ಸಜ್ಜನ ರಾಜಕಾರಣಿಗಳಿದು ಕಾಲವಲ್ಲ : ಸಾಮಾನ್ಯ ಕುಟುಂಬದಿಂದ ಬಂದು ಎತ್ತರಕ್ಕೆ ಏರಿದ್ದು ಪವಾಡ

By Kannadaprabha News  |  First Published Mar 16, 2023, 5:32 AM IST

ಸಜ್ಜನ ರಾಜಕಾರಣಿಗಳು. ನೈತಿಕ ಗಟ್ಟಿತನ ಉಳಿಸಿಕೊಂಡವರು, ಸಿದ್ಧಾಂತವನ್ನು ಇಟ್ಟುಕೊಂಡು ರಾಜಕಾರಣಕ್ಕೆ ಬಂದಂತವರು ರಾಜಕೀಯದಲ್ಲಿ ಉಳಿಯಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್‌ ವಿಷಾದಿಸಿದರು.


 ಮೈಸೂರು :  ಸಜ್ಜನ ರಾಜಕಾರಣಿಗಳು. ನೈತಿಕ ಗಟ್ಟಿತನ ಉಳಿಸಿಕೊಂಡವರು, ಸಿದ್ಧಾಂತವನ್ನು ಇಟ್ಟುಕೊಂಡು ರಾಜಕಾರಣಕ್ಕೆ ಬಂದಂತವರು ರಾಜಕೀಯದಲ್ಲಿ ಉಳಿಯಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್‌ ವಿಷಾದಿಸಿದರು.

ವಿಶ್ವಮಾನವ ವಿಶ್ವವಿದ್ಯಾನಿಲಯ ನೌಕರರ ವೇದಿಕೆಯು ವಿವಿ ಸಂಜೆ ಕಾಲೇಜಿನ ಎದುರು ಬುಧವಾರ ಏರ್ಪಡಿಸಿದ್ದ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಬಂಡವಾಳಶಾಹಿಗಳು, ರೌಡಿ ಶೀಟರ್‌ಗಳು, ನಿವೃತ್ತ ಐಎಎಸ…, ಐಪಿಎಸ್‌ ಅಧಿಕಾರಿಗಳು ಸೇರಿದಂತೆ ಅನೇಕರು ತಮ್ಮ ಭ್ರಷ್ಟಾಚಾರವನ್ನು ಮುಚ್ಚಿಹಾಕಿಕೊಳ್ಳಲು ರಾಜಕೀಯವನ್ನು ಪ್ರವೇಶವನ್ನು ಮಾಡುತ್ತಿದ್ದಾರೆ. ಇದರಿಂದ ನಮ್ಮಂಥವರು ರಾಜಕೀಯದಿಂದ ನಿವೃತ್ತಿ ಪಡೆದು ಮನೆಯಲ್ಲಿ ಇರುವುದೇ ಮೇಲು ಎನಿಸುತ್ತಿದೆ ಎಂದರು.

Latest Videos

undefined

ಧ್ರುವನಾರಾಯಣ ಅವರು ಒಂದು ಸಾಮಾನ್ಯ ಕುಟುಂಬದಿಂದ ಬಂದಂತವರು. ಒಬ್ಬ ಶಾಸಕರ ಮಗ ಅಥವಾ ಮಂತ್ರಿ ಮಗ ಶಾಸಕ ರಾಗುವುದರಲ್ಲಿ ಆಶ್ಚರ್ಯವೇನಿಲ್ಲ. ಆದರೆ ಸಾಮಾನ್ಯ ಕುಟುಂಬದಿಂದ ಬಂದು ಶಾಸಕ, ಸಂಸದರಾಗಿ ಯಶಸ್ಸು ಪಡೆಯುವುದು ಜೀವನದಲ್ಲೇ ಮರುಜನ್ಮ ಪಡೆದಂತೆ. ಅಂತಹ ವಾತಾವರಣದಲ್ಲಿ ಬೆಳೆದು ಸಂಸದರಾಗಿ ಧ್ರುವನಾರಾಯಣ ಬಂದಿದ್ದು ಪವಾಡ. ಆದ್ದರಿಂದ ನೈತಿಕ ರಾಜಕಾರಣದಲ್ಲೇ ಜೀವನ ಕಳೆದ ಧ್ರುವನಾರಾಯಣ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದರು.

ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಮಾತನಾಡಿ, 2004ರ ನಂತರ ರಾಜಕಾರಣದ ದಿಕ್ಕು ಬದಲಾಗಿದೆ. ನೈತಿಕ ಅಧಃಪತನ ಕಂಡುಬರುತ್ತಿದೆ. ಪ್ರಸ್ತುತ ಕೋಟಿಗಟ್ಟಲೇ ಹಣವಿಲ್ಲದೇ ಚುನಾವಣೆಗೆ ಸ್ಪರ್ಧಿಸಲಾಗದು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಇವೆಲ್ಲದರ ನಡುವೆ ಧ್ರುವನಾರಾಯಣ ಅವರಂತಹ ಸರಳ, ಸಜ್ಜನ, ದಕ್ಷ, ಕ್ರಿಯಾಶೀಲ ರಾಜಕಾರಣಿಗಳು ಇದ್ದಾರೆ ಎಂದರು.

ಧ್ರುವನಾರಾಯಣ ಅವರು 2009 ಮತ್ತು 2014ರಲ್ಲಿ ಸಂಸದರಾಗಿ ನರೇಗಾ ಸ್ಥಾಯಿ ಸಮಿತಿಯ ಸದಸ್ಯರಾಗಿ ಅದ್ಭುತ ಕೆಲಸವನ್ನು ನಿರ್ವಹಿಸಿದ್ದರು. ಹಿಂದುಳಿದ ಚಾಮರಾಜನಗರ ಜಿಲ್ಲೆಗೆ ಕೇಂದ್ರ ಸರ್ಕಾರದಿಂದ ಹೊಸ ಹೊಸ ಯೋಜನೆಗಳನ್ನು ತರುವಂತ ಕೆಲಸವನ್ನು ಮಾಡಿದರು. ಮೈಸೂರಿಂದ ಸುಲ್ತಾನ… ಬತ್ತೇರಿವರೆಗಿನ ರಸ್ತೆ ಮತ್ತು ಟಿ. ನರಸೀಪುರ ರಾಷ್ಟ್ರೀಯ ಹೆದ್ದಾರಿಯ ಹಿಂದೆ ಧ್ರುವನಾರಾಯಣ ಅವರ ಶ್ರಮವಿದೆ ಎಂದರು.

ಸರಳ ಸಜ್ಜನಿಕೆಯ ಪ್ರಾಮಾಣಿಕ ರಾಜಕಾರಣಿಗಳಲ್ಲಿ ಧ್ರುವನಾರಾಯಣ ಎಂದೆಂದೂ ಜೀವಂತ. ಎರಡು ಬಾರಿ ಶಾಸಕರು, ಎರಡು ಬಾರಿ ಸಂಸದರಾಗಿ ಧ್ರುವನಾರಾಯಣ ಆಯ್ಕೆಯಾಗಿದ್ದರು. 2004 ರಲ್ಲಿ ಒಂದೇ ಒಂದು ಮತದ ಅಂತರದಿಂದ ಆಯ್ಕೆಯಾಗಿ ಇಡೀ ಭಾರತವೇ ಸಂತೇಮರಹಳ್ಳಿ ಕ್ಷೇತ್ರದತ್ತ ನೋಡುವಂತೆ ಮಾಡಿದರು. ಎಂದು ಮೈಸೂರು ವಿವಿ ಸಂಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಸಿ.ಡಿ. ಪರುಶುರಾಮ ಹೇಳಿದರು.

ಮೈಸೂರು ವಕೀಲರ ಸಂಘದ ಕಾರ್ಯದರ್ಶಿ ಎಸ್‌. ಉಮೇಶ್‌ ಮಾತನಾಡಿ, ಧ್ರುವನಾರಾಯಣ ಅವರನ್ನು ಕಳೆದುಕೊಂಡಿರುವುದು ಕೇವಲ ಮೈಸೂರಿಗೆ ಚಾಮರಾಜನಗರ ಕಷ್ಟೆಅಲ್ಲ ಸಂಪೂರ್ಣ ಕರ್ನಾಟಕಕ್ಕೆ ತುಂಬಲಾರದ ನಷ್ಟ ಎಂದರು.

ಮಹಾರಾಜ ಕಾಲೇಜಿನ ಪ್ರಾಂಶುಪಾಲ ಪ್ರೊ.ಸಿ.ಎ. ಶ್ರೀಧರ್‌, ಮೈಸೂರು ವಿವಿ ಸಂಜೆ ಕಾಲೇಜಿನ ಪ್ರಾಂಶುಪಾಲ ಡಾ.ಎಚ್‌. ಸೋಮಶೇಖರಪ್ಪ, ಲಕ್ಷ್ಮೇಪುರಂ ಠಾಣೆ ಇನ್ಸ್‌ಪೆಕ್ಟರ್‌ ಮೋಹಿತ್‌ ಮಾತನಾಡಿದರು.

ಕರ್ನಾಟಕ ಪೊಲೀಸ್‌ ಅಕಾಡೆಮಿ ಡಿವೈಎಸ್ಪಿ ಶಿವಶಂಕರ್‌, ನಂಜನಗೂಡು ಸಹಾಯಕ ಪ್ರಾಧ್ಯಾಪಕ ಬಿ. ಜಗದೀಶ್‌, ಮೈವಿವಿ ಪ.ಜಾತಿ ಮತ್ತುವರ್ಗ