ಲಾಕ್‌ಡೌನ್‌: ಮೃತ ತಂದೆಯ ಹೆಸರಲ್ಲಿ ಪಾಸ್‌ ಪಡೆದ ಭೂಪ!

By Kannadaprabha News  |  First Published Apr 19, 2020, 7:33 AM IST

ಮೃತಪಟ್ಟಿರುವ ತಂದೆಯ ಅಂತ್ಯಸಂಸ್ಕಾರದ ಸುಳ್ಳು ಕಾರಣ ಹೇಳಿ ಜಿಲ್ಲಾಡಳಿತದಿಂದ ಪಾಸ್‌ ಪಡೆದ ಕಾಂಗ್ರೆಸ್‌ ಮುಖಂಡ| ಈತನ ವಿರುದ್ಧ ಕ್ರಮಕ್ಕೆ ಸಾರ್ವಜನಿಕರ ಆಗ್ರಹ| ಮಹಿಳೆಯನ್ನು ಬೆಂಗಳೂರಿನಲ್ಲಿ ಬಿಟ್ಟು ಬರಲೆಂದೇ ಸೋಮಲಿಂಗ ಯಲಿಗಾರ ಪಾಸ್‌ ತೆಗೆದುಕೊಂಡಿದ್ದಾರೆ ಎಂಬ ಆರೋಪ|


ಹುಬ್ಬಳ್ಳಿ(ಏ.19): ಕೆಲ ವರ್ಷದ ಹಿಂದೆಯೇ ಮೃತಪಟ್ಟಿರುವ ತಂದೆಯ ಅಂತ್ಯಸಂಸ್ಕಾರದ ಸುಳ್ಳು ಕಾರಣ ಹೇಳಿ ಕಾಂಗ್ರೆಸ್‌ ಮುಖಂಡನೊಬ್ಬ ಜಿಲ್ಲಾಡಳಿತದಿಂದ ಪಾಸ್‌ ಪಡೆದು ದುರುಪಯೋಗ ಪಡಿಸಿಕೊಂಡ ಪ್ರಕರಣ ಬೆಳಕಿಗೆ ಬಂದಿದೆ. ಜತೆಗೆ ಏಕಮುಖ ಸಂಚಾರಕ್ಕೆ ಮಾತ್ರ ಅನುಮತಿ ಇದ್ದರೂ ಮರಳಿ ಬಂದಿದ್ದಾನೆ. ಕೂಡಲೇ ಈತನ ವಿರುದ್ಧ ಕ್ರಮಕೈಗೊಳ್ಳಬೇಕೆಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.

ಕಾಂಗ್ರೆಸ್‌ ಮುಖಂಡ ಸೋಮಲಿಂಗ ಯಲಿಗಾರ ಎಂಬವರೇ ತಮ್ಮ ತಂದೆಯ ಹೆಸರಿನಲ್ಲಿ ಪಾಸ್‌ ಪಡೆದುಕೊಂಡು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಅವರು ಬೆಂಗಳೂರಿಗೆ ಹೋಗಬೇಕಿತ್ತು. ಅದಕ್ಕೆ ನಾಲ್ಕೈದು ವರ್ಷದ ಹಿಂದೆ ಮೃತಪಟ್ಟಿದ್ದ ತನ್ನ ತಂದೆ ನೀಲಪ್ಪ ಯಲಿಗಾರ ಮೃತಪಟ್ಟಿದ್ದಾರೆ, ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಬೇಕೆಂದು ಅರ್ಜಿ ಸಲ್ಲಿಸಿದ್ದಾರೆ. 

Tap to resize

Latest Videos

ಕೊರೋನಾ ಆತಂಕ: ಜಿಲ್ಲಾಡಳಿತಕ್ಕೀಗ ಮುಲ್ಲಾನ ಓಣಿಯದ್ದೇ ದೊಡ್ಡ ಸವಾಲು..!

