ಹೆಚ್‌ಡಿಕೆ ಕ್ಷೇತ್ರದಲ್ಲಿ ಡಿಕೆಶಿ ರೋಡ್ ಶೋ: ಭೀಮನ ಅಮವಾಸೆಯಂದು ಚಾಮುಂಡೇಶ್ವರಿಗೆ ವಿಶೇಷ ಪೂಜೆ

By Suvarna NewsFirst Published Jul 28, 2022, 8:42 PM IST
Highlights

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಇವತ್ತು ಬೊಂಬೆನಗರಿಯ ಗೌಡಗೆರೆ ಗ್ರಾಮದ ಚಾಮುಂಡೇಶ್ವರಿಯ ಪುಣ್ಯಕ್ಷೇತ್ರಕ್ಕೆ ಭೇಟಿ ಕೊಟ್ಟು, ತಾಯಿಯ ಆಶೀರ್ವಾದ ಪಡೆದರು. 

ವರದಿ:ಜಗದೀಶ್ ಏಷ್ಯಾನೆಟ್ ಸುವರ್ಣನ್ಯೂಸ್, ರಾಮನಗರ
ರಾಮನಗರ: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಇವತ್ತು ಬೊಂಬೆನಗರಿಯ ಗೌಡಗೆರೆ ಗ್ರಾಮದ ಚಾಮುಂಡೇಶ್ವರಿಯ ಪುಣ್ಯಕ್ಷೇತ್ರಕ್ಕೆ ಭೇಟಿ ಕೊಟ್ಟು, ತಾಯಿಯ ಆಶೀರ್ವಾದ ಪಡೆದರು. ಅದಕ್ಕೂ ಮೊದಲು ಹೆಚ್ ಡಿ ಕೆ ಸ್ವಕ್ಷೇತ್ರದಲ್ಲಿ ಭರ್ಜರಿ ರೋಡ್ ಶೋ ನಡೆಸುವ ಮೂಲಕ ಶಕ್ತಿ ಪ್ರದರ್ಶನಕ್ಕೂ ಕೂಡ ಮುಂದಾದ್ರು. ಹೌದು ಇಡಿ ವಿಚಾರಣೆ ಹಾಗೂ ರಾಜಕೀಯ ಅಡತಡೆಗಳ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಇಂದು ದೇವರ ಮೊರೆ ಹೋದ್ರು. ಇಂದು ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಗೌಡಗೆರೆ ಗ್ರಾಮದಲ್ಲಿರೋ ಶ್ರೀ ಚಾಮುಂಡೇಶ್ವರಿ ಪುಣ್ಯಕ್ಷೇತ್ರಕ್ಕೆ ಇವತ್ತು ಕನಕಪುರದ ಬಂಡೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಕುಟುಂಬ ಸಮೇತವಾಗಿ ಕ್ಷೇತ್ರಕ್ಕೆ ಬರುವುದಾಗಿ ಡಿಕೆಶಿ ಪತ್ನಿ ಉಷಾ ಅವರು ಹರಕೆ ಹೊತ್ತಿಕೊಂಡಿದ್ದರಂತೆ. ಜೊತೆಗೆ ಇದೇ 31ರಂದು ಕ್ಷೇತ್ರದಲ್ಲಿ ತಾಯಿ ಚಾಮುಂಡೇಶ್ವರಿಗೆ ಮಹಾಮಸ್ತಕಾಭಿಷೇಕ ಕೂಡ ಇದೆ. ಈ ಹಿನ್ನೆಲೆಯಲ್ಲಿ ಇವತ್ತು ಡಿಕೆ ಶಿವಕುಮಾರ್ ಕ್ಷೇತ್ರಕ್ಕೆ ಭೇಟಿ ಕೊಟ್ಟು ವಿಶೇಷ ಪೂಜೆ ಸಲ್ಲಿಸಿದರು. ತಾಯಿಯ ಬಳಿ ಸಂಕಷ್ಟಗಳೆಲ್ಲ ಪರಿಹಾರವಾಗಲಿ ಎಂದು ಬೇಡಿಕೊಂಡರು. ಇನ್ನು ತಾಯಿ ದರ್ಶನಕ್ಕೂ ಮೊದಲು ಬೊಂಬೆನಗರಿಯಲ್ಲಿ ಭರ್ಜರಿಯಾಗಿ ರೋಡ್ ಶೋ ನಡೆಸಿದರು. ಚನ್ನಪಟ್ಟಣದ ಸಿಲ್ಕ್ ಫಾರ್ಮ್ ನಿಂದ ಗೌಡಗೆರೆವರೆಗೂ ಕೂಡ ತೆರದ ವಾಹನದಲ್ಲಿ ಡಿಕೆಶಿ ಆಗಮಿಸಿದ್ರು. ಇನ್ನೂ ಕೈ ಕಾರ್ಯಕರ್ತರು ಭರ್ಜರಿ ಸ್ವಾಗತ ಕೋರಿ ಬೈಕ್ ಜಾಥಾ ಮೂಲಕ ಡಿಕೆಶಿ ಅವರನ್ನು ಕರೆದುಕೊಂಡು ಬಂದರು. ಮಾರ್ಗದ ಮಧ್ಯೆ ಕಾಂಗ್ರೆಸ್ ಕಾರ್ಯಕರ್ತರು ಹೂವಿನ ಮಳೆ ಸುರಿಸಿ, ಸೇಬಿನ ಹಾರ ಹಾಕಿ ವೆಲ್ ಕಮ್ ಮಾಡಿದ್ರು.

