ಇಲ್ಲಿ ರಾಜಕೀಯ ಪಕ್ಷಗಳ ರಾಜಕೀಯವು ಜೋರಾಗಿದೆ. ಬಿಜೆಪಿಗರ ಬಸ್ ರೆಸಾರ್ಟ್‌ನತ್ತ ಹೊರಟಿದ್ದು ಕಾಂಗ್ರೆಸಿಗರು ಸಿದ್ಧವಾಗುತ್ತಿದ್ದಾರೆ.
ವರದಿ : ನಾಗರಾಜ ಎಸ್.ಬಡದಾಳ್
ದಾವಣಗೆರೆ (ಫೆ.19): ದಾವಣಗೆರೆ ಮೇಯರ್ ಚುನಾವಣೆ ಬೆನ್ನಲ್ಲೇ ಬಿಜೆಪಿ ಜೊತೆ ಗುರುತಿಸಿಕೊಂಡಿದ್ದ ಒಬ್ಬ ಪಕ್ಷೇತರ ಸದಸ್ಯೆ ಹಾಗೂ ಪತಿ ಪಕ್ಷದ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಎಚ್ಚೆತ್ತ ಆಡಳಿತ ಪಕ್ಷ ತನ್ನ ಸದಸ್ಯರು, ಪಕ್ಷೇತರರ ಪೈಕಿ 13 ಜನರನ್ನು ಕುಟುಂಬ ಸಮೇತ ಘಟ್ಟದ ಜಿಲ್ಲೆಯ ರೆಸಾರ್ಟ್‌ಗೆ ಕಳಿಸಿದರೆ, ಹೇಗಾದರೂ ಪಾಲಿಕೆ ಕೈ ವಶಕ್ಕೆ ತಂತ್ರ ಹೆಣೆದಿರುವ ಕಾಂಗ್ರೆಸ್ ಸಹ ಇದೀಗ ರೆಸಾರ್ಟ್‌ನತ್ತ ಚಿತ್ತ ಹರಿಸಿದೆ.
ಮೇಯರ್-ಉಪ ಮೇಯರ್ ಸ್ಥಾನಕ್ಕೆ ಫೆ.24ಕ್ಕೆ ಚುನಾವಣೆ ನಡೆಯಲಿದೆ. ಎಲ್ಲ ಅಂದುಕೊಂಡಂತೆಯೇ ಆದರೆ, ಈ ಸಲದ ಮೇಯರ್ ಚುನಾವಣೆ ‘ಕೂದಲೆಳೆಯ ಅಂತರ’ದ ಫಲಿತಾಂಶಕ್ಕೆ ಕಾರಣವಾದರೂ ಅಚ್ಚರಿ ಇಲ್ಲ. ಇದಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ಹೆಣೆಯುತ್ತಿರುವ ತಂತ್ರ-ಪ್ರತಿತಂತ್ರಗಳೇ ಕಾರಣ. ಬಿಜೆಪಿ ನಾಲ್ವರು ಪಕ್ಷೇತರರ ಬಲವನ್ನೂ ನೆಚ್ಚಿತ್ತು. ಆದರೆ, ಒಬ್ಬ ಸದಸ್ಯೆ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ತಡವಾಗಿಯಾದರೂ ಎಚ್ಚೆತ್ತಿದೆ.
ಬಿಜೆಪಿ ಭರ್ಜರಿ ಪ್ರವೇಶ : ಕಮಲ ಪಾಳಯಕ್ಕೆ ಬಂಪರ್ .
ಪಕ್ಷೇತರರಾದ ಮಹಿಳೆ ಸದಸ್ಯೆ ಮತ್ತು ಪತಿ ಬಿಜೆಪಿ ಮುಖಂಡರ ಸಂಪರ್ಕಕ್ಕೆ ಸಿಕ್ಕಿಲ್ಲ. ಮನೆ ಬಳಿ ಹೋಗಿ ಬಂದರೂ ಯಾರೂ ಸಿಕ್ಕಿಲ್ಲ. ಕೊನೆಗೆ ಇದು ಎದುರಾಳಿಗಳು ಹೆಣೆದ ರಾಜಕೀಯ ತಂತ್ರ ಎಂಬುದು ಮನವರಿಕೆಯಾಗುತ್ತಲೇ ಉಳಿದ 20 ಸದಸ್ಯರ ಪೈಕಿ 13 ಜನರನ್ನು ಕುಟುಂಬ ಸಮೇತ ಘಟ್ಟದ ಜಿಲ್ಲೆಯ ರೆಸಾರ್ಟ್‌ಗೆ ಕಳಿಸಿದೆ. ಒಂದು ಐಷಾರಾಮಿ ಖಾಸಗಿ ಬಸ್‌ನ ಜೊತೆಗೆ 2-3 ಖಾಸಗಿ ವಾಹನಗಳು ಎಸ್ಕಾರ್ಟ್‌ಗೆಂಬಂತೆ ಬಸ್ ಅನ್ನು ರಿಂಗ್ ರಸ್ತೆ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಿಂಬಾಲಿಸಿವೆ. ಬಿಜೆಪಿ ಹಿರಿಯ ನಾಯಕರೊಬ್ಬರಿಗೆ ಸೇರಿದ ಸ್ಥಳದಿಂದ ಗುರುವಾರ ಬೆಳಗ್ಗೆಯಷ್ಟೇ ಒಬ್ಬ ಪಕ್ಷೇತರ ಸದಸ್ಯೆ ಸೇರಿ 13 ಜನ ಸದಸ್ಯರು, ಕುಟುಂಬ ಸಮೇತ ಹೊರಟು ನಿಂತರು.
