ಬೀದಿ ನಾಯಿಗಳು ನಾಪತ್ತೆ: ಪಕ್ಕದ ಮನೆಯಾತನ ವಿರುದ್ಧ ದೂರು, ಹುಡುಕಿಕೊಟ್ಟವರಿಗಿದೆ ದೊಡ್ಡ ಗಿಫ್ಟ್‌..!

By Kannadaprabha NewsFirst Published Nov 3, 2023, 4:28 AM IST
Highlights

ಯಶವಂತಪುರ ನಿವಾಸಿ ಸಂಭವ ಪ್ರಕಾಶ್‌ ಎಂಬುವವರು ನೀಡಿದ ದೂರಿನ ಮೇರೆಗೆ ಕುಮಾರಕೃಪಾ ಪಶ್ಚಿಮ ನಿವಾಸಿ ದಿಲೀಪ್‌ ಎಂಬುವವರ ವಿರುದ್ಧ ‘ಪ್ರಾಣಿಗಳ ವಿರುದ್ಧದ ಹಿಂಸೆ ತಡೆ ಕಾಯಿದೆ’ಯಡಿ ಎಫ್‌ಐಆರ್‌ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿಸಿದ ಅಧಿಕಾರಿಗಳು

ಬೆಂಗಳೂರು(ನ.03): ನಾನು ನಿತ್ಯ ಊಟ ಹಾಕುತ್ತಿದ್ದ ಮೂರು ಬೀದಿ ನಾಯಿಗಳನ್ನು ಹಿಡಿದುಕೊಂಡು ಹಿಂಸಿಸಿ ಬೇರೆಡೆಗೆ ಬಿಟ್ಟು ಬಂದಿದ್ದಾನೆ ಎಂದು ಆರೋಪಿಸಿ ನೆರಮನೆಯ ವ್ಯಕ್ತಿಯ ವಿರುದ್ಧ ವ್ಯಕ್ತಿಯೊಬ್ಬರು ಶೇಷಾದ್ರಿಪುರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಯಶವಂತಪುರ ನಿವಾಸಿ ಸಂಭವ ಪ್ರಕಾಶ್‌ ಎಂಬುವವರು ನೀಡಿದ ದೂರಿನ ಮೇರೆಗೆ ಕುಮಾರಕೃಪಾ ಪಶ್ಚಿಮ ನಿವಾಸಿ ದಿಲೀಪ್‌ ಎಂಬುವವರ ವಿರುದ್ಧ ‘ಪ್ರಾಣಿಗಳ ವಿರುದ್ಧದ ಹಿಂಸೆ ತಡೆ ಕಾಯಿದೆ’ಯಡಿ ಎಫ್‌ಐಆರ್‌ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೂರಿನಲ್ಲಿ ಏನಿದೆ?

-ನಾನು ಕುಮಾರ ಕೃಪಾ ಪಶ್ಚಿಮ 8ನೇ ಅಡ್ಡರಸ್ತೆಯ ವಿಎಂ-1 ಕಾರ್ಪೊರೇಟ್‌ ಎಲ್‌ಎಲ್‌ಪಿ ಕಂಪನಿಯಲ್ಲಿ ಕಳೆದ ಆರು ತಿಂಗಳಿಂದ ಅಕೌಂಟೆಂಟ್‌ ಆಗಿ ಕೆಲಸ ಮಾಡುತ್ತಿದ್ದೇನೆ. ಈ ಕಂಪನಿಯು ನೆಲಮಹಡಿಯಲ್ಲಿದ್ದು, ಮಾಲೀಕರ ಮನೆ 1ನೇ ಮಹಡಿಯಲ್ಲಿದೆ. ಕಂಪನಿಯ ಮಾಲೀಕ ವಿಪಲವಿ ಮಹೇಂದ್ರ ಎಂಬುವವರ 15 ವರ್ಷಗಳಿಂದ ಲಂಡನ್‌ನಲ್ಲಿ ನೆಲೆಸಿದ್ದಾರೆ. ವರ್ಷಕ್ಕೆಎರಡು ಬಾರಿ ಬೆಂಗಳೂರಿಗೆ ಬಂದು ಹೋಗುತ್ತಾರೆ. ಅವರು ಬೆಂಗಳೂರಿಗೆ ಬಂದಾಗ ಮನೆ ಸಮೀಪದ ಬೀದಿ ನಾಯಿಗಳಿಗೆ ಊಟ ಹಾಕುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಕಳೆದ 10 ವರ್ಷಗಳಿಂದ ಈ ಕೆಲಸ ಮಾಡುತ್ತಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಬೀದಿ ನಾಯಿಗಳಿಗೆ ನಾನು ಊಟ ಹಾಕುತ್ತೇನೆ.

