ರಾಜ್ಯದ ಕರಾವಳಿಯ ಮೀನುಗಾರರ ಬಹುಕಾಲದ ಬೇಡಿಕೆಯಂತೆ ರಾಜ್ಯ ಸರ್ಕಾರ ಸಮಗ್ರ ಮೀನುಗಾರಿಕಾ ನೀತಿಯನ್ನು ಮುಂಬರುವ ಬಜೆಟ್‌ನಲ್ಲಿ ಘೋಷಿಸಲಿದೆ ಎಂದು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಉಡುಪಿ(ಫೆ.02): ರಾಜ್ಯದ ಕರಾವಳಿಯ ಮೀನುಗಾರರ ಬಹುಕಾಲದ ಬೇಡಿಕೆಯಂತೆ ರಾಜ್ಯ ಸರ್ಕಾರ ಸಮಗ್ರ ಮೀನುಗಾರಿಕಾ ನೀತಿಯನ್ನು ಮುಂಬರುವ ಬಜೆಟ್‌ನಲ್ಲಿ ಘೋಷಿಸಲಿದೆ ಎಂದು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಅವರು ಶನಿವಾರ ಉಡುಪಿ ತಾಲೂಕು ಮಹಿಳಾ ಹಸಿ ಮೀನು ಮಾರಾಟಗಾರರ ಸಂಘದ ವಾರ್ಷಿಕೋತ್ಸವ, ಮೀನುಗಾರರ ಸಮಾವೇಶ ಹಾಗೂ ಸನ್ಮಾನ, ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನೆರೆ ರಾಜ್ಯಗಳ ಮೀನುಗಾರಿಕಾ ನೀತಿ ಅಧ್ಯಯನ ಮಾಡಲಾಗಿದ್ದು, ನಮ್ಮ ರಾಜ್ಯದ ಕರಾವಳಿಗೆ ಹೊಂದುವಂತಹ ಸಮಗ್ರ ಮೀನುಗಾರಿಕಾ ನೀತಿಯನ್ನು ಸಿದ್ಧಪಡಿಸಿದ್ದು, ಬಜೆಟ್ ನಂತರ ಶೀಘ್ರವೇ ಜಾರಿಗೆ ಬರಲಿದೆ ಎಂದಿದ್ದಾರೆ.
undefined
ಕೇಂದ್ರ ಬಜೆಟ್‌ನಲ್ಲಿ ಪರಂಪರಾಗತ ಉದ್ಯಮಗಳ ಬದಲಾಗಿ ಸ್ಟಾರ್ಟ್‌ಅಪ್‌ಗಳಿಗೆ ಮಣೆ
ಕೆಎಫ್‌ಡಿಸಿಯಿಂದ ದಕ್ಷಿಣ ಕನ್ನಡ, ಉಡುಪಿಯಲ್ಲಿ ತಳ್ಳು ಮೀನು ಮಾರಾಟ ಅಂಗಡಿಗಳನ್ನು ತೆರೆಯುವುದಿಲ್ಲ, ಈ ಬಗ್ಗೆ ಮೀನು ಮಾರಾಟ ಮಹಿಳೆಯರಿಗೆ ಆತಂಕ ಬೇಡ ಎಂದ ಸಚಿವರು, ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್, 3 ಲಕ್ಷ ರು.ಗಳ ವರೆಗೂ ಸಾಲ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಹಿರಿಯ ಮೀನುಗಾರ ಮಹಿಳೆಯರನ್ನು ಸನ್ಮಾನಿಸಲಾಯಿತು. ಉಡುಪಿ ಶಾಸಕ ಕೆ. ರಘುಪತಿ ಭಟ್, ಉದ್ಯಮಿ ಜಿ. ಶಂಕರ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಹಿಳಾ ಹಸಿ ಮೀನು ಮಾರಾಟಗಾರರ ಸಂಘದ ಅಧ್ಯಕ್ಷೆ ಬೇಬಿ ಸಾಲ್ಯಾನ್, ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಕೃಷ್ಣ ಜಿ. ಸುವರ್ಣ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
10ರಂದು ರಕ್ಷಣಾ ಸಚಿವರ ಭೇಟಿ
ಸುವರ್ಣ ತ್ರಿಭುಜ ಬೋಟ್‌ನೊಂದಿಗೆ ನಾಪತ್ತೆಯಾದ ಮೀನುಗಾರರ ಕುಟುಂಬಗಳಿಗೆ ರಾಜ್ಯ ಸರ್ಕಾರದಿಂದ ಗರಿಷ್ಠ ಪರಿಹಾರ ನೀಡಲಾಗಿದ್ದು, ಕೇಂದ್ರ ಸರ್ಕಾರದಿಂದ ಪರಿಹಾರ ಕೊಡಿಸುವುದಕ್ಕಾಗಿ ಫೆ.10ರಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಮೀನುಗಾರರ ನಿಯೋಗದೊಂದಿಗೆ ಭೇಟಿ ಮಾಡಲಾಗುವುದು ಎಂದು ಶಾಸಕ ಕೆ.ರಘುಪತಿ ಭಟ್ ಹೇಳಿದರು.
ಸಚಿವ ಸ್ಥಾನ ಸಿಎಂಗೆ ಬಿಟ್ಟಿದ್ದು
ಉಪಚುನಾವಣೆಯಲ್ಲಿ ಗೆದ್ದವರಿಗೆ ಒಂದಷ್ಟುಸಚಿವ ಖಾತೆಗಳನ್ನು ತೆಗೆದಿರಿಸಲಾಗಿತ್ತು. ಈಗ ಸಂಪುಟ ವಿಸ್ತರಣೆಯಾಗುತ್ತಿದೆ. ನಾನು ಸಚಿವನಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ಇಲಾಖೆಯ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಖಾತೆ ಬದಲಾವಣೆ ಅಥವಾ ಸಂಪುಟದಿಂದ ಕೈಬಿಡುವ ವಿಚಾರ ಮುಖ್ಯಮಂತ್ರಿ ಅವರಿಗೆ ಬಿಟ್ಟಿದ್ದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಜನಸಾಮಾನ್ಯರ ತೃಪ್ತಿಯ ಬಜೆಟ್: ಕೋಟ
ಸಾಮಾನ್ಯ ಜನರಲ್ಲಿ ತೃಪ್ತಿ ಹಾಗೂ ವಿಶ್ವಾಸ ಮೂಡಿಸುವಂತಹ ಬಜೆಟ್‌ನ್ನು ಕೇಂದ್ರ ಸರ್ಕಾರ ಮಂಡಿಸಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಮಾರು 1.25 ಲಕ್ಷ ಕೋಟಿ ರು.ಗಳನ್ನು ಗ್ರಾಮೀಣಾಭಿವೃದ್ಧಿಗೆ ಮೀಸಲಿಟ್ಟಿರುವುದು ಒಂದು ದಾಖಲೆಯಾಗಿದೆ. ಆಯುಷ್ಮಾನ್ ಭಾರತ್ ಯೋಜನೆಯಡಿ 112 ಜಿಲ್ಲೆಗಳಲ್ಲಿ ಆಸ್ಪತ್ರೆ ತೆರೆಯುವುದು, ಕಿಸಾನ್ ರೈಲು ಓಡಿಸುವುದು ಕೂಡ ಉತ್ತಮ ನಿರ್ಧಾರವಾಗಿದೆ. ಕಾಶ್ಮೀರದಲ್ಲಿ 377 ರದ್ದಾದ ಬಳಿಕ ದುಡಿಯವ ಕೈಗಳಿಗೆ ಶಕ್ತಿ ನೀಡಲು ಮೂಲಸೌಕರ್ಯಕ್ಕೆ 37 ಸಾವಿರ ಕೋಟಿ ರು., ಕರಾವಳಿಯ 320 ಕಿ.ಮೀ ಸಮುದ್ರತೀರವನ್ನು ಅಭಿವೃದ್ಧಿಪಡಿಸಲು 2000 ಕೋಟಿ ರು. ನೀಡುವುದಾಗಿ ಕೇಂದ್ರ ಸರ್ಕಾರ ಹಿಂದೆಯೇ ಭರವಸೆ ನೀಡಿದ್ದು, ಯೋಜನೆಗಳ ಪ್ರಸ್ತಾವ ಸಲ್ಲಿಸುವಂತೆ ಸೂಚಿಸಿದೆ ಎಂದರು. ಮಲ್ಪೆಯಲ್ಲಿ ತೇಲುವ ಜೆಟ್ಟಿನಿರ್ಮಾಣ ಕುರಿತು ಶೀಘ್ರವೇ ತಜ್ಞರಿಂದ ಪ್ರಾತ್ಯಕ್ಷಿಕೆ ನಡೆಸಿ ಕೇಂದ್ರಕ್ಕೆ ಸಲ್ಲಿಸಲಾಗುವುದು. ರಾಜ್ಯ ಬಜೆಟ್‌ನಲ್ಲಿ ಸಮಗ್ರ ಮೀನುಗಾರಿಕಾ ನೀತಿ ಪ್ರಕಟವಾಗಲಿದೆ ಎಂದು ಅವರು ಹೇಳಿದರು.