* ಕೊಪ್ಪಳದಲ್ಲಿ ಜಾರಿ ಮಾಡಿದ ಸಚಿವ ಬಿ.ಸಿ. ಪಾಟೀಲ್
* ಸೆಮಿಲಾಕ್‌ಡೌನ್‌ಗೆ ಬಗ್ಗದ್ದರಿಂದ ಈಗ ಕ್ರಮ
* ಮನೆಯಿಂದ ಆಚೆ ಬಂದ್ರೆ ಜೋಕೆ
ಕೊಪ್ಪಳ(ಮೇ.17): ಮಹಾಮಾರಿ ಕೊರೋನಾ ಜಿಲ್ಲೆಯಲ್ಲಿ ನಿಯಂತ್ರಣಕ್ಕೆ ಬರುತ್ತಿಲ್ಲ. ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಲೇ ಇದೆ. ಸೆಮಿಲಾಕ್‌ಡೌನ್ ಬಳಿಕವೂ ಕೊರೋನಾ ನಿಯಂತ್ರಣವಾಗುವ ಬದಲು ಮತ್ತಷ್ಟು ಅಧಿಕಗೊಂಡಿದೆ. ಹೀಗಾಗಿ, ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್ ಅವರು ಫುಲ್ ಲಾಕ್‌ಡೌನ್ ಘೋಷಣೆ ಮಾಡಿದ್ದಾರೆ.
ಇಂದಿನಿಂದ(ಮೇ 17) ಮೇ. 21ರವರೆಗೂ ಪ್ರಾಯೋಗಿಕವಾಗಿ ಜಾರಿ ಮಾಡಿದ್ದು, ಇದರಿಂದಲಾದರೂ ಕೊರೋನಾ ಜಿಲ್ಲೆಯಲ್ಲಿ ನಿಯಂತ್ರಣಕ್ಕೆ ಬರುತ್ತದೆ ಎನ್ನುವ ವಿಶ್ವಾಸದೊಂದಿಗೆ ಜಾರಿ ಮಾಡಲಾಗಿದೆ. ಇದೊಂದು ಪ್ರಾಯೋಗಿಕ ಜಾರಿಯಾಗಿದ್ದು, ಇದರ ಪರಿಣಾಮವನ್ನಾಧರಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುವುದಾಗಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.
ಸೆಮಿಲಾಕ್‌ಡೌನ್‌ನಲ್ಲಿ ಜನರು ನಿರೀಕ್ಷಿತ ಪ್ರಮಾಣದಲ್ಲಿ ಲಾಕ್ ಆಗಲಿಲ್ಲ. ಹೀಗಾಗಿಯೇ ಕೊರೋನಾ ಹೆಚ್ಚಳವಾಗುತ್ತಲೇ ಇದೆ. ಸೆಮಿಲಾಕ್‌ಡೌನ್‌ಗೂ ಮುನ್ನ ಜಿಲ್ಲೆಯಲ್ಲಿ ನಿತ್ಯ ನೂರಿನ್ನೂರು ಬರುತ್ತಿದ್ದ ಪಾಸಿಟಿವ್ ಪ್ರಕರಣಗಳು ಈಗ 700ರ ಗಡಿಗೆ ಬಂದುನಿಂತಿವೆ. ಇನ್ನು ನಿತ್ಯ ಸರಾಸರಿ ಹತ್ತು ಜನರು ಸಾವಿಗೀಡಾಗುತ್ತಿದ್ದಾರೆ. ಇದೆಲ್ಲಕ್ಕೂ ಪರಿಹಾರ ಎನ್ನುವಂತೆ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ಡೌನ್ ಜಾರಿ ಮಾಡಲಾಗಿದೆ.
ಮೋದಿ ಕರ್ನಾಟಕದ ಬಿಜೆಪಿಗರನ್ನ ತಮ್ಮ ಹತ್ತಿರ ಬಿಟ್ಟುಕೊಳ್ತಿಲ್ಲ: ಶಿವರಾಜ್ ತಂಗಡಗಿ
ಲಾಕ್‌ಡೌನ್ ಯಾವುದಕ್ಕೆ ವಿನಾಯತಿ?