ಅ.4ರಿಂದ ಅ.20ರೊಳಗೆ ನಮ್ಮ ಪಕ್ಕದ ಮನೆಯ ಕೆಲಸ ಮಾಡುವ ದಿಲೀಪ್‌ ಎಂಬಾತ ಮೂರು ಬೀದಿ ನಾಯಿಗಳನ್ನು ಹಿಡಿದುಕೊಂಡು ಹಿಂಸಿಸಿ ಬೇರೆಡೆಗೆ ಬಿಟ್ಟು ಬಂದಿದ್ದಾನೆ. ಎಲ್ಲಿ ಬಿಟ್ಟಿದ್ದೀಯಾ ಎಂದು ಕೇಳಿದರೆ ಸಮಪರ್ಕ ವಿಳಾಸ ಹೇಳುತ್ತಿಲ್ಲ. ನಾನು ನಗರದ ಪ್ರಾಣಿ ವಧಾ ಕೇಂದ್ರಗಳು ಹಾಗೂ ಬೀದಿ ನಾಯಿಗಳು ಹೆಚ್ಚಿರುವ ಪ್ರದೇಶಗಳಿಗೆ ತೆರಳಿ ನೋಡಿದ್ದೂ ಎಲ್ಲಿಯೂ ಈ ಮೂರು ಬೀದಿ ನಾಯಿಗಳು ಪತ್ತೆಯಾಗಿಲ್ಲ. ಹೀಗಾಗಿ ನೆರೆ ಮನೆಯ ದಿಲೀಪ್‌ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ದೂರುದಾರ ಸಂಭವ ಪ್ರಕಾಶ್‌ ಮನವಿ ಮಾಡಿದ್ದಾರೆ.

ಒಂದು ಹೆಣ್ಣು-ಎರಡು ಗಂಡು:

ನಾಪತ್ತೆಯಾಗಿರುವ ಮೂರು ಬೀದಿನಾಯಿಗಳ ಪೈಕಿ ಒಂದು ಹೆಣ್ಣು ಮತ್ತು ಎರಡು ಗಂಡು ನಾಯಿಗಳಿವೆ. ಹೆಣ್ಣು ನಾಯಿಗೆ ವಯಸ್ಸಾಗಿದ್ದು, ಚರ್ಮದ ಸಮಸ್ಯೆಯಿದೆ. ಉಳಿದೆರೆಡು ಗಂಡು ನಾಯಿಗಳು ಆರೋಗ್ಯವಾಗಿವೆ ಎಂದು ದೂರಿನಲ್ಲಿ ಬೀದಿ ನಾಯಿಗಳ ಚಹರೆ ಉಲ್ಲೇಖಿಸಿದ್ದಾರೆ.

ಹುಡುಕಿಕೊಟ್ಟರೆ ₹35000 ಪ್ರೈಸ್‌!

ನಾಪತ್ತೆ ಆಗಿರುವ ಈ ಮೂರು ಬೀದಿ ನಾಯಿಗಳನ್ನು ಹುಡುಕಿ ಕೊಟ್ಟರೆ ನಗದು ಬಹುಮಾನ ಕೊಡುವುದಾಗಿ ಪ್ರಕಾಶ್‌ ಘೋಷಿಸಿದ್ದಾರೆ. ಒಂದು ನಾಯಿಗೆ ತಲಾ ₹10 ಸಾವಿರ ಬಹುಮಾನ ನೀಡಲಾಗುವುದು. ಮೂರು ನಾಯಿಗಳನ್ನು ಒಮ್ಮೆಗೆ ಹುಡುಕಿ ತಂದು ಕೊಟ್ಟಲ್ಲಿ ಒಟ್ಟು ₹35 ಸಾವಿರ ಬಹುಮಾನ ನೀಡುವುದಾಗಿ ಘೋಷಿಸಲಾಗಿದೆ.

click me!