ಕೆ.ಆರ್.ಮಾರ್ಕೆಟ್‌ನಲ್ಲಿ ಮಳಿಗೆಗಳ ಮಾಲೀಕರಿಗೆ ಜಗದೀಶ್‌ ಎಚ್ಚರಿಕೆ, 15 ದಿನಗಳಲ್ಲಿ ಬಾಕಿ ಬಾಡಿಗೆ ಕಟ್ಟದಿದ್ದರೆ ಬೀಗ!

Gowthami K   | Kannada Prabha
Published : Sep 26, 2026, 08:46 AM IST
Commissioner G. Jagadeesha

ಸಾರಾಂಶ

ಬೆಂಗಳೂರಿನ ಕೆ.ಆರ್.ಮಾರುಕಟ್ಟೆಯಲ್ಲಿ ಬಾಕಿ ಬಾಡಿಗೆ ಪಾವತಿಸದ ಮಳಿಗೆಗಳಿಗೆ ಬೀಗ ಜಡಿಯಲು ಬಿಬಿಎಂಪಿ ಆಯುಕ್ತ ಜಿ.ಜಗದೀಶ್ ಸೂಚಿಸಿದ್ದಾರೆ. ಪಾದಚಾರಿ ಮಾರ್ಗ ಒತ್ತುವರಿ ತೆರವುಗೊಳಿಸಿ ದಂಡ ವಿಧಿಸಲು ಮತ್ತು ಮೂಲಸೌಕರ್ಯ ದುರಸ್ತಿಗೆ ಆದೇಶಿಸಿದ್ದಾರೆ. ಸೊಪ್ಪು ಮಾರುಕಟ್ಟೆಯಲ್ಲಿ ನೀರು ನಿಲ್ಲದಂತೆ ಕಾಂಕ್ರೀಟ್ ಹಾಕಲು ನಿರ್ದೇಶನ ನೀಡಲಾಗಿದೆ.

ಬೆಂಗಳೂರು: ನಗರದ ಕೆ.ಆರ್.ಮಾರುಕಟ್ಟೆಯಲ್ಲಿ ಬಾಕಿ ಬಾಡಿಗೆ ಪಾವತಿಸದ ಮಳಿಗೆಗಳಿಗೆ ಬೀಗ ಹಾಕಿ ವಶಕ್ಕೆ ಪಡೆಯಲಾಗುವುದು ಎಂದು ಕೇಂದ್ರ ನಗರ ಪಾಲಿಕೆ ಆಯುಕ್ತ ಜಿ.ಜಗದೀಶ್ ಹೇಳಿದ್ದಾರೆ.

ಕೆ.ಆರ್.ಮಾರುಕಟ್ಟೆ ಅಭಿವೃದ್ಧಿ ಮತ್ತು ಸಮಸ್ಯೆಗಳ ಕುರಿತು ಅಧಿಕಾರಿಗಳ ಜೊತೆ ಸಭೆ ನಡೆಸಿದ ಅವರು, ಮಳಿಗೆಗಳ ಬಾಕಿ ಬಾಡಿಗೆಯನ್ನು ಸಂಬಂಧಪಟ್ಟ ವ್ಯಾಪಾರಿಗಳು 15 ದಿನಗಳೊಳಗಾಗಿ ಕಡ್ಡಾಯವಾಗಿ ಪಾವತಿಸಬೇಕು. ಇಲ್ಲದಿದ್ದರೆ ಅಂಗಡಿಗಳಿಗೆ ಬೀಗ ಹಾಕಿ ನಗರ ಪಾಲಿಕೆಯ ವಶಕ್ಕೆ ಪಡೆಯುವ ಪ್ರಕ್ರಿಯೆ ಕೈಗೊಳ್ಳುವಂತೆ ನಿರ್ದೇಶನ ನೀಡಿದರು. ಮಾರುಕಟ್ಟೆ ಮುಂಭಾಗದಲ್ಲಿ ವ್ಯಾಪಾರ ಮಾಡಲು ನಿಗದಿತ ವ್ಯಾಪಾರ ಸ್ಥಳಗಳನ್ನು ಈಗಾಗಲೇ ಗುರುತಿಸಲಾಗಿದೆ. ಆದರೂ, ವ್ಯಾಪಾರಿಗಳು ನಿಗದಿಪಡಿಸಿದ ಸ್ಥಳ ಹೊರತುಪಡಿಸಿ ರಸ್ತೆ ಹಾಗೂ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಯಾಗುವ ರೀತಿಯಲ್ಲಿ ವ್ಯಾಪಾರ ನಡೆಸುತ್ತಿದ್ದಾರೆ. ಅಂತಹ ವ್ಯಾಪಾರಿಗಳನ್ನು ತೆರವುಗೊಳಿಸಿ ದಂಡ ವಿಧಿಸಿ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಆಯುಕ್ತರು ನಿರ್ದೇಶನ ನೀಡಿದರು.

ಒತ್ತುವರಿ ತೆರವು:

ಕೆ.ಆರ್.ಮಾರುಕಟ್ಟೆ ಸುತ್ತಲಿನ ಪ್ರದೇಶಗಳಲ್ಲಿ ಈಗಾಗಲೇ ತೆರವುಗೊಳಿಸಿರುವ ಪಾದಚಾರಿ ಮಾರ್ಗಗಳಲ್ಲಿ ಮತ್ತೆ ಅಂಗಡಿಗಳು ತಲೆ ಎತ್ತಿವೆ. ವ್ಯಾಪಾರಿಗಳು ವಸ್ತುಗಳನ್ನು ಇಟ್ಟುಕೊಂಡು ಒತ್ತುವರಿ ಮಾಡಿಕೊಂಡಿದ್ದು, ತಕ್ಷಣ ತೆರವುಗೊಳಿಸಬೇಕು. ಮಾರುಕಟ್ಟೆಯ ವಿದ್ಯುತ್ ಸಂಪರ್ಕ, ಬೀದಿ ದೀಪಗಳು ಹಾಗೂ ಇತರೆ ವಿದ್ಯುತ್ ವ್ಯವಸ್ಥೆಗಳನ್ನು ಸಮಗ್ರವಾಗಿ ಪರಿಶೀಲಿಸಿ, ದೋಷಗಳು ಕಂಡುಬಂದಲ್ಲಿ ಯಾವುದೇ ವಿಳಂಬವಿಲ್ಲದೆ ದುರಸ್ತಿ ಕೈಗೊಳ್ಳಬೇಕು ಎಂದು ಆಯುಕ್ತ ಜಗದೀಶ್ ನಿರ್ದೇಶನ ನೀಡಿದ್ದಾರೆ.

ಶಾಶ್ವತ ಪರಿಹಾರ:

ಕೆ.ಆರ್.ಮಾರುಕಟ್ಟೆಯ ಸೊಪ್ಪು ಮಾರುಕಟ್ಟೆ ಪ್ರದೇಶದಲ್ಲಿ ಮಳೆ ಹಾಗೂ ತ್ಯಾಜ್ಯ ನೀರು ನಿಂತು ಕೆಸರು ಉಂಟಾಗುತ್ತಿರುವುದರಿಂದ ವ್ಯಾಪಾರಿಗಳು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಮಾರಾಟ ಮಾಡುವ ಸೊಪ್ಪು ಸಹ ಅಶುಚಿತ್ವಗೊಳ್ಳುವುದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ಅಗತ್ಯವಿರುವ ಸ್ಥಳಗಳಲ್ಲಿ ಕಡೆ ಕಾಂಕ್ರೀಟೀಕರಣ ಕೈಗೊಂಡು ನೀರು ನಿಲ್ಲದಂತೆ ಸೂಕ್ತ ಇಳಿಜಾರು ಹಾಗೂ ನೀರು ಹರಿವಿನ ವ್ಯವಸ್ಥೆ ಕಲ್ಪಿಸುವಂತೆ ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದರು.

PREV
Read more Articles on
click me!

Recommended Stories

ಯಲಹಂಕ, ಆನೇಕಲ್ ತಾಲೂಕುಗಳು ಈಗ ಬೆಂಗಳೂರು ಜಲಮಂಡಳಿ ವ್ಯಾಪ್ತಿಗೆ, ಆದ್ರೆ ಸದ್ಯಕ್ಕೆ ಕಾವೇರಿ ನೀರಿಲ್ಲ
ಪ್ರಧಾನಿ ಮೋದಿ, ಶಾ, ಸಿಂಹ ಸೇರಿ ಬಿಜೆಪಿ ನಾಯಕರ ಮುಗಿಸಲು ದೊಡ್ಡ ಸಂಚು! ಟೆಲಿಗ್ರಾಂ ಗ್ರೂಪ್‌ನಲ್ಲಿ ಬಂಧಿತ ಉಗ್ರರು ಶಾಕಿಂಗ್ ಡಿಸ್ಕಸ್!