುಲ್ ಆಗಿ ಮಾರ್ಪಟ್ಟಿದೆ.ಆದರೆ ಮುಖ್ಯಮಂತ್ರಿಯವರು ಬೆಂಗಳೂರು ಪೂರ್ತಿ ಮುಳುಗಿಲ್ಲ ಅಂತಾರೆ ಹಾಗಿದ್ರೆ ಬೆಂಗಳೂರು ಪೂರ್ತಿ ಮುಳುಗಬೇಕಾಗಿತ್ತಾ ಎಂದು ಪ್ರಶ್ನೆಮಾಡಿ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ. ಸಿದ್ದರಾಮಯ್ಯನವರ ಆಡಳಿತಾವಧಿಯಲ್ಲಿ 15 ಲಕ್ಷ ಮನೆಗಳನ್ನು ನಿರ್ಮಿಸಲಾಗಿತ್ತು. ಬಿಜೆಪಿಯ 3 ವರ್ಷದ ಅವಧಿಯಲ್ಲಿ ಒಂದೇ ಒಂದು ಮನೆಯನ್ನು ನಿರ್ಮಿಸಿಲ್ಲ ಎಂದು ಹೇಳಿದ ಅವರು ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಿ ಅದರೊಂದಿಗೆ ಹೆಚ್ಚುವರಿ 35 ಯೋಜನೆಗಳನ್ನು ನೀಡಲಾಗಿತ್ತು. ಆದರೆ ಬಿಜೆಪಿಯ ಆಡಳಿತಾವಧಿಯಲ್ಲಿ 3ಲಕ್ಷ ಕೋಟಿಗೂ ಹೆಚ್ಚು ಸಾಲ ಮಾಡಿ ಅದರಲ್ಲಿಯೂ 40% ಕಮಿಷನ್ ಪಡೆಯುತ್ತಿರುವ ಲಜ್ಜೆಗೇಡಿ ಸರ್ಕಾರ ಎಂದು ಕಿಡಿಕಾರಿದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ 3 ವರ್ಷಗಳ ಹಿಂದೆ ಸಂಭವಿಸಿದ ಅತಿವೃಷ್ಟಿಯಲ್ಲಿ ಮನೆ ಕಳೆದುಕೊಂಡವರಿಗೆ ಈವರೆಗೂ ರಾಜ್ಯ ಸರ್ಕಾರ ಮನೆಗಳನ್ನು ನೀಡಿಲ್ಲ, ಬಾಡಿಗೆ ಹಣವನ್ನು ಪಾವತಿಸಿಲ್ಲ. ಇತ್ತೀಚೆಗೆ ಸಂಭವಿಸಿದ ಅತಿವೃಷ್ಟಿಯಲ್ಲಿ ಸಂಕಷ್ಟಕ್ಕೀಡಾಗಿರುವ ಜನರ ರಕ್ಷಣೆ ಮಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದ್ದು ಈ ಎಲ್ಲಾ ವಿಚಾರಗಳನ್ನು ಮುಂಬರುವ ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಚರ್ಚಿಸಿ ಜನರಿಗೆ ನ್ಯಾಯ ಒದಗಿಸುವ ಪ್ರಾಮಾಣಿಕ ಪ್ರಯತ್ನ ನಡೆಸಲಿದ್ದಾರೆ. ಜಿಲ್ಲೆಯ ಮೂಡಿಗೆರೆ ತಾಲ್ಲೂಕು ಊರುಬಗೆ ಗ್ರಾಮದಲ್ಲಿ ಆನೆ ದಾಳಿಗೀಡಾಗಿ ಸಾವಿಗೀಡಾದ ಕಾರ್ಮಿಕ ಅರ್ಜುನ್ ಪರವಾಗಿ ಪ್ರತಿಭಟಿಸಿದ ನಾಗರಿಕರ ಮೇಲೆ ಪೋಲೀಸರು ಲಾಠಿ ಪ್ರಹಾರ ನಡೆಸಿರುವುದು ಖಂಡನೀಯ ಎಂದರು.