ರಾಜ್ಯ ಬಿಜೆಪಿ ಕಾರ್ಯಕಾರಿಣಿ ನಡೀತಿದೆ. ಅದನ್ನ ನಾನು ಸ್ವಾಗತಿಸಲ್ಲ ಖಂಡಿಸೋದು ಇಲ್ಲ| ಅಧಿವೇಶನ ನಡೆಸಲು ಟೈಮ್ ಇಲ್ಲ, ಆದರೆ ಕಾರ್ಯಕಾರಿಣಿ ನಡೆಸುತ್ತಿದ್ದಾರೆ| ಇಡೀ ಮಂತ್ರಿ ಮಂಡಲದವರು ಕನ್ಫ್ಯೂಷನ್‌ನಲ್ಲಿದಾರೆ ಎಂದ ಲಕ್ಷ್ಮೀ ಹೆಬ್ಬಾಳ್ಕರ್|
ಬೆಳಗಾವಿ(ಡಿ.03): ಕಳೆದ ಎರಡು ವರ್ಷಗಳಿಂದ ಉತ್ತರ ಕರ್ನಾಟಕದ ಜನರು ಸತತ ಪ್ರವಾಹದಿಂದ ಕಷ್ಟ ಪಟ್ಟಿದ್ದಾರೆ. ರೈತರು ಸೇರಿ ಎಲ್ಲಾ ವರ್ಗದ ಜನರು ತುಂಬಾ ಸಂಕಷ್ಟದಲ್ಲಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ. ಕಳೆದ ಎರಡು ಚಳಿಗಾಲದ ಅಧಿವೇಶನ ಸುವರ್ಣಸೌಧದಲ್ಲಿ ನಡೆಸಿಲ್ಲ. 400 ರಿಂದ 500 ಕೋಟಿ ಖರ್ಚು ಮಾಡಿ ಸುವರ್ಣಸೌಧ ಕಟ್ಟಿದ್ದಾರೆ. ಆದರೆ ಎರಡು ವರ್ಷಗಳಿಂದ ಸುವರ್ಣಸೌಧದಲ್ಲಿ ಅಧಿವೇಶನ ಕರೆದಿಲ್ಲ. ಸುವರ್ಣಸೌಧವನ್ನು ಬಾರ್ & ರೆಸ್ಟೋರೆಂಟ್ ಮಾಡಿ ಎಂದು ವಾಟ್ಸಪ್‌ಗಳಲ್ಲಿ ಹರದಾಡುತ್ತಿದೆ, ನಗೆಪಾಟಿಲಿಗೀಡಾಗಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಕೆಪಿಸಿಸಿ ವಕ್ತಾರೆ ಹಾಗೂ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹರಿಹಾಯ್ದಿದ್ದಾರೆ.
ಇಂದು(ಶುಕ್ರವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾಳೆ(ಶನಿವಾರ) ಬೆಳಗಾವಿಯಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿ ನಡೀತಿದೆ. ಅದನ್ನ ನಾನು ಸ್ವಾಗತಿಸಲ್ಲ ಖಂಡಿಸೋದು ಇಲ್ಲ. ಅಧಿವೇಶನ ನಡೆಸಲು ಟೈಮ್ ಇಲ್ಲ, ಆದರೆ ಕಾರ್ಯಕಾರಿಣಿ ನಡೆಸುತ್ತಿದ್ದಾರೆ. ಇಡೀ ಮಂತ್ರಿ ಮಂಡಲದವರು ಕನ್ಫ್ಯೂಷನ್‌ನಲ್ಲಿದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿ ಕಾರಿದ್ದಾರೆ.
ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಡ್ಯಾನ್ಸ್ ವಿಡಿಯೋ ವೈರಲ್..!
ರಾಜ್ಯದಿಂದ ಆರಿಸಿ ಹೋದ ಸಂಸದರು ಏನು ಮಾಡುತ್ತಿದ್ದಾರೆ ಗೊತ್ತಿಲ್ಲ. ಈವರೆಗೂ ಎಷ್ಟು ನೆರೆಸಂತ್ರಸ್ತ ರೈತರಿಗೆ ಪರಿಹಾರ ಕೊಟ್ಟಿದಾರೆ. ಇದರ ಬಗ್ಗೆ ಶ್ವೇತಪತ್ರ ಹೊರಡಿಸಲಿ. ಕಾರ್ಯಕಾರಿಣಿ ಸಭೆ ನಡೆಸಲಿ ಅದಕ್ಕೂ ಮೊದಲು ಉತ್ತರ ಕರ್ನಾಟಕಕ್ಕೆ ಏನು ಕೊಟ್ಟಿದಾರೆ ಹೇಳಲಿ. ಕಾರ್ಯಕಾರಿಣಿ ನಡೆಸುತ್ತಾರೆ ಆದರೆ ಅಧಿವೇಶನ ನಡೆಸಲು ಹಿಂದೇಟು ಹಾಕುತ್ತಾರೆ ಎಂದು ತಿಳಿಸಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ 330 ಕೆರೆ ಕಟ್ಟೆಗಳು ಒಡೆದು ಹೋಗಿವೆ. ಪ್ರವಾಹದಿಂದ ಹಲವು ರಸ್ತೆಗಳು ಕೊಚ್ಚಿಕೊಂಡು ಹೋಗಿವೆ. ಇದಕ್ಕೆ ಸಂಬಂಧ ಪಟ್ಟ ಸಚಿವರಿಗೆ ಮನವಿ ಮಾಡಿದ್ರೆ ಕೋವಿಡ್ ಸಂಕಷ್ಟದಿಂದ ದುಡ್ಡಿಲ್ಲ ಅಂತಾರೆ. ಆದ್ರೆ ಬೆಳಗಾವಿಯಲ್ಲಿ ಕಾರ್ಯಕಾರಿಣಿ ಸಭೆ ನಡೆಸಲು ದುಡ್ಡಿದೆಯಾ?. ಬಿಜೆಪಿಯವರು ಚುನಾವಣೆ ನಡೆಸಲು ಮಾತ್ರ ದುಡ್ಡು ಖರ್ಚು ಮಾಡ್ತಾರೆ ಆದರೆ ರಾಜ್ಯದ ಅಭಿವೃದ್ಧಿ ಬಗ್ಗೆ ತಲೆಕೆಡಿಸಿಕೊಳ್ಳಲ್ಲ. ನಮ್ಮ ಜಿಲ್ಲೆಯವರೇ ಜವಳಿ ಸಚಿವರಾಗಿದ್ದಾರೆ. ಆದ್ರೆ ನೇಕಾರರಿಗೆ ಪರಿಹಾರ ಸಿಕ್ಕಿಲ್ಲ. ನಮ್ಮ ಸಮಸ್ಯೆಗಳ ಪರಿಹಾರಕ್ಕೆ ಸುವರ್ಣಸೌಧದಲ್ಲಿ ಅಧಿವೇಶನ ಕರೀಬೇಕಾಗಿತ್ತು, ಆದರೆ ಕೇವಲ ಚುನಾವಣೆ ಗಿಮಿಕ್‌ಗಾಗಿ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.