ಜಿಲ್ಲಾಡಳಿತ ಕೂಡಲೇ ಅವರು ಸೇರಿದಂತೆ ಐವರಿಗೆ ಪ್ರಯಾಣಿಸಲು ಅನುಮತಿ ನೀಡಿದೆ. ಇದರೊಂದಿಗೆ ಅಲ್ಲಿಗೆ ಹೋದರೆ ಮರಳಿ ಬರುವಂತಿಲ್ಲ, ಮರು ಪ್ರಯಾಣಕ್ಕೆ ಅನುಮತಿ ಇಲ್ಲ ಎಂದು ನಮೂದಿಸಿ ಪಾಸ್‌ ಮಂಜೂರು ಮಾಡಲಾಗಿದೆ. ಆದರೂ ಬೆಂಗಳೂರಿನಿಂದ ಹುಬ್ಬಳ್ಳಿಗೆ ಮರಳಿದ್ದಾರೆ. ಲಾಕ್‌ಡೌನ್‌ ಪಾಸ್‌ ದುರುಪಯೋಗ ಮಾಡಿರುವ ಸೋಮಲಿಂಗ ಯಲಿಗಾರ ದಾವಣಗೆರೆ ಪೊಲೀಸರಿಗೂ ತಪಾಸಣೆ ವೇಳೆ ಚಳ್ಳೆ ಹಣ್ಣು ತಿನ್ನಿಸಿದ್ದಾರೆ.

ಮಹಿಳೆಯೊಬ್ಬರನ್ನು ಬೆಂಗಳೂರಿಗೆ ಬಿಟ್ಟು ಬಂದಿದ್ದಾರೆ. ಮಹಿಳೆಯನ್ನು ಬೆಂಗಳೂರಿನಲ್ಲಿ ಬಿಟ್ಟು ಬರಲೆಂದೇ ಅವರು ಪಾಸ್‌ ತೆಗೆದುಕೊಂಡಿದ್ದು ಎಂದು ಮೂಲಗಳು ತಿಳಿಸಿವೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕ ವಲಯದಲ್ಲಿ ಆಗ್ರಹಿಸಲಾಗಿದೆ.

ಲಾಕ್‌ಡೌನ್‌ ಸಂದರ್ಭದಲ್ಲಿ ಲಕ್ಷ್ಮೇಶ್ವರದಿಂದ ಯುವಕನೊರ್ವ ತನ್ನ ತಂದೆಯ ಅಂತಿಮ ಸಂಸ್ಕಾರಕ್ಕೆ ಹುಬ್ಬಳ್ಳಿಗೆ ಬರಲು ಸಾಧ್ಯವಾಗಿಲ್ಲ. ಪಾಸ್‌ಗಳು ಅವಶ್ಯಕತೆ ಇರುವವರಿಗಿಂತ ಇಂತಹ ದುರುಪಯೋಗ ಮಾಡಿಕೊಳ್ಳುವವರ ಕೈಗೆ ಹೇಗೆ ಸಿಗುತ್ತಿವೆ ಎಂಬ ಸಂಶಯ ಎಡೆ ಮಾಡಿಕೊಟ್ಟಿದೆ. ಈ ಕುರಿತಂತೆ ಕೂಡಲೇ ತನಿಖೆ ನಡೆಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ನಾನು ಪಾಸ್‌ ಪಡೆದಿದ್ದು ನಿಜ. ನಮ್ಮ ಮಾವ ತೀರಿಕೊಂಡಿದ್ದರು. ಅಗತ್ಯ ಇರುವುದಕ್ಕೆ ಪಾಸ್‌ ಪಡೆದಿದ್ದೆ. ಆದರೆ ನಾವು ತುಮಕೂರಿಗೆ ತೆರಳುವಷ್ಟರಲ್ಲೇ ಅಂತ್ಯಸಂಸ್ಕಾರ ಮುಗಿದಿತ್ತು. ಅಲ್ಲಿಂದ ಹಾಗೆ ವಾಪಸ್‌ ಬಂದಿದ್ದೇನೆ. ನಾನೇನು ತಪ್ಪು ಮಾಡಿಲ್ಲ ಎಂದು ಕಾಂಗ್ರೆಸ್‌ ಮುಖಂಡ ಸೋಮಲಿಂಗ ಯಲಿಗಾರ ಹೇಳಿದ್ದಾರೆ. 
 

click me!