ತಾಪಂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ಪೈಪೋಟಿ| ಕೇವಲ 2 ಸ್ಥಾನ ಹೊಂದಿರುವ ಬಿಜೆಪಿಯಿಂದ ರಾಜಕೀಯ ಲೆಕ್ಕಾಚಾರ ಆರಂಭ| ಕೇಂದ್ರ, ರಾಜ್ಯ ಹಾಗೂ ತಾಲೂಕಿನಲ್ಲಿ ಬಿಜೆಪಿ ನೇತೃತ್ವದ ಆಡಳಿತ|
ಎಸ್.ಎಂ. ಸೈಯದ್
ಗಜೇಂದ್ರಗಡ(ಜು.20): ತಾಲೂಕಿನ ನೂತನ ತಾಲೂಕು ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಸರ್ಕಾರ ಜು. 23 ರಂದು ಚುನಾವಣೆ ದಿನಾಂಕ ನಿಗದಿ ಮಾಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ವಲಯದಲ್ಲಿ ಭರ್ಜರಿ ಪೈಪೋಟಿ ನಡೆದಿದ್ದರೆ ಇತ್ತ ಬಿಜೆಪಿಯಲ್ಲಿ ಭಾಗಶಃ ನಿರಾಶೆಯ ಛಾಯೆ ಆವರಿಸಿದೆ.
ಗಜೇಂದ್ರಗಡ ವ್ಯಾಪ್ತಿಗೆ 6 ತಾಪಂ ಕ್ಷೇತ್ರಗಳು ಬರಲಿದ್ದು 4 ಸ್ಥಾನಗಳಲ್ಲಿ ಕಾಂಗ್ರೆಸ್ ಸದಸ್ಯರಿದ್ದು, ಇನ್ನುಳಿದ 2 ಸ್ಥಾನಗಳಲ್ಲಿ ಬಿಜೆಪಿ ಸದಸ್ಯರಿದ್ದಾರೆ. ಹೀಗಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ ಪ್ರಕಟವಾಗಿರುವ ಮೀಸಲಾತಿಯಂತೆ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ 2ಎ ಗೆ ಮೀಸಲಿದೆ. ಪರಿಣಾಮ ಬಿಜೆಪಿ ಒಬ್ಬರು ಪರಿಶಿಷ್ಟ ಪಂಗಡ ಮಹಿಳಾ ಅಭ್ಯರ್ಥಿ, 3 ಕಾಂಗ್ರೆಸ್‌ನಲ್ಲಿ 2 ಸಾಮಾನ್ಯ ಹಾಗೂ 1 ಪರಿಶಿಷ್ಟ ಮಹಿಳೆ ಇದ್ದಾರೆ. ಹೀಗಾಗಿ ಸಹಜವಾಗಿ ಬಹುಮತ ಇರುವ ಕಾಂಗ್ರೆಸ್ ಅಭ್ಯರ್ಥಿಗಳು ಅಧ್ಯಕ್ಷ ಮತ್ತು ಉಪಾಧ್ಯಾಕ್ಷ ಸ್ಥಾನ ಅಲಂಕರಿಸಲಿದ್ದಾರೆ.
ಮುಂಡರಗಿ: ಶ್ರಾವಣ ಮಾಸದ ಪ್ರವಚನ ಈ ಬಾರಿ ಯುಟ್ಯೂಬ್‌ನಲ್ಲಿ
ಕೇಂದ್ರ, ರಾಜ್ಯ ಹಾಗೂ ತಾಲೂಕಿನಲ್ಲಿ ಬಿಜೆಪಿ ನೇತೃತ್ವದ ಆಡಳಿತವಿದೆ. ಆದರೆ, ನೂತನ ತಾಲೂಕು ಪಂಚಾಯಿತಿಯಲ್ಲಿ ಕೇವಲ 2 ಸ್ಥಾನಗಳನ್ನು ಹೊಂದಿರುವುದರಿಂದ ಬಿಜೆಪಿಯು ರಾಜಕೀಯ ಲೆಕ್ಕಾಚಾರ ಮಾಡುತ್ತಿದೆ. ಆದರೆ, ಹಾಲಕೇರಿ ಗ್ರಾಮ ಘಟಕದ ಕಾಂಗ್ರೆಸ್ ಅಧ್ಯಕ್ಷರಾಗಿರುವ ಎ.ಸಿ. ಪಾಟೀಲ ಅವರ ಸೊಸೆಯಾದ ಜಯಶ್ರೀ ಪಾಟೀಲ ಅವರಿಗೆ ಅಧ್ಯಕ್ಷ ಸ್ಥಾನ ಕೊಡಿಸಲು ಕಸರತ್ತು ನಡೆಸಿದ್ದರೆ, ಇತ್ತ ಲಕ್ಕಲಕಟ್ಟಿ ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜ ಬೆನಕನವಾರಿ ತಮ್ಮ ಪತ್ನಿಗೆ ಅಧ್ಯಕ್ಷ ಅಥವಾ ಉಪಾಧ್ಯಕ್ಷ ಸ್ಥಾನಕ್ಕೆ ಹಾಗೂ ಸೂಡಿ ಭಾಗದ ಹುಲಿಗೆವ್ವ ಶಿರೋಳ ಸಹ ಅಧ್ಯಕ್ಷ ಸ್ಥಾನಕ್ಕೆ ಏರಲು ಒತ್ತಡದ ತಂತ್ರಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.
ಅಧ್ಯಕ್ಷ ಹಾಗೂ ಉಪಾಧ್ಯಕ್ಷ 2 ಸ್ಥಾನವನ್ನು ಮಹಿಳೆಯರಿಗೆ ನೀಡುವ ಸಾಧ್ಯತೆ ಕ್ಷೀಣವಾಗಿದೆ. ಪರಿಣಾಮ ಆಡಳಿತಾತ್ಮಕ ಹಾಗೂ ಪಕ್ಷ ಸಂಘಟನೆ ದೃಷ್ಟಿಯಿಂದ ಪುರುಷನಿಗೆ ಉಪಾಧ್ಯಕ್ಷ ಸ್ಥಾನ ನೀಡುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಿ.ಎಸ್. ಪಾಟೀಲ ಹಾಗೂ ಕಾಂಗ್ರೆಸ್ ವರಿಷ್ಠರ ಜೊತೆಯೂ ನಿಕಟ ಸಂಪರ್ಕ ಹೊಂದಿರುವ ರಾಜೂರ ಕ್ಷೇತ್ರದ ತಾಪಂ ಸದಸ್ಯ ಶಶಿಧರ ಹೂಗಾರ ಅವರಿಗೆ ಉಪಾಧ್ಯಕ್ಷ ಸ್ಥಾನ ಬಹುತೇಕ ಖಚಿತ ಎಂಬ ಚರ್ಚೆಗಳು ಸಾರ್ವಜನಿಕ ವಲಯದಲ್ಲಿವೆ.
ಗಜೇಂದ್ರಗಡ ತಾಪಂ ವ್ಯಾಪ್ತಿಗೆ ಗೋಗೇರಿ, ಕುಂಟೋಜಿ, ರಾಂಪೂರ, ರಾಜೂರ, ಸೂಡಿ, ಲಕ್ಕಲಕಟ್ಟಿ, ಮುಶಿಗೇರಿ, ಶಾಂತಗೇರಿ, ನಿಡಗುಂದಿ, ಹಾಲಕೇರೆ ಗ್ರಾಮಗಳ ಪಂಚಾಯಿತಿಗಳ ವ್ಯಾಪ್ತಿಯ ಅಂದಾಜು 45 ಗ್ರಾಮಗಳು ಬರಲಿವೆ. ಹೀಗಾಗಿ ಗ್ರಾಮಗಳ ಅಭಿವೃದ್ಧಿ ಜೊತೆಗೆ 28 ಇಲಾಖೆಗಳ ಪ್ರಗತಿ ಪರಿಶೀಲನೆ ಜೊತೆಗೆ ಕೆಡಿಪಿ ಮತ್ತು ಸಾಮಾನ್ಯ ಸಭೆಯಲ್ಲಿ ಈ ಭಾಗದ ಸಮಸ್ಯೆಗಳಿಗೆ ತ್ವರಿತಗತಿಯಲ್ಲಿ ಪರಿಹಾರ ಕಂಡುಕೊಳ್ಳಲು ಸಹಕಾರಿ.
ತಾಪಂ ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ಆದರೆ, ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧನಾಗಿದ್ದೇನೆ. ಒಂದು ವೇಳೆ ಸೇವೆ ಪರಿಗಣಿಸಿ ಅವಕಾಶ ನೀಡಿದರೆ ಗ್ರಾಮೀಣ ಅಭಿವೃದ್ಧಿ ಜೊತೆಗೆ ಪಕ್ಷ ಸಂಘಟಿಸಲು ಮತ್ತಷ್ಟು ಶಕ್ತಿ ಸಿಗಲಿದೆ ಎಂದು ತಾಪಂ ಸದಸ್ಯ ಶಶಿಧರ ಹೂಗಾರ ತಿಳಿಸಿದ್ದಾರೆ.
ಹಿಂದಿನಿಂದಲೂ ಸಹ ಬೂತ್ ಮಟ್ಟದಿಂದ ಸಂಘಟನೆ ಜೊತೆಗೆ ಪಕ್ಷದ ಪ್ರಾಮಾಣಿಕ ಕಾರ್ಯಕರ್ತಳಾಗಿ ಕೆಲಸ ಮಾಡಿದ್ದೇವೆ. ಹೀಗಾಗಿ ತಾಪಂ ಅಧ್ಯಕ್ಷ ಸ್ಥಾನದ ಸಿಗಲಿದೆ ಎನ್ನುವ ನಿರೀಕ್ಷೆಯಿದೆ. ಅಂತಿಮವಾಗಿ ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ಬದ್ಧವಾಗಿದ್ದೇನೆ ಎಂದು ತಾಪಂ ಸದಸ್ಯೆ ಜಯಶ್ರೀ ಪಾಟೀಲ ಅವರು ತಿಳಿಸಿದ್ದಾರೆ.