ಇತ್ತ ಕಾಂಗ್ರೆಸ್ ಪಾಳೆಯವೂ ಕಣ್ಣು ಮುಚ್ಚಿ ಕುಳಿತಿಲ್ಲ. ಎದುರಾಳಿ ಪ್ರತಿ ತಂತ್ರ ಹೆಣೆಯಬಹುದೆಂಬ ಕಾರಣಕ್ಕೆ ಶುಕ್ರವಾರ ಅಥವಾ ಶನಿವಾರ ತನ್ನ ಸದಸ್ಯರನ್ನು ಕುಟುಂಬ ಸಮೇತರಾಗಿ ದೂರದ ಜಿಲ್ಲೆಯ ರೆಸಾರ್ಟ್‌ಗೆ ಕಳಿಸಿ, ಚುನಾವಣೆಯ ಹಿಂದಿನ ದಿನವೇ ನಗರಕ್ಕೆ ವಾಪಸ್ ಕರೆ ತರುವುದು ಅಥವಾ ಫೆ.24ರಂದು ನೇರವಾಗಿ ಪಾಲಿಕೆಗೆ ಕರೆ ತರುವ ಯೋಜನೆ ರೂಪಿಸಿದೆ. ಸದ್ಯದ ಮಟ್ಟಿಗೆ ಎರಡೂ ಪಕ್ಷಗಳ ಕಡೆಯಿಂದಲೂ ಜಿದ್ದಿಗೆ ಬಿದ್ದಂತೆ ಪಾಲಿಕೆ ಅಧಿಕಾರಕ್ಕಾಗಿ ತಂತ್ರ-ಪ್ರತಿ ತಂತ್ರ ಹೆಣೆಯಲಾಗುತ್ತಿದೆ. ಒಬ್ಬ ಪಕ್ಷೇತರ ಸದಸ್ಯೆ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಬಿಜೆಪಿ ಸಹ ಸಾಕಷ್ಟುಚಿಂತಿತವಾಗಿದ್ದು, ಕಾಂಗ್ರೆಸ್ ಸಹ ಎಚ್ಚರಿಕೆ ಹೆÜಜ್ಜೆ ಇಡುತ್ತಿದೆ.
ಘಟ್ಟದ ಜಿಲ್ಲೆಯ ರೆಸಾರ್ಟ್‌ಗೆ ಮೇಯರ್ ಸ್ಥಾನಾಕಾಂಕ್ಷಿಗಳು, ಒಬ್ಬ ಪಕ್ಷೇತರ ಸದಸ್ಯೆ ಸೇರಿ ಒಟ್ಟು 13 ಜನ ಪಾಲಿಕೆ ಸದಸ್ಯರು, ಕುಟುಂಬ ಸದಸ್ಯರು ಬಸ್, 2-3 ಖಾಸಗಿ ವಾಹನಗಳಲ್ಲಿ ಪಯಣ ಬೆಳೆಸಿದ್ದು, ಯಾವುದೇ ಕಾರಣಕ್ಕೂ ಮೊಬೈಲ್ ಬಳಕೆ ಮಾಡದಂತೆ, ವಾಟ್ಸ್‌ಆ್ಯಪ್, ಫೇಸ್‌ಬುಕ್ ಬಳಸದಂತೆಯೂ ಮೌಖಿಕ ಸೂಚನೆ ನೀಡಲಾಗಿದೆ. ಮೇಯರ್ ಸಹ ಪಕ್ಷದ ಕಾರ್ಯ ನಿಮಿತ್ತ ಅನ್ಯ ರಾಜ್ಯಕ್ಕೆ ತೆರಳಿದ್ದು, ಉಳಿದಂತೆ ಇಬ್ಬರು ಪಕ್ಷೇತರರು ಸೇರಿ 6 ಸದಸ್ಯರು ರೆಸಾರ್ಟ್‌ಗೆ ಹೋಗಿಲ್ಲ. ಈ ಪೈಕಿ ಇಬ್ಬರು ಪಕ್ಷೇತರರು ದಾವಣಗೆರೆಯಲ್ಲೇ ಉಳಿದಿರುವುದು ಇದೀಗ ಕಾಂಗ್ರೆಸ್ಸಿನ ಲೆಕ್ಕಾಚಾರ ಮತ್ತಷ್ಟುಚುರುಕುಗೊಳ್ಳಲು ಕಾರಣವಾಗಿದೆ.
ಒಟ್ಟು 45 ಸದಸ್ಯ ಬಲದ ಪಾಲಿಕೆಯಲ್ಲಿ ಕಾಂಗ್ರೆಸ್ಸಿನ ಒಬ್ಬ ಸದಸ್ಯರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರಿಂದಾಗಿ ಪಾಲಿಕೆ ಸದಸ್ಯರ ಸಂಖ್ಯೆ 44ಕ್ಕೆ ಇಳಿದಿದೆ. ಇದರಲ್ಲಿ ನಾಲ್ವರು ಪಕ್ಷೇತರರೂ ಸೇರಿ ಬಿಜೆಪಿ ಬಲ 21 ಇದ್ದು, ಕಾಂಗ್ರೆಸ್ ಸದಸ್ಯ ಬಲ ಒಬ್ಬ ಪಕ್ಷೇತರ ಸೇರಿ 21, ಜೆಡಿಎಸ್ 1 ಸದಸ್ಯ ಬಲ ಹೊಂದಿದೆ. ಬಿಜೆಪಿ ಬೆಂಬಲಿಸಿದ್ದ ಒಬ್ಬ ಸದಸ್ಯರು ಸಂಪರ್ಕಕ್ಕೆ ಸಿಗದಿದ್ದುದು, ಉಳಿದ ಮೂವರು ಪಕ್ಷೇತರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾದ ಅನಿವಾರ್ಯತೆಯು ಚಿಂತೆ ಹೆಚ್ಚಿಸಿದರೆ, ಮಿತ್ರ ಜೆಡಿಎಸ್ ಬಲದೊಂದಿಗೆ 22 ಸದಸ್ಯ ಬಲದ ವಿಶ್ವಾಸದಲ್ಲಿರುವ ಕಾಂಗ್ರೆಸ್ಸಿಗೂ ತನ್ನದೇ ಪಕ್ಷದ ಸದಸ್ಯರು ಯಾವಾಗ ಏನು ಮಾಡುತ್ತಾರೋ ಎಂಬ ಆತಂಕ, ದುಗುಡವೂ ಒಳಗೊಳಗೆ ಕಾಡುತ್ತಿದೆ.
ಗಾಜಿನ ಮನೆಯಲ್ಲಿದ್ದವರು ಮತ್ತೊಬ್ಬರ ಮನೆಗೆ ಕಲ್ಲು ಒಗೆಯಬಾರದೆಂಬ ಮಾತಿದೆ. ಅದೇ ರೀತಿ ಈಗ ಬಿಜೆಪಿ-ಕಾಂಗ್ರೆಸ್ಸಿನ ಪರಿಸ್ಥಿತಿಯೂ ಇದೆ. ಎಚ್ಚರಿಕೆಯ ಹೆಜ್ಜೆ ಇಡುವ ನಿಟ್ಟಿನಲ್ಲಿ 13 ಜನರನ್ನು ಘಟ್ಟದ ಜಿಲ್ಲೆಗೆ ಕಳಿಸಿದರೂ, ಇಲ್ಲಿಯೇ ಉಳಿದ ಮೇಯರ್, 2 ಜನ ಪಕ್ಷೇತರರೂ ಸೇರಿ ತನ್ನ 6 ಸದಸ್ಯರಿಗೆ ಜಾಗ್ರತೆಯಿಂದ ಇರುವಂತೆ ಹೇಳುವ ಜೊತೆಗೆ ನಿರಂತರ ಸಂಪರ್ಕದಲ್ಲಿರುವಂತೆ ಸೂಚಿಸಿದೆ. ಮತ್ತೊಂದು ಕಡೆ ಒಳಗೊಳಗೆ ಪಕ್ಷೇತರರು, ಆಡಳಿತ ಪಕ್ಷದವರ ಸಂಪರ್ಕದಲ್ಲಿರುವ ಕಾಂಗ್ರೆಸ್ ಸಹ ತನ್ನವರನ್ನು ರೆಸಾರ್ಟ್‌ಗೆ ಕಳಿಸುವ ಯೋಜನೆ ರೂಪಿಸಿದೆ. ಒಟ್ಟಾರೆ, ಫೆ.24ರ ಮೇಯರ್ ಚುನಾವಣೆ ಮಾತ್ರ ರಣರೋಚಕವಾಗುವುದಂತೂ ಸತ್ಯ.
ಒಟ್ಟು 44 ಪಾಲಿಕೆ ಸದಸ್ಯರು, 1 ಸಂಸದರು, 2 ಶಾಸಕರು, 11 ಎಂಎಲ್ಸಿಗಳು ಸೇರಿ ಒಟ್ಟು 58 ಮತದಾರರಿದ್ದಾರೆ. ಇದರಲ್ಲಿ 4 ಜನ ಪಕ್ಷೇತರರು ಸೇರಿ 21 ಸದಸ್ಯರು, 1 ಸಂಸದ, 1 ಶಾಸಕ, 7 ಎಂಎಲ್ಸಿಗಳನ್ನು ಸೇರಿ 30 ಸದಸ್ಯ ಬಲ ಬಿಜೆಪಿಗೆ ಇದ್ದು, ಈಗ ಒಬ್ಬ ಸದಸ್ಯರು ಸಂಪರ್ಕಕ್ಕೆ ಸಿಗದಿರುವುದೇ ಆಡಳಿತ ಪಕ್ಷದ ಚಿಂತೆ ಹೆಚ್ಚಿಸಿದೆ. ಒಬ್ಬ ಪಕ್ಷೇತರ ಸೇರಿ 22 ಸದಸ್ಯರು, ಒಬ್ಬ ಶಾಸಕರು, 4 ಎಂಎಲ್ಸಿಗಳು ಹಾಗೂ ಮಿತ್ರ ಪಕ್ಷ ಜೆಡಿಎಸ್‌ನ 1 ಸದಸ್ಯರನ್ನು ಸೇರಿ 28 ಸದಸ್ಯ ಬಲದ ಲೆಕ್ಕಾಚಾರ, ಮತದಾರರ ಪಟ್ಟಿಗೆ ಸೇರ್ಪಡೆಯಾದ ಒಬ್ಬ ಸಚಿವ, ಎಂಎಲ್ಸಿ ಪ್ರಕರಣ ಫೆ.29ಕ್ಕೆ ಹೈಕೋರ್ಟ್‌ನಲ್ಲಿ ಫೆ.19ಕ್ಕೆ ವಿಚಾರಣೆ ಇದ್ದು, ತೀರ್ಪು ಬರುವ ವಿಶ್ವಾಸದಲ್ಲಿ ಕೈಪಡೆ ಇದೆ.
ಬಿಜೆಪಿ ಜೊತೆಗಿರುವ ಪಕ್ಷೇತರರ ಜೊತೆಗಿನ ಮಾತು, ಆಡಳಿತ ಪಕ್ಷದ ಅತೃಪ್ತರ ಮಾತುಕತೆ ಲಾಭ ತಂದುಕೊಟ್ಟೀತೇನೋ ಎಂಬ ನಿರೀಕ್ಷೆ ಕಾಂಗ್ರೆಸ್ಸಿನದ್ದಾಗಿದೆ. ರಾಜಕೀಯ ಎದುರಾಳಿ ಏನೇ ತಂತ್ರ ಹೆಣೆದರೂ ಪ್ರತಿತಂತ್ರ ಹೆಣೆದಿರುವ ಬಿಜೆಪಿ ಸಹ ಅಷ್ಟೇ ದೊಡ್ಡ ಮಟ್ಟದ ಹೊಡೆತ ನೀಡುವುದಕ್ಕೂ ತೆರೆ ಮರೆಯಲ್ಲೇ ಸಿದ್ಧತೆ ನಡೆಸಿದೆ. ಹೇಗಾದರೂ ಮಾಡಿ ಅಧಿಕಾರಕ್ಕೆ ಬರಲು ಕೈ ಪಾಳೆಯ ಎಲ್ಲ ತಂತ್ರ ಮಾಡಿದೆ. ಕಾಂಗ್ರೆಸ್ಸಿನ ಇದೇ ಲೆಕ್ಕಾಚಾರ ಈಗ ಬಿಜೆಪಿ ತಲೆ ನೋವು ತಂದಿದೆ. ಕಾಂಗ್ರೆಸ್ಸಿಗೆ ಎದುರೇಟು ನೀಡಲು ಬಿಜೆಪಿ ಸಹ ದೊಡ್ಡ ಮಟ್ಟದಲ್ಲೇ ಗಾಳ ಹಾಕಿರುವುದೂ ಸುಳ್ಳೇನಲ್ಲ