* ಸಂದರ್ಭ ಬಂದಾಗ ದಲಿತ ಸಿಎಂ ಬಗ್ಗೆ ರಾಹುಲ್ ನಿರ್ಧಾರ
* ಕಾಂಗ್ರೆಸ್‌ನಲ್ಲಿ ಮುಂದುವರಿದ ದಲಿತ ಸಿಎಂ ಚರ್ಚೆ
* ಕಾಂಗ್ರೆಸ್‌ನಲ್ಲಿ ಮತ್ತೊಮ್ಮೆ ಮುಂದುವರಿದ ದಲಿತ ಸಿಎಂ ವಿಚಾರದ ಚರ್ಚೆ
ಕಲಬುರಗಿ(ಅ.04): ಕಾಂಗ್ರೆಸ್ ಬಹುಮತ ಗಳಿಸಿದರೆ ಪಂಜಾಬ್(Punjab) ರೀತಿ ರಾಜ್ಯದಲ್ಲೂ ದಲಿತ ಸಿಎಂ ಕೇಳುವಂತಾಗಬಹುದು ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಪರಮೇಶ್ವರ ಹೇಳಿಕೆ ನೀಡಿರುವ ಬೆನ್ನಲ್ಲೇ ಇದೀಗ ಹಿರಿಯ ಕಾಂಗ್ರೆಸ್ ಮುಖಂಡ, ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ಸಹ ಇದಕ್ಕೆ ದನಿಗೂಡಿಸಿದ್ದಾರೆ. ದಲಿತರೊಬ್ಬರನ್ನು ಮುಖ್ಯಮಂತ್ರಿ ಮಾಡುವ ಸಂದರ್ಭ ರಾಜ್ಯದಲ್ಲಿ ಒದಗಿ ಬಂದರೆ ಖಂಡಿತ ರಾಹುಲ್ ಗಾಂಧಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಇದರೊಂದಿಗೆ ಕಾಂಗ್ರೆಸ್‌ನಲ್ಲಿ ಮತ್ತೊಮ್ಮೆ ದಲಿತ ಸಿಎಂ ವಿಚಾರದ ಚರ್ಚೆ ಮುಂದುವರಿದಿದೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರು ಡಾ.ಪರಮೇಶ್ವರ್ ಹೇಳಿಕೆ ಬಗ್ಗೆ ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ಅವರು, ಅದನ್ನು ಪರಮೇಶ್ವರ ಅವರಿಗೇ ಕೇಳಬೇಕು. ಯಾಕೆಂದರೆ ಈ ವಿಚಾರ ಅವರೇ ಹೇಳಿದ್ದಾರೆ. ನಾನಿಷ್ಟಂತೂ ಹೇಳುತ್ತೇನೆ. ಪಂಜಾಬ್‌ನಲ್ಲಿ ದಲಿತ(Dalit) ವ್ಯಕ್ತಿಯನ್ನು ಸಿಎಂ ಮಾಡುವಲ್ಲಿ ಸೋನಿಯಾಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ತೆಗೆದುಕೊಂಡ ನಿರ್ಧಾರ ಶ್ಲಾಘನೀಯವಾದುದು. ಅವರನ್ನು ನಾನಿಂದು ತುಂಬು ಹೃದಯದಿಂದ ಅಭಿನಂದಿಸುತ್ತೇನೆ ಎಂದರು.
ಮೋದಿ ಚಿಲ್ಲರೆ ಮನುಷ್ಯ ಅಲ್ಲ, ಚಿನ್ನದ ಗಟ್ಟಿ: ಖರ್ಗೆ ಅವರೇ ಈ ಕೂಡಲೇ ಕ್ಷಮೆಯಾಚಿಸಿ, ಈಶ್ವರಪ್ಪ
ಪಕ್ಷದ ಹೈಕಮಾಂಡ್, ಅದರಲ್ಲೂ ರಾಹುಲ್ ಗಾಂಧಿಯವರು(Rahul Gandhi) ಒಮ್ಮೆ ಒಂದು ವಿಷಯದಲ್ಲಿ ನಿರ್ಣಯ ಕೈಗೊಂಡರೆ ಅದನ್ನು ಸಾಧಿಸುತ್ತಾರೆ. ಅದೇ ಪಂಜಾಬ್‌ನಲ್ಲಾಗಿದೆ. ಇದರಿಂದ ದೇಶಾದ್ಯಂತ ಕಾಂಗ್ರೆಸ್ ಪಕ್ಷ ದಮನಿತ ಸಮೂಹಕ್ಕೆ ಉತ್ತಮ ಸಂದೇಶವೊಂದನ್ನು ರವಾನಿಸಿದಂತಾಗಿದೆ. ಕರ್ನಾಟಕದಲ್ಲಿಯೂ ಅಂತಹ ಸಂದರ್ಭ ಬಂದೊದಗಿದಲ್ಲಿ ಆಗ ಖಂಡಿತ ನಮ್ಮ ಪಕ್ಷದ ವರಿಷ್ಠರು ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆಂಬ ವಿಶ್ವಾಸ ತಮಗಿದೆ.
ಇದೇ ವೇಳೆ ಪ್ರಧಾನಿ ಮೋದಿಯನ್ನು(Narendra Modi) ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡ ಅವರು, ಕೇವಲ ಹೆಸರು ಬದಲಿಸುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು. ಕುಸಿದಿರುವ ಆರ್ಥಿಕ ವ್ಯವಸ್ಥೆ ಸುಧಾರಿಸುವತ್ತ ಗಮನ ಹರಿಸದ ಮೋದಿ ಸಾರ್ವಜನಿಕ ವಲಯದ ಉದ್ಯಮಗಳನ್ನು ಖಾಸಗಿ ವಲಯಗಳಿಗೆ ಮಾರುತ್ತಿದ್ದಾರೆ. ಆಸ್ತಿ ಮಾರಿ ಅಸ್ತಿತ್ವ ತೋರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.