ಇಡಿ ಇರಿತಕ್ಕೆ ಸಿಲುಕಿಸುವ ತಯಾರಿ 

ಅಂದಹಾಗೆ ಈಗಾಗಲೇ ಇಡಿ ವಿಚಾರಣೆ ಎದುರಿಸಿರೋ ಡಿಕೆ ಶಿವಕುಮಾರ್ ಇದೇ 30 ರಂದು ದೆಹಲಿಯಲ್ಲಿ ಇಡಿ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ. ಅದಕ್ಕೂ ಮೊದಲು ತಾಯಿಯ ಆಶೀರ್ವಾದ ಪಡೆದು ಸಂಕಷ್ಟ ದೂರವಾಗಲಿ ಎಂದು ಬೇಡಿಕೊಂಡಿದ್ದಾರೆ. ಇನ್ನು ಕೆಲವರು ಸಾಕಷ್ಟು ಆಸೆ ಪಡ್ತಾ ಇದ್ದಾರೆ. ಬಹಳ ಜನರಿಗೆ  ಆಸೆಯಿದೆ, ಸ್ವಪಕ್ಷದವರೋ ವಿರೋಧ ಪಕ್ಷದವರೋ ಗೊತ್ತಿಲ್ಲ. ಮತ್ತೆ ನನ್ನನ್ನು ಇಡಿ ಯಲ್ಲಿ ಸಿಲುಕಿಸಲು ತಯಾರಿ ನಡೆಯುತ್ತಿದೆ. ಚಾಮುಂಡಿ ತಾಯಿ ಇದ್ದಾಳೆ ನನ್ನನ್ನು ರಕ್ಷಣೆ ಮಾಡಲು. ನಾನೇನಾದ್ರೂ ತಪ್ಪು ಮಾಡಿದ್ರೆ, ತೊಂದರೆ ಮಾಡ್ತಾರೆ. ನಾನೇನು ತಪ್ಪು ಮಾಡಿಲ್ಲ, ಅಂದ್ರೆ ದೇವಿನೇ ಎಲ್ಲಾ ನೋಡಿಕೊಳ್ಳುತ್ತಾಳೆ. ನನ್ನ ಖೆಡ್ಡಾಕ್ಕೆ ತೋಡಲು ಏನು ಬೇಕೊ ಎಲ್ಲಾ ಮಾಡ್ತಾ ಇದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿಯನ್ನೇ ಬಿಟ್ಟಿಲ್ಲ ನನ್ನನ್ನು ಬಿಡ್ತಾರ ಎಂದು ಕೇಂದ್ರ ಸರ್ಕಾರದ ವಿರುದ್ದ ಇದೇ ವೇಳೆ ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆ ಒಂದಿಲ್ಲೊಂದು ಸಂಕಷ್ಟಕ್ಕೆ ಸಿಲುಕಿರೋ ಕನಕಪುರದ ಬಂಡೆ ತಾಯಿಯ ಮೊರೆ ಹೋಗುವ ಮೂಲಕ ಸಂಕಷ್ಟದಿಂದ ದೂರ ಮಾಡುವಂತೆ ಬೇಡಿಕೊಂಡಿದ್ದಾರೆ, ಮತ್ತೊಂದೆಡೆ ಹೆಚ್‌ಡಿಕೆ ಸ್ವಕ್ಷೇತ್ರದಲ್ಲಿ ರೋಡ್ ಶೋ ನಡೆಸುವ ಮೂಲಕ ಟಾಂಗ್ ಕೊಟ್ಟಿದ್ದಾರೆ.

click me!