15 ಕ್ಷೇತ್ರಗಳಿಗೆ ಉಪಚುನಾವಣೆಗೆ ದಿನಾಂಕ ಗೋಷಣೆಯಾಗಿದೆ, ಮತ್ತೊಂದೆಡೆ ಅನರ್ಹ ಶಾಸಕ ಸ್ಪರ್ಧೆ ವಿಚಾರಣ ಗೊಂದಲದಲ್ಲಿದ್ದು, ಈ ಬಗ್ಗೆ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ನಡೆದಿದೆ. ಇದರ ಮಧ್ಯೆ ಅನರ್ಹ ಶಾಸಕರೊಬ್ಬರು ನಾವು ಕಳೆದುಕೊಂಡಿದ್ದು ಏನೂ ಇಲ್ಲ. ಪಡೆದುಕೊಂಡಿದ್ದೇವೆ. ನಮ್ಮ ತ್ಯಾಗ ಸಾರ್ಥಕವಾಗಿದೆ ಎಂದು ತಮ್ಮ ಮನದಾಳ ಮಾತು ಹಂಚಿಕೊಂಡಿದ್ದಾರೆ.
ಚಿತ್ರದುರ್ಗ, [ಸೆ.24]: ಮೈತ್ರಿ ಸರ್ಕಾರದಲ್ಲಿ ಹಸ್ತಕ್ಷೇಪದಿಂದ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯ ನಿಂತುಹೋಗಿದೆ. ಕುಮಾರಸ್ವಾಮಿ ಅವರು ಕೇವಲ ಜೆಡಿಎಸ್ ಶಾಸಕರಿಗೆ ಅನುದಾಣ ನೀಡುತ್ತಿದ್ದಾರೆ. ಹೀಗಾಗಿ ನಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇವೆ ಎಂದು ಘಂಟಾಘೋಷವಾಗಿ ಹೇಳಿದ್ದ ಹಿರೇಕೇರೂರು ಕಾಂಗ್ರೆಸ್ ಅನರ್ಹ ಶಾಸಕ ಇದೀಗ ಮಾತು ಬದಲಿಸಿದ್ದಾರೆ.
ಚಿತ್ರದುರ್ಗದ ಸಿರಿಗೆರೆಯಲ್ಲಿ ತರಳಬಾಳು ಮಠದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಸಿಎಂ ಆಗಬೇಕೆಂದು 17ಜನ ರಾಜೀನಾಮೆ ನೀಡಿದ್ದೇವೆ. ನಾವು ಕಳೆದುಕೊಂಡಿದ್ದು ಏನೂ ಇಲ್ಲ ಪಡೆದುಕೊಂಡಿದ್ದೇವೆ ಎಂದು ಬಿ.ಸಿ.ಪಾಟೀಲ್ ಸಂತಸ ವ್ಯಕ್ತಪಡಿಸಿದರು.
ಹಿರೇಕೇರೂರು ಕ್ಷೇತ್ರದ ಅಭಿವೃದ್ಧಿಗೆ 270 ಕೋಟಿ ರೂಪಾಯಿ ಹಣ ಬಂದಿದೆ. ನಮ್ಮ ತ್ಯಾಗ ಸಾರ್ಥಕ ಆಗಿದ್ದು, ಕರ್ನಾಟಕಕ್ಕೆ ಮುಂದಿನ ದಿನ ಒಳ್ಳೆ ಕಾಲ ಬರುತ್ತದೆ. ಯಡಿಯೂರಪ್ಪ ಅವರ ಕಾಲ್ಗುಣದಿಂದ ಒಳ್ಳೆಯದಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಳೆದ ವರ್ಷ ಸಿರಿಗೆರೆಗೆ ಬಂದಾಗ ನನ್ನ ಕಾರಿಗೆ ಮುತ್ತಿಗೆ ಹಾಕಿ ಬಿಜೆಪಿ ಸೇರುವಂತೆ ನೀವು ಒತ್ತಾಯಿಸಿದ್ರಿ ಎಂದು ಹಳೆ ಘಟನೆಯನ್ನು ನೆನಪಿಸುವ ಮೂಲಕ ಪರೋಕ್ಷವಾಗಿ ಮುಂದಿನ ದಿನಗಳಲ್ಲಿ ಬಿಜೆಪಿಗೆ ಸೇರುತ್ತೇನೆ ಎನ್ನುವ ಅರ್ಥದಲ್ಲಿ ಹೇಳಿದರು.
ಹರೇಕೇರೂರು ವಿಧಾನಸಭೆಗೆ ಉಪಚುನಾವಣೆ ನಡೆಯಲಿದ್ದು, ಬಿಜೆಪಿಯಿಂದ ಬಿ.ಸಿ ಪಾಟೀಲ್ ಸ್ಪರ್ಧಿಸುವುದು ಖಚಿತವಾಗಿದೆ. ಆದ್ರೆ, ಇವರ ಅರ್ಜಿ ವಿಚಾರಣೆ ಮಾತ್ರ ಸುಪ್ರೀಂಕೋರ್ಟ್ ನಲ್ಲಿ ನಡೆಯುತ್ತಿದೆ.
ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 25ರಂದು ಅನರ್ಹ ಅರ್ಜಿ ವಿಚಾರಣೆಯನ್ನು ಸುಪ್ರಿಂ ಕೈಗೆತ್ತಿಕೊಳ್ಳಲಿದ್ದು, ಅಂದು ಅನರ್ಹರ ರಾಜಕೀಯ ಭವಿಷ್ಯ ಏನಾಗುತ್ತದೆ ಎನ್ನುವುದನ್ನು ಇಡೀ ರಾಜ್ಯವೇ ಕುತೂಹಲದಿಂದ ಕಾದು ನೋಡುತ್ತಿದೆ.