ರಾಜ್ಯದಲ್ಲಿ ಸಮರ್ಪಕ ವಿದ್ಯುತ್ ನೀಡದೆ ರೈತರ ತೋಟಗಳು ಒಣಗುತ್ತಿವೆ, ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ. ರಾಜ್ಯ ಸರ್ಕಾರಕ್ಕೆ ಜವಾಬ್ದಾರಿ ಇದ್ದರೆ ಕೂಡಲೇ ಕನಿಷ್ಟ 10 ಗಂಟೆಗಳ ಕಾಲ 3 ಫೇಸ್ ವಿದ್ಯುತ್ ನೀಡಬೇಕು ಎಂದು ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಹೇಳಿದರು.
ಶಿರಾ : ರಾಜ್ಯದಲ್ಲಿ ಸಮರ್ಪಕ ವಿದ್ಯುತ್ ನೀಡದೆ ರೈತರ ತೋಟಗಳು ಒಣಗುತ್ತಿವೆ, ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ. ರಾಜ್ಯ ಸರ್ಕಾರಕ್ಕೆ ಜವಾಬ್ದಾರಿ ಇದ್ದರೆ ಕೂಡಲೇ ಕನಿಷ್ಟ 10 ಗಂಟೆಗಳ ಕಾಲ 3 ಫೇಸ್ ವಿದ್ಯುತ್ ನೀಡಬೇಕು ಎಂದು ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಹೇಳಿದರು.
ಕಾಂಗ್ರೆಸ್ ಸರ್ಕಾರ ವಿದ್ಯುತ್ ಲೋಡ್ ಶೆಡ್ಡಿಂಗ್ ಖಂಡಿಸಿ ತಾಲೂಕು ಬಿಜೆಪಿಯಿಂದ ಬೆಸ್ಕಾಂ ಕಚೇರಿ ಮುಂಭಾಗ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ರಾಜ್ಯ ಕಾಂಗ್ರೆಸ್ ಸರ್ಕಾರ ಬರಗಾಲವನ್ನು ಯಾವ ರೀತಿ ಎದುರಿಸಬೇಕು ಎಂಬ ಯಾವುದೇ ತಯಾರಿ ನಡೆಸದೆ. ಧಾರಾಳವಾಗಿ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಯಲು ಬಿಟ್ಟಿರುವುದಲ್ಲದೆ ರಾಜ್ಯದಲ್ಲಿ ಕೇವಲ ಎರಡು ಗಂಟೆ ವಿದ್ಯುತ್ ನೀಡುತ್ತಿದ್ದಾರೆ. ಹತ್ತಾರು ವರ್ಷಗಳಿಂದ ಕಾಪಾಡಿಕೊಂಡು ಬಂದಿರುವ ಅಡಿಕೆ, ತೆಂಗು, ತೋಟಗಾರಿಕಾ ಬೆಳೆಗಳು ಒಣಗುತ್ತಿವೆ. ಜನರು ನಿರೀಕ್ಷೆ ಇಟ್ಟು ಕಾಂಗ್ರೆಸ್ ಪಕ್ಷಕ್ಕೆ ಬಹುಮತ ನೀಡಿದ್ದಾರೆ. ಆದರೆ, ಇವರು ಜನರಿಗೆ ದ್ರೋಹ ಮಾಡುತ್ತಿದ್ದಾರೆ.
undefined
ಬಿಜೆಪಿ ಸರ್ಕಾರದ ಅವಧಿಯಲ್ಲಿ ಬರಗಾಲ, ಪ್ರವಾಹ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರದ ಯಾವುದೇ ಅನುದಾನಕ್ಕೆ ಕಾಯದೆ ರಾಜ್ಯ ಸರ್ಕಾರವೇ ಸಾವಿರಾರು ಕೋಟಿ ರು.ಗಳ ಅನುದಾನ ನೀಡಿದೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರಿಗೆ ಇದು ತಿಳಿದಿಲ್ಲವೆ? ಎಂದು ಪ್ರಶ್ನಿಸಿದ ಅವರು ಜನರಿಗೆ ಉಚಿತ 200 ಯುನಿಟ್ ವಿದ್ಯುತ್ ಎಂದು ಹೇಳಿ ಯಾವುದೇ ಮನೆಗೆ ವಿದ್ಯುತ್ ಸರಿಯಾಗಿ ನೀಡದೆ ಉಚಿತ ಎಂದು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.
ಮಧುಗಿರಿ ವಿಭಾಗದ ಬಿಜೆಪಿ ಅಧ್ಯಕ್ಷ ಬಿ.ಕೆ.ಮಂಜುನಾಥ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲ ಬರಗಾಲ ಬರುತ್ತದೆ ಎಂಬ ಜನರ ಮಾತು ನಿಜವಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದ ಜನರಿಗೆ ವಿದ್ಯುತ್ ಲೋಡ್ ಶೆಡ್ಡಿಂಗ್ ಎನ್ನುವುದೇ ಮರೆತು ಹೋಗಿತ್ತು. ಒಂದು ದಿನವೂ ಯಾವುದೇ ಲೋಡ್ ಶೆಡ್ಡಿಂಗ್ ಮಾಡದೆ ಸಮರ್ಪಕ ವಿದ್ಯುತ್ ನೀಡಿದ್ದಾರೆ. ಆದರೆ ಕಾಂಗ್ರೆಸ್ ಸರ್ಕಾರ ಬೇಜವಾಬ್ದಾರಿಯಿಂದ ಆಡಳಿತ ನಡೆಸುತ್ತಿರುವ ಪರಿಣಾಮ ಸಮರ್ಪಕ ವಿದ್ಯುತ್ ಇಲ್ಲ. ಉತ್ತಮ ಆಡಳಿತ ಇಲ್ಲ ಎಂಬಂತಾಗಿದೆ ಎಂದರು.
ಪ್ರತಿಭಟನೆಯ ನಂತರ ಬೆಸ್ಕಾಂ ಅಧಿಕಾರಿಗಳಿಗೆ ಹಾಗೂ ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಕಾಡುಗೊಲ್ಲ ನಿಗಮದ ಮಾಜಿ ಅಧ್ಯಕ್ಷ ಚಂಗಾವರ ಮಾರಣ್ಣ, ಮಧುಗಿರಿ ವಿಭಾಗದ ಬಿಜೆಪಿ ಒಬಿಸಿ ಘಟಕದ ಅಧ್ಯಕ್ಷ ಆರ್.ಕೆ.ಶ್ರೀನಿವಾಸ, ಮಾಜಿ ತಾ.ಪಂ. ಸದಸ್ಯ ಹೊನ್ನಗೊಂಡನಹಳ್ಳಿ ಚಿಕ್ಕಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ಮುದಿಮಡು ಮಂಜುನಾಥ್, ತಾ.ಪಂ. ಮಾಜಿ ಅಧ್ಯಕ್ಷ ಯಲಿಯೂರು ಮಂಜುನಾಥ್, ನಗರಮಂಡಲ ಅಧ್ಯಕ್ಷ ನಟರಾಜ್, ಗ್ರಾಮಾಂತರ ಅಧ್ಯಕ್ಷ ರಂಗಸ್ವಾಮಿ, ಮಾಜಿ ನಗರಸಭಾ ಸದಸ್ಯ ಸಂತೇಪೇಟೆ ನಟರಾಜ್, ರೈತ ಮುಖಂಡ ಪರಮಶಿವಯ್ಯ, ಶಿರಾ ತಾಲೂಕು ಬಿಜೆಪಿ ಒಬಿಸಿ ಘಟಕದ ಅಧ್ಯಕ್ಷ ಮಲ್ಲಯ್ಯ, ಸಾಮಾಜಿಕ ಜಾಲತಾಣ ಮುಖ್ಯಸ್ಥ ರವಿಕಿರಣ್, ಚಿಕ್ಕನಕೋಟೆ ಕರಿಯಣ್ಣ, ನಾಗಣ್ಣ, ಮೂಗನಹಳ್ಳಿ ರಾಮು, ನಿವೃತ್ತ ಶಿಕ್ಷಕ ಕುಮಾರ್ ಭಾಗವಹಿಸಿದ್ದರು.
ಫೋಟೊ......
16ಶಿರಾ3: ಶಿರಾ ತಾಲೂಕು ಬಿಜೆಪಿಯಿಂದ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ಬೆಸ್ಕಾಂ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಲಾಯಿತು. ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ, ಮಧುಗಿರಿ ವಿಭಾಗದ ಬಿಜೆಪಿ ಅಧ್ಯಕ್ಷ ಬಿ.ಕೆ.ಮಂಜುನಾಥ್ ಹಾಜರಿದ್ದರು.