ಅತ್ತ ಸಂಸದ ಡಿಕೆ ಸುರೇಶ್ ಚುರುಕಾಗಿದ್ದು ಇತ್ತ ಜೆಡಿಎಸ್ ಶಾಸಕಿ ಅನಿತಾ ಕುಮಾರಸ್ವಾಮಿ ಬಿರುಸಾಗಿದ್ದಾರೆ. ಇದೆಲ್ಲದರ ನಡುವೆ ಬಿಜೆಪಿ ತಣ್ಣಗಿದೆ.
ವರದಿ : ಎಂ.ಅಫ್ರೋಜ್ ಖಾನ್
ರಾಮನಗರ (ಡಿ.04): ಗ್ರಾಮ ಪಂಚಾಯಿತಿ ಚುನಾವಣೆ ಘೋಷಣೆಯಾದ ಬೆನ್ನ ಹಿಂದೆಯೇ ರಾಜಕೀಯ ಪಕ್ಷಗಳ ನಾಯಕರು ಹಳ್ಳಿಗಳತ್ತ ಮುಖ ಮಾಡಿದ್ದಾರೆ.
ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಗ್ರಾಮ ಸಂಚಾರ ಆರಂಭಿಸಿದ್ದು, ಶಾಸಕರು, ಜಿಪಂ, ತಾಪಂ ಅಧ್ಯಕ್ಷರು ಮತ್ತು ಸದಸ್ಯರು ಹಳ್ಳಿ ಜನರ ಮನೆ ಬಾಗಿಲಿಗೆ ತೆರಳುತ್ತಿದ್ದಾರೆ.
ರಾಮನಗರ ಜಿಲ್ಲೆ ಮೇಲ್ನೋಟಕ್ಕೆ ಮಾತ್ರ ಮೂವರು ಶಾಸಕರನ್ನು ಹೊಂದಿರುವ ಜೆಡಿಎಸ್ನ ಭದ್ರಕೋಟೆಯಂತೆ ಕಾಣುತ್ತಿದೆ. ಕಾಂಗ್ರೆಸ್ ಓರ್ವ ಸಂಸದ, ಶಾಸಕ, ಮೂವರು ವಿಧಾನ ಪರಿಷತ್ ಸದಸ್ಯರು, ಬಿಜೆಪಿಯಲ್ಲಿ ಮೂವರು ವಿಧಾನ ಪರಿಷತ್ ಸದಸ್ಯರು ಇದ್ದಾರೆ. ಜಿಲ್ಲಾ ಪಂಚಾಯಿತಿ, ನಾಲ್ಕು ತಾ.ಪಂ.ಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ. ಪಕ್ಷವನ್ನು ಬಲಿಷ್ಠವಾಗಿ ಸಂಘಟಿಸಲು ಮೂರು ಪಕ್ಷಗಳಿಗೂ ಗ್ರಾಪಂ ಚುನಾವಣೆ ಸವಾಲಾಗಿದೆ. ಚುನಾವಣೆಯಲ್ಲಿ ತಮ್ಮ ಬೆಂಬಲಿಗ ಅಭ್ಯರ್ಥಿಗಳನ್ನು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಿದರೆ ಮುಂದಿನ ದಿನಗಳಲ್ಲಿ ನಡೆಯುವ ದೊಡ್ಡ ಚುನಾವಣೆಗಳನ್ನು ಗೆಲ್ಲುವುದು ಸುಲಭವಾಗಲಿದೆ ಎನ್ನುವುದು ರಾಜಕೀಯ ಪಕ್ಷದವರ ಲೆಕ್ಕಾಚಾರವಾಗಿದೆ.
ಚುರುಕಾದ ಕಾಂಗ್ರೆಸ್ ಪಡೆ:
ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷ ಗ್ರಾಪಂ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಮತ್ತಷ್ಟುಚುರುಕಾಗಿದೆ. ಪ್ರತಿಷ್ಠೆ ಉಳಿಸಿಕೊಳ್ಳುವ ಸಲುವಾಗಿ ಕಾಂಗ್ರೆಸ್ ಮೂರ್ನಾಲ್ಕು ತಿಂಗಳ ಹಿಂದೆಯೇ ಚುನಾವಣೆಗೆ ಸಿದ್ಧತೆ ಆರಂಭಿಸಿತ್ತು. ಪಕ್ಷದ ಮುಖಂಡರು ಗ್ರಾಮಾಂತರದಲ್ಲಿರುವ ಬೆಂಬಲಿಗರ ಮನೆಗೆ ಎಡತಾಕಿ, ಬೇರೆ ಪಕ್ಷದ ಕಡೆಗೆ ವಾಲದಂತೆ ಮನವೊಲಿಸಿದ್ದಾರೆ.
ನಿಂಬೆಹಣ್ಣಿನ ಪ್ರಭಾವ ಹೆಚ್ಚು ದಿನ ಇರಲ್ಲ: ರೇವಣ್ಣಗೆ ಟಾಂಗ್ ..
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಾಜ್ಯಪ್ರವಾಸ ಕೈಗೊಳ್ಳುವ ಹಿನ್ನೆಲೆಯಲ್ಲಿ ಅವರ ಅನುಪಸ್ಥಿತಿಯಲ್ಲಿ ಸಂಸದ ಡಿ.ಕೆ.ಸುರೇಶ್, ಮಾಜಿ ಶಾಸಕರಾದ ಎಚ್.ಸಿ.ಬಾಲಕೃಷ್ಣ, ವಿಧಾನ ಪರಿಷತ್ ಸದಸ್ಯರಾದ ಸಿ.ಎಂ.ಲಿಂಗಪ್ಪ, ಎಸ್.ರವಿ, ಎಚ್.ಎಂ.ರೇವಣ್ಣ, ಜಿಪಂ ಮಾಜಿ ಅಧ್ಯಕ್ಷ ಇಕ್ಬಾಲ್ ಹುಸೇನ್, ಅಧ್ಯಕ್ಷ ಎಚ್.ಎನ್.ಅಶೋಕ್ ಚುನಾವಣೆ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಇವರೆಲ್ಲರು ಹಳ್ಳಿಗಳಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ಸುತ್ತಾಡುತ್ತಾ ವಾತಾವರಣವನ್ನು ಸೂಕ್ಷ್ಮವಾಗಿ ಅರಿಯುತ್ತಿದ್ದಾರೆ.
ಜೆಡಿಎಸ್ನಿಂದ ಬಿರುಸಿನ ತಯಾರಿ :
ಗ್ರಾಪಂ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಜೆಡಿಎಸ್ ಬೇರು ಮಟ್ಟದಲ್ಲಿ ಪಕ್ಷವನ್ನು ಭದ್ರ ಪಡಿಸಿಕೊಳ್ಳುವುದಕ್ಕೆ ಸಿದ್ಧತೆ ನಡೆಸಿದೆ. ಈಗಾಗಲೇ ಹೋಬಳಿವಾರು ಪಕ್ಷದ ಮುಖಂಡರ ಸಭೆ ನಡೆಸಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಚನ್ನಪಟ್ಟಣ ಕ್ಷೇತ್ರದಲ್ಲಿ ಗ್ರಾಮ ಸಂಚಾರ ನಡೆಸುತ್ತಿದ್ದಾರೆ. ಕಳೆದ ಎರಡು ವಾರಗಳಿಂದ ಕ್ಷೇತ್ರದಲ್ಲಿ ಬೀಡು ಬಿಟ್ಟಿರುವ ಶಾಸಕಿ ಅನಿತಾ ಕುಮಾರಸ್ವಾಮಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ನೆಪದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಿದ್ದಾರೆ. ಜನಸಂಪರ್ಕ ಸಭೆಯ ಹೆಸರಿನಲ್ಲಿ ಮತದಾರರ ಮನಗೆಲ್ಲಲು ಮುಂದಾಗಿದ್ದಾರೆ.
ಶಾಸಕ ಎ.ಮಂಜುನಾಥ್ ಹಾಗೂ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ರಾಮನಗರ ಹಾಗೂ ಕನಕಪುರ ಕ್ಷೇತ್ರದ ಗ್ರಾಮೀಣ ಭಾಗದಲ್ಲಿ ಸುತ್ತಾಡಿ ಯುವಕರನ್ನು ಪಕ್ಷದ ಕಡೆ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.
ನಿಧಾನಗತಿಯಲ್ಲಿ ಕಮಲ:
ಬಿಜೆಪಿಯಿಂದ ಜಿಲ್ಲೆಯಲ್ಲಿ ಸಿ.ಪಿ.ಯೋಗೇಶ್ವರ್, ಅ.ದೇವೇಗೌಡ ಹಾಗೂ ಪುಟ್ಟಣ್ಣ ವಿಧಾನ ಪರಿಷತ್ ಸದಸ್ಯರು. ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದಾರೆ. ಇವರೆಲ್ಲರೂ ಗ್ರಾಪಂ ಚುನಾವಣೆಯಲ್ಲಿ ಅಧಿಕ ಸ್ಥಾನಗಳಲ್ಲಿ ಗೆಲ್ಲುವುದಕ್ಕೆ ಪಣ ತೊಟ್ಟಿರುವ ಮಾತುಗಳನ್ನಾಡುತ್ತಿದ್ದಾರೆ. ಆದರೆ, ಜಿಲ್ಲೆಯ ಯಾವ ತಾಲೂಕುಗಳಲ್ಲಿಯೂ ಬಿಜೆಪಿ ಹವಾ ಕಂಡು ಬರುತ್ತಿಲ್ಲ. ಬಿಜೆಪಿಯಿಂದ ಗ್ರಾಪಂ ಚುನಾವಣೆಗೆ ಯಾವುದೇ ತಯಾರಿ ನಡೆದಿರಲಿಲ್ಲ. ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಅವರು ತಮ್ಮ ತಂಡದೊಂದಿಗೆ ಚನ್ನಪಟ್ಟಣ ಹಾಗೂ ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಗ್ರಾಮ ಸ್ವರಾಜ್ಯ ಸಮಾವೇಶದ ಮೂಲಕ ಕಾರ್ಯಕರ್ತರಿಗೆ ಟಾನಿಕ್ ನೀಡಿ ಹೋಗಿದ್ದಾರೆ.
ಚುನಾವಣೆ ಸನಿಹದಲ್ಲಿರುವುದರಿಂದ ರಾಜಕೀಯ ಪಕ್ಷಗಳ ನಾಯಕರು ಬೆಳಗ್ಗೆಯಿಂದ ಸಂಜೆವರೆಗಿನ ಗ್ರಾಮ ಸಂಚಾರದಲ್ಲಿ ಸ್ಥಳೀಯ ಮುಖಂಡರೊಡನೆ ಚರ್ಚಿಸುತ್ತಾ ಗೆಲ್ಲುವ ಅಭ್ಯರ್ಥಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.