ಅಗತ್ಯ ವಸ್ತುಗಳ ಸೇವೆ, ಔಷಧಿ, ಆ್ಯಂಬುಲೆನ್ಸ್, ಪೆಟ್ರೋಲ್ ಬಂಕ್, ಅಗ್ನಿಶಾಮಕ, ನೀರು ನೈರ್ಮಲ್ಯ ಸೇವೆ ಆಸ್ಪತ್ರೆಗೆ ತೆರಳಿದರೆ ವೈದ್ಯಕೀಯ ದಾಖಲೆ ತೋರಿಸಬೇಕು. ದಿನಪತ್ರಿಕೆ, ದೃಶ್ಯಮಾಧ್ಯಮ, ಎಟಿಎಂ ಸೇವೆ
ಕೋಲ್ಡ್ ಸ್ಟೋರೇಜ್, ಔಷಧಿ, ರಸಾಯನಿಕ ಉದ್ಯಮ, ವಿದ್ಯುತ್ ಉತ್ಪಾದನೆಗೆ ಅನುಮತಿ.
ಖಜಾನೆ ಇಲಾಖೆ ಶೇ. 50ರಷ್ಟು ಸೇವೆ:
ಕೃಷಿ ಚಟುವಟಿಕೆಗೆ ಬೆಳಗ್ಗೆ 6ರಿಂದ 10ರವರೆಗೂ ಅವಕಾಶ, ಸೋಂಕಿತರ, ರೋಗಿಯ ಆರೈಕೆಗಾಗಿ ಇಬ್ಬರು ಗುರುತಿನ ಚೀಟಿ ಇದ್ದವರಿಗೆ ಅವಕಾಶ. ಪಾರ್ಸಲ್ ಊಟಕ್ಕೆ ಅವಕಾಶ, ಇಂದಿರಾ ಕ್ಯಾಂಟೆನ್ ದಿನಪೂರ್ತಿ ಇರುತ್ತದೆ. ವೃದ್ಧಾಶ್ರಮ, ನಿರ್ಗತಿಕ ಕೇಂದ್ರ ಇರುತ್ತದೆ. ಕಟ್ಟಡ ಕಾರ್ಮಿಕ ಕೆಲಸಕ್ಕೆ ಅವಕಾಶ ಸರಕು ವಾಹನ ಸಾಗಾಟಕ್ಕೆ ಅವಕಾಶ ಕೆಲವು ಇಲಾಖೆ ಕಾರ್ಯ ನಿರ್ವಹಣೆಗೆ ಅನುಮತಿ ನ್ಯಾಯಾಲಯದ ಕಾರ್ಯ ನಿರ್ವಹಣೆಗೆ ಅನುಮತಿ ಅಂತ್ಯ ಸಂಸ್ಕಾರಕ್ಕೆ ಐವರಿಗೆ ಅವಕಾಶವಿದೆ.
ಏನೇನು ರದ್ದು ಮಾಡಲಾಗಿದೆ?
ಸಾರ್ವಜನಿಕ ಸಭೆ, ರಾಜಕೀಯ, ಧಾರ್ಮಿಕ ಸಭೆಗಳನ್ನು ರದ್ದುಪಡಿಸಿದೆ. ಮದುವೆ, ನಾಮಕರಣಕ್ಕೂ ಬ್ರೇಕ್ ಹಾಕಲಾಗಿದೆ. ಈ ಹಿಂದೆ ಮದುವೆಗಳಿಗೆ ತಹಸೀಲ್ದಾರರು ನೀಡಿದ್ದ ಪರವಾನಿಗೆಯನ್ನೂ ರದ್ದುಪಡಿಸಲಾಗಿದೆ. ಅಂತ್ಯ ಸಂಸ್ಕಾರಕ್ಕೆ 5 ಜನ ಮೀರುವಂತಿಲ್ಲ. ಸಾರ್ವಜನಿಕ ಸ್ಥಳದಲ್ಲಿ ಉಗುಳಿದರೆ ದಂಡ ವಿಧಿಸಲಾಗುವುದು. ಬಹಿರಂಗ ಸ್ಥಳದಲ್ಲಿ ಮದ್ಯಪಾನ, ಗುಟಕಾ, ಪಾನ್, ತಂಬಾಕು ಇತ್ಯಾದಿ ಬಳಕೆ ನಿಷೇಧಿಸಿದೆ. ಇದಲ್ಲದೆ ಈ ಮೊದಲ ಇದ್ದ ಎಲ್ಲ ಸೆಮಿಲಾಕ್‌ಡೌನ್ ನಿಯಮಾವಳಿಗಳು ಇದ್ದೇ ಇರುತ್ತವೆ. ಕೊರೋನಾ ನಿಯಂತ್ರಣಕ್ಕಾಗಿ ಕೊಪ್ಪಳ ಜಿಲ್ಲೆಯಲ್ಲಿ ಐದು ದಿನ ಸಂಪೂರ್ಣ ಲಾಕ್‌ಡೌನ್ ಹೇಗೆ ಆಗುತ್ತದೆ? ಎನ್ನುವುದೇ ಸದ್ಯದ ಕುತೂಹಲ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona