ದಲಿತರ ಮತ್ತು ಸವರ್ಣೀಯರ ನಡುವಿನ ಮಾರಾಮಾರಿ ಪ್ರಕರಣ| ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಹಗೇದಾಳ ಗ್ರಾಮದ ನಡೆದಿದ್ದ ಪ್ರಕರಣ|
ಕಾರಟಗಿ(ಅ.30): ತಾಲೂಕಿನ ಹಗೇದಾಳ ಗ್ರಾಮದ ದಲಿತರ ಮತ್ತು ಸವರ್ಣೀಯರ ನಡುವಿನ ಮಾರಾಮಾರಿ ಪ್ರಕರಣಕ್ಕೆ ಸಂಬಂಧ ಏಳು ಜನ ದಲಿತರ ಮೇಲೆ ಕಾರಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮದ ತಿರುಮಲಮ್ಮ ರಮೇಶ ಭೋಗಾಪುರ ಅವರು ನೀಡಿದ ದೂರಿನನ್ವಯ ದಲಿತ ಸಮುದಾಯದ ದುರುಗಪ್ಪ ತಾಯಿ ಹುಲಿಗೆಮ್ಮ, ಹೊನ್ನಪ್ಪ ತಾಯಿ ಹುಲಿಗೆಮ್ಮ, ಸೋಮನಾಥ ತಾಯಿ ಹುಸೇನಮ್ಮ, ಹನಮಂತ ತಾಯಿ ಹುಸೇನಮ್ಮ, ದುರಗಪ್ಪ ತಂದೆ ಜೊಂಡುಗ ಹನುಮಪ್ಪ, ನಾಗರಾಜ ತಂದೆ ದುರಗಪ್ಪ, ಪರಶುರಾಮ ತಂದೆ ದುರಗಪ್ಪ ಹರಿಜನ ಇವರ ಮೇಲೆ ಪ್ರಕರಣ ದಾಖಲಾಗಿದೆ.
ದಲಿತರ ಕೇರಿಗೆ ನುಗ್ಗಿ ಚಪ್ಪಲಿ, ಮಾರಕಾಸ್ತ್ರಗಳಿಂದ ಸವರ್ಣಿಯರ ಹಲ್ಲೆ
ದ್ವಿಚಕ್ರ ವಾಹನ ಮನೆಮುಂದೆ ಇಲ್ಲದನ್ನು ನೋಡಿ ಬುಧವಾರ ಬೆಳಗ್ಗೆ ಹುಡುಕುತ್ತ ದಲಿತ ಕೇರಿಗೆ ಹೋದಾಗ ನಮಗೆ ಸೇರಿದ ದ್ವಿಚಕ್ರ ವಾಹನ ಆರೋಪಿತರ ಮನೆ ಮುಂದೆ ನಿಂತಿದ್ದನ್ನು ವಿಚಾರಿಸಿದಾಗ ಮಾತಿಗೆ ಮಾತು ಬೆಳೆದು ತಮ್ಮ ಮೇಲೆ ದಲಿತರು ಹಲ್ಲೆ ಮಾಡಿದ್ದಾರೆಂದು ತಿರುಮಲಮ್ಮ ದೂರು ನೀಡಿದ್ದಾರೆ. ದೂರುದಾಳ ತಿರುಮಲ್ಲಮ್ಮ ಬುಧವಾರ ರಾತ್ರಿ 11ಕ್ಕೆ ಠಾಣೆಗೆ ಭೇಟಿ ನೀಡಿ ದೂರು ನೀಡಿದನ್ವಯ ಪ್ರಕರಣ ದಾಖಲಿಸಿದ್ದಾಗಿ ಪಿಎಸ್‌ಐ ಅವಿನಾಶ ಕಾಂಬಳೆ ವಿವರಿಸಿದ್ದಾರೆ.
ಈ ನಡುವೆ ದಲಿತರ ಮೇಲೆ ಸವರ್ಣೀಯರಿಂದ ಹಲ್ಲೆ ಪ್ರಕರಣಕ್ಕೆ ಸಂಬಂಧ ಆರೋಪಿಗಳನ್ನು ಕಾರಟಗಿ ಪೊಲೀಸರು ಬುಧವಾರ ಠಾಣೆಗೆ ಕರೆತಂದಿದ್ದರೂ ಮತ್ತೆ ಅವರನ್ನು ಮನೆಗೆ ಕಳುಹಿಸಿದ್ದು ಅನುಮಾನಕ್ಕೆ ಎಡೆಮಾಡಿದೆ ಎಂದು ಗ್ರಾಮದ ದಲಿತ ಮುಖಂಡ ಹನುಮೇಶ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದಲಿತರ ಮೇಲೆ ಸವರ್ಣೀಯರ ಗುಂಪು ಹಾಡುಹಗಲೇ ಚಪ್ಪಲ್ಲಿ, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರದಾಡಿದ್ದರೂ ಪೊಲೀಸರು ಆರೋಪಿಗಳ ಪರ ಮೃಧು ಭಾವನೆ ತೋರಿಸಿ ಅವರನ್ನು ಠಾಣೆಯಲ್ಲಿ ರಾಜಾತಿಥ್ಯ ನೀಡುತ್ತಿದ್ದಾರೆಂದು ಹನುಮೇಶ ಆರೋಪಿಸಿದ್ದಾರೆ.