ಲಿಂಗಾಯತರೂ ನಮ್ಮವರೇ, ಮರಾಠಿಗರೂ ಅಣ್ಣ ತಮ್ಮಂದಿರೇ: ಡಿಕೆಶಿ

By Kannadaprabha NewsFirst Published Apr 9, 2021, 1:37 PM IST
Highlights

ಬಿಜೆಪಿ ಸರ್ಕಾರ ತರಾಟೆಗೆ ತೆಗೆದುಕೊಂಡ ಡಿಕೆಶಿ| ಸಾರಿಗೆ ನೌಕರರ ಮುಷ್ಕರಕ್ಕೆ ನಮ್ಮ ಬೆಂಬಲ| ಸರ್ಕಾರ ಅವರೊಂದಿಗೆ ವರ್ತಿಸುತ್ತಿರುವ ಧೋರಣೆ ಸರಿಯಲ್ಲ. ಅವರ ನೋವು ಆಲಿಸಬೇಕು| ಕೂಡಲೇ ನೌಕರರನ್ನು ಕರೆದು ಮಾತನಾಡಬೇಕು: ಡಿ.ಕೆ.ಶಿವಕುಮಾರ್‌| 

ಬೆಳಗಾವಿ(ಏ.09): ಕಾಂಗ್ರೆಸ್‌ ಜಾತಿ ರಾಜಕಾರಣ ಮಾಡುವುದಿಲ್ಲ. ಏನಿದ್ದರೂ ನೀತಿ ಮೇಲೆ ರಾಜಕಾರಣ ಮಾಡುವ ಮೂಲಕ ಮತ ಕೇಳುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಲಿಂಗಾಯತರು ನಮ್ಮವರೇ, ಮರಾಠರು ನಮ್ಮ ಅಣ್ಣ​, ತಮ್ಮಂದಿರಂತೆ. ನಮಗೆ ಎಲ್ಲರೂ ಒಂದೇ. ಬಿಜೆಪಿಯವರೇ ಅವರನ್ನು ಬೇರೆ ಬೇರೆ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಹಕ್ಕು ಹೊಂದಿರುವ ಎಲ್ಲರೂ ಒಂದೇ. ನಾವೂ ಜಾತಿ ಮೇಲೆ ರಾಜಕಾರಣ ಮಾಡಲ್ಲ, ನೀತಿ ಮೇಲೆ ಮಾಡುತ್ತೇವೆ ಎಂದರು.

ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅವರು, ಈ ಸರ್ಕಾರ ಬಂದ ಮೇಲೆ ಸುವರ್ಣಸೌಧದಲ್ಲಿ ಎರಡು ವರ್ಷದಲ್ಲಿ ಒಂದು ಸಣ್ಣ ಸಭೆ ಕೂಡ ಮಾಡಿಲ್ಲ. ಆಗ ಉಮೇಶ್‌ ಕತ್ತಿ ಪ್ರತ್ಯೇಕ ರಾಜ್ಯ ಮಾಡುತ್ತೇವೆ ಎಂದಿದ್ದರು. ಈಗ ಅವರ ಮಾತೇ ಇಲ್ಲ ಎಂದು ಲೇವಡಿ ಮಾಡಿದರು. ಕೊರೋನಾ ಸಮಯದಲ್ಲಿ ಕಷ್ಟ ಇದ್ದವರಿಗೆ ನ್ಯಾಯ ಕೊಡಲಾಗಿಲ್ಲ. ಆಂತರಿಕ ಕಚ್ಚಾಟ ಶುರುವಾಗಿ ಸರ್ಕಾರದ ಆಡಳಿತ ಯಂತ್ರ ಕುಸಿದುಹೋಗಿದೆ ಎಂದರು.

ನಾನು ಮುಖ್ಯಮಂತ್ರಿ ಆಗಲು ಸಿದ್ಧ: ಯತ್ನಾಳ್‌

ನೌಕರರನ್ನು ವಿಶ್ವಾಸದಲ್ಲಿಟ್ಟುಕೊಂಡು ಕೆಲಸ ಮಾಡಬೇಕು ಕಾಂಗ್ರೆಸ್‌ಗೆ ಯಾವುದೇ ಸ್ಟ್ಯಾಂಡ್‌ ಇಲ್ಲ ಬಸ್‌ಸ್ಟ್ಯಾಂಡ್‌ ರೀತಿ ಆಗಿದೆ ಎಂಬ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ಹೌದು ನಾವು ಬಸ್‌ಸ್ಟ್ಯಾಂಡ್‌ನಲ್ಲೇ ಇರೋದು. ರೈತರ, ಕಾರ್ಮಿಕರ ಜತೆಗೆ. ಅವರು ಮಾತ್ರ ವಿಧಾನಸೌಧದಲ್ಲಿದ್ದಾರೆ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ಸಾರಿಗೆ ನೌಕರರ ನೋವು ಆಲಿಸಿ

ಸಾರಿಗೆ ನೌಕರರ ಮುಷ್ಕರಕ್ಕೆ ನಾವು ಬೆಂಬಲ ಸೂಚಿಸಿದ್ದೇವೆ. ಸರ್ಕಾರ ಅವರೊಂದಿಗೆ ವರ್ತಿಸುತ್ತಿರುವ ಧೋರಣೆ ಸರಿಯಲ್ಲ. ಅವರ ನೋವು ಆಲಿಸಬೇಕು. ಕೂಡಲೇ ನೌಕರರನ್ನು ಕರೆದು ಮಾತನಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. 
 

click me!