ಅಧಿಕಾರಕ್ಕಾಗಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ..?

Kannadaprabha News   | Asianet News
Published : Nov 04, 2020, 10:29 AM IST
ಅಧಿಕಾರಕ್ಕಾಗಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ..?

ಸಾರಾಂಶ

ಜೆಡಿಎಸ್‌ ಸಭೆಯಲ್ಲಿ ನಿರ್ಣಯ| ಇಂದು ಕೈ ಮುಖಂಡರೊಂದಿಗೆ ಇನ್ನೊಂದು ಸುತ್ತಿನ ಮಾತುಕತೆ ಬಳಿಕ ಅಂತಿಮ ನಿರ್ಧಾರ| ಧಾರವಾಡ ಜಿಲ್ಲೆಯ ನವಲಗುಂದ ಪುರಸಭೆ| ಹೇಗಾದರೂ ಮಾಡಿ ಅಧಿಕಾರದ ಗದ್ದುಗೆ ಏರಬೇಕೆಂದು ಪ್ರಯತ್ನ ನಡೆಸಿದ ಬಿಜೆಪಿ| 

ನವಲಗುಂದ(ನ.04): ಪಟ್ಟಣದ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಇಂದು(ಬುಧವಾರ) ಚುನಾವಣೆ ನಡೆಯಲಿದ್ದು, ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಇಲ್ಲದಿರುವ ಹಿನ್ನೆಲೆಯಲ್ಲಿ ಮೈತ್ರಿ ನಡೆಸುವುದು ಅನಿವಾರ್ಯವಾಗಿದೆ.

ಇದೀಗ ಜೆಡಿಎಸ್‌- ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡು ಅಧಿಕಾರ ಹಂಚಿಕೊಳ್ಳಲು ಎರಡು ಪಕ್ಷಗಳು ನಿರ್ಧರಿಸಿವೆ ಎಂದು ಮೂಲಗಳು ತಿಳಿಸಿವೆ. ಆದರೆ ಬಿಜೆಪಿ ಅಧಿಕಾರದ ಗದ್ದುಗೆ ಏರುವ ಕೊನೆಯ ಹಂತದ ಪ್ರಯತ್ನವನ್ನು ಮಂಗಳವಾರ ರಾತ್ರಿವರೆಗೂ ಮುಂದುವರಿಸಿತ್ತು.

ಒಟ್ಟು 23 ಸ್ಥಾನಗಳಿರುವ ಪುರಸಭೆಯಲ್ಲಿ ಅಧಿಕಾರದ ಗದ್ದುಗೆ ಏರಲು 13 ಸದಸ್ಯ ಬಲದ ಅಗತ್ಯವಿದೆ. ಬಿಜೆಪಿ-6, ಕಾಂಗ್ರೆಸ್‌-7, ಜೆಡಿಎಸ್‌-9 ಹಾಗೂ ಪಕ್ಷೇತರ-1 ಸ್ಥಾನವನ್ನು ಪಡೆದಿವೆ. ಅಧ್ಯಕ್ಷ ಸ್ಥಾನ ಸಾಮಾನ್ಯ ಮತ್ತು ಉಪಾಧ್ಯಕ್ಷ ಸ್ಥಾನ ಮಹಿಳಾ ಸಾಮಾನ್ಯ ವರ್ಗಕ್ಕೆ ಮೀಸಲಾಗಿವೆ.

ಮೂರು ಪಕ್ಷಗಳು ಬಹುಮತ ಹೊಂದದೆ ಇರುವುದರಿಂದ ಮೈತ್ರಿ ಅನಿವಾರ್ಯ ಎನಿಸಿದೆ. ಅದರಲ್ಲಿ ಜೆಡಿಎಸ್‌ ಬಲವೇ ಹೆಚ್ಚಾಗಿದೆ. ಹಿಂದಿನ ಅವಧಿಯಲ್ಲಿ 3 ಸ್ಥಾನವನ್ನು ಮಾತ್ರ ಗಳಿಸಿದ್ದ ಜೆಡಿಎಸ್‌ ಕಳೆ ಚುನಾವಣೆಯಲ್ಲಿ 9 ಸ್ಥಾನಗಳಲ್ಲಿ ಗೆದ್ದು ಬೀಗಿದೆ. ಒಬ್ಬ ಪಕ್ಷೇತರ ಅಭ್ಯರ್ಥಿ ಕೂಡ ಜೆಡಿಎಸ್‌ಗೆ ಬೆಂಬಲ ಸೂಚಿಸಿದ್ದಾರೆ. ಹೀಗಾಗಿ ಜೆಡಿಎಸ್‌ಗೆ ಅಧಿಕಾರ ಇನ್ನಷ್ಟು ಹತ್ತಿರವಾಗಿದೆ.

'ಕಾಂಗ್ರೆಸ್ಸಿಗರು ಬಣ್ಣ ಬದಲಿಸುವ ಊಸರವಳ್ಳಿ ಇದ್ದಂತೆ'

ಜೆಡಿಎಸ್‌ ಸಭೆ:

ಈ ನಡುವೆ ಹುಬ್ಬಳ್ಳಿಯಲ್ಲಿ ಮಂಗಳವಾರ ಸಭೆ ನಡೆಸಿರುವ ಜೆಡಿಎಸ್‌ ಮುಖಂಡರು, ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳಲು ನಿರ್ಧರಿಸಿದೆ. ಮಾಜಿ ಶಾಸಕ ಎನ್‌.ಎಚ್‌. ಕೋನರಡ್ಡಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಗಿದೆ. ಇನ್ನೂ ಕಾಂಗ್ರೆಸ್‌ ಮುಖಂಡರೊಂದಿಗೆ ಬುಧವಾರ ಬೆಳಗ್ಗೆ ಚರ್ಚಿಸಿ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು ಎಂದು ಕೋನರಡ್ಡಿ ತಿಳಿಸಿದ್ದಾರೆ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಎರಡು ಪಕ್ಷಗಳು ನಿರ್ಧರಿಸಿದಂತಿದೆ. ಅಧ್ಯಕ್ಷಗಿರಿ ಯಾವ ಪಕ್ಷಕ್ಕೆ, ಉಪಾಧ್ಯಕ್ಷಗಿರಿ ಯಾವ ಪಕ್ಷಕ್ಕೆ ಎಂಬುದು ನಿರ್ಣಯವಾಗಬೇಕಿದೆ. ಎರಡು ಪಕ್ಷಗಳು ಅಧ್ಯಕ್ಷಗಿರಿ ತಮಗೆ ಬೇಕೆಂದು ಹೇಳಿಕೊಳ್ಳುತ್ತಿವೆ. ಈ ವಿಷಯವಾಗಿಯೇ ಗುರುವಾರ ಮತ್ತೊಂದು ಸುತ್ತಿನ ಸಭೆ ನಡೆಸಿ ನಿರ್ಧರಿಸಲು ಎರಡು ಪಕ್ಷಗಳ ಮುಖಂಡರು ತೀರ್ಮಾನಿಸಿದ್ದಾರೆ. ಇದರಿಂದಾಗಿ ನವಲಗುಂದ ಪುರಸಭೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಆಡಳಿತ ಬರುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ಬಿಜೆಪಿ ಪ್ರಯತ್ನ:

ಈ ನಡುವೆ ಬಿಜೆಪಿಯೂ ಹೇಗಾದರೂ ಮಾಡಿ ಅಧಿಕಾರದ ಗದ್ದುಗೆ ಏರಬೇಕೆಂದು ಪ್ರಯತ್ನ ನಡೆಸಿದ್ದು, ಕೊನೆಯ ಹಂತದ ಪ್ರಯತ್ನವನ್ನೂ ಮುಂದುವರಿಸಿದೆ. ಬಿಜೆಪಿಗೆ ಏಳು ಸ್ಥಾನಗಳ ಅಗತ್ಯವಿದೆ. ಕಾಂಗ್ರೆಸ್‌ನ ಎಲ್ಲ ಸದಸ್ಯರು ಬೆಂಬಲಿಸಬೇಕು ಇಲ್ಲವೇ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಕೆಲ ಸದಸ್ಯರು ಬೆಂಬಲಿಸಬೇಕು ಅಂದಾಗ ಮಾತ್ರ ಬಿಜೆಪಿ ಅಧಿಕಾರದ ಗದ್ದುಗೆ ಏರಲು ಸಾಧ್ಯ. ಆದರೆ ಇದು ಅಷ್ಟುಸುಲಭವಲ್ಲ ಎಂಬುದು ಬಿಜೆಪಿಗೂ ಗೊತ್ತು. ಆದರೆ ಪ್ರಯತ್ನವನ್ನೂ ಮಾಡಿ ಅದು ಕೈಬಿಟ್ಟಿಲ್ಲ ಎಂದು ಮೂಲಗಳು ತಿಳಿಸಿವೆ.

ಸದ್ಯ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ:

ಪುರಸಭೆ ಅಧಿಕಾರ ಚುಕ್ಕಾಣಿ ಹಿಡಿಯಲು ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆದಿದ್ದು ಕಾಂಗ್ರೆಸಿನಲ್ಲಿ ಮಂಜುನಾಥ ಜಾಧವ, ಜೆಡಿಎಸ್‌ನಲ್ಲಿ ಪ್ರಕಾಶ ಶಿಗ್ಲಿ, ಪಕ್ಷೇತರ ಅಭ್ಯರ್ಥಿಯಾಗಿ ಜೆಡಿಎಸ್‌ಗೆ ಬೆಂಬಲ ನೀಡಿರುವ ಅಪ್ಪಣ ಹಳ್ಳದ, ಬಿಜೆಪಿಯ ಶರಣಪ್ಪ ಹಕ್ಕರಕಿ, ಮಾಂತೇಶ ಕಲಾಲ ಅಧ್ಯಕ್ಷರ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ ಎನ್ನಲಾಗಿದೆ. ಚುನಾವಣೆ ಬಳಿಕವಷ್ಟೆಅಧ್ಯಕ್ಷರಾಗಿ ಯಾರು ಷರಾ ಬರೆಯಲಿದ್ದಾರೆ ಎಂಬುದನ್ನು ಕಾಯ್ದು ನೋಡಬೇಕಷ್ಟೇ.
 

PREV
click me!

Recommended Stories

ದುಬಾರೆ ಶಿಬಿರದಲ್ಲಿ ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ತಕ್ಷ ಹೆಸರಿನ ಆನೆ ಸಾವು
ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