ಗರಿಗೆದರಿದ ರಾಜಕೀಯ ಚಟುವಟಿಕೆ: ಬಿಜೆಪಿ-ಕಾಂಗ್ರೆಸ್‌ ಮೈತ್ರಿ?

By Kannadaprabha NewsFirst Published Jun 28, 2020, 10:00 AM IST
Highlights

ಬಳ್ಳಾರಿ ಜಿಲ್ಲೆಯ ಕೊಟ್ಟೂರು ತಾಪಂ ಅಧ್ಯಕ್ಷ ಪಟ್ಟಗೆ ಬಿಜೆಪಿ-ಕಾಂಗ್ರೆಸ್‌ ಮೈತ್ರಿ?| ಉಭಯ ಮುಖಂಡರ ಸಭೆಯಲ್ಲಿ ನಿರ್ಣಯ| ಬಿಜೆಪಿಗೆ ಅಧ್ಯಕ್ಷ, ಕಾಂಗ್ರೆಸ್‌ಗೆ ಉಪಾಧ್ಯಕ್ಷ ಸ್ಥಾನ| ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರು ಚುನಾವಣೆಗೆ ಮೈತ್ರಿ ಮಾಡಿಕೊಂಡಿರುವುದು ಕುತೂಹಲ ಕೆರಳಿಸಿದೆ|

ಕೊಟ್ಟೂರು(ಜೂ.28): ನೂತನವಾಗಿ ರಚನೆಗೊಂಡಿರುವ ಕೊಟ್ಟೂರು ತಾಲೂಕು ಪಂಚಾಯಿತಿ ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿಗೆ ಮೀಸಲಿರಿಸಿ ಸರ್ಕಾರ ಆದೇಶ ಹೊರಡಿಸಿದೆ. ಚುನಾವಣೆ ದಿನಾಂಕ ನಿಗದಿಯಾಗದೆ ಇದ್ದರೂ ರಾಜಕೀಯ ಚಟುವಟಿಕೆಗಳು ಆರಂಭಗೊಂಡಿವೆ.

ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಏರ್ಪಡುವ ಸಾಧ್ಯತೆ ಇದೆ ಎನ್ನುವಾಗಲೇ ಶುಕ್ರವಾರ ನಡೆದ ರಾಜಕೀಯ ಬೆಳವಣಿಗೆಯಿಂದ ಬಿಜೆಪಿ ಹಾಗೂ ಕಾಂಗ್ರೆಸ್‌ ಹೊಂದಾಣಿಕೆ ಮಾಡಿಕೊಂಡಿದ್ದು, ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಸರ್ವಸಮ್ಮತ ಅಭ್ಯರ್ಥಿಗಳೆಂದು ಇಬ್ಬರನ್ನು ಆಯ್ಕೆ ಮಾಡಲಾಗಿದೆ ಕನ್ನಡಪ್ರಭಕ್ಕೆ ಮೂಲಗಳು ತಿಳಿಸಿವೆ.

ಬಳ್ಳಾರಿ ಜಿಲ್ಲೆಯಲ್ಲಿ ಮತ್ತೆ ಕೊರೋನಾ ಸ್ಫೋಟ: ಬೆಚ್ಚಿಬಿದ್ದ ಜನತೆ

ಬಿಜೆಪಿ ಮತ್ತು ಕಾಂಗ್ರೆಸ್‌ ನಾಯಕರು ಒಟ್ಟುಗೂಡಿ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಗಳು ಹೊರಹೊಮ್ಮಬಹುದು ಎಂಬ ಸುದ್ದಿ ಹರಡುತ್ತಿರುವಾಗಲೇ ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರು ಈ ಚುನಾವಣೆಗೆ ಮೈತ್ರಿ ಮಾಡಿಕೊಂಡಿರುವುದು ಕುತೂಹಲ ಕೆರಳಿಸಿದೆ. ಶುಕ್ರವಾರ ಸಂಜೆ ಜಿಪಂ ಸದಸ್ಯ ಮತ್ತು ಪ್ರಭಾವಿ ಕಾಂಗ್ರೆಸ್‌ ಮುಖಂಡ ಎಂ.ಎಂ.ಜೆ. ಹರ್ಷವರ್ಧನ, ಜಿಲ್ಲಾ ಬಿಜೆಪಿ ಅಧ್ಯಕ್ಷ ಪಿ. ಚನ್ನಬಸವನಗೌಡ, ನಾಗರಕಟ್ಟೆಕೊಟ್ರೇಶಪ್ಪ, ಕೋಗಳಿ ಸಿದ್ಧಲಿಂಗನಗೌಡ, ಪಿ. ಸುಧಾಕರ ಗೌಡ, ಬೋರ್‌ವೆಲ್‌ ಮಂಜಣ್ಣ, ಪಿ.ಎಚ್‌. ಕೊಟ್ರೇಶ, ಹರಾಳು ಗುರುಮೂರ್ತಿ, ತೂಲಹಳ್ಳಿಯ ಅಕ್ಷಯ, ಕೋಣನಹಳ್ಳಿ ಶಂಭಯ್ಯ, ಬತ್ತನಹಳ್ಳಿಯ ಕೊಟ್ರೇಶ, ಐ.ಎಂ. ದಾರುಕೇಶ ಮತ್ತಿತರರು ಸುದೀರ್ಘ ಚರ್ಚೆ ನಡೆಸಿ ತೂಲಹಳ್ಳಿ ತಾಪಂ ಸದಸ್ಯ ಹಾಲಮ್ಮ ಸಿದ್ದೇಶ ಅವರಿಗೆ ಅಧ್ಯಕ್ಷ ಸ್ಥಾನದ ಅವಕಾಶ ಕೊಡಬೇಕೆಂಬ ಒಮ್ಮತ ನಿರ್ಧಾರ ಕೈಗೊಂಡಿದ್ದಾರೆ.

ತಾಪಂನಲ್ಲಿ ಒಟ್ಟು 8 ಸದಸ್ಯ ಸ್ಥಾನಗಳಿದ್ದು ಈ ಪೈಕಿ 6 ಸದಸ್ಯರು ಬಿಜೆಪಿ, ಓರ್ವ ಕಾಂಗ್ರೆಸ್‌ ಮತ್ತು ಓರ್ವ ಜೆಡಿಎಸ್‌ ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಲ್ಲಿಯೇ ಸದಸ್ಯರ ನಡುವೆ ತೀವ್ರ ಪೈಪೋಟಿ ಕೇಳಿಬಂದಿತ್ತು. ಎಲ್ಲ ನಾಯಕರು ಮತ್ತು ಸದಸ್ಯರು ಹಾಲಮ್ಮ ಸಿದ್ದೇಶ ಅವರನ್ನು ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಮಾಡಲು ಒಲವು ತೋರಿಸಿದ ಕಾರಣಕ್ಕಾಗಿ ಹಾಲಮ್ಮ ಅಧ್ಯಕ್ಷ ಅಭ್ಯರ್ಥಿ ಎಂಬ ನಿರ್ಣಯಕ್ಕೆ ಎರಡೂ ಪಕ್ಷದ ನಾಯಕರು, ಮುಖಂಡರು ಒಪ್ಪಿಗೆ ಸೂಚಿಸಿದರು.
ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿರುವುದರಿಂದ ಚಿರಿಬಿ ಕ್ಷೇತ್ರದ ಸದಸ್ಯೆ ಚಂದ್ರಮ್ಮ ಕೊಟ್ರೇಶ ಅವರನ್ನು ನಿಲ್ಲಿಸಲು ಉಭಯ ಪಕ್ಷಗಳ ಮುಖಂಡರು ನಿರ್ಣಯಿಸಿದ್ದಾರೆ ಖಚಿತ ಮೂಲಗಳು ತಿಳಿಸಿವೆ. ಚುನಾವಣೆ ದಿನಾಂಕ ಪ್ರಕಟವಾದರೂ ಅಧ್ಯಕ್ಷ-ಉಪಾಧ್ಯಕ್ಷರ ಅವಿರೋಧ ಆಯ್ಕೆ ನಡೆಯುವುದು ಖಚಿತವಾಗಿದೆ.
 

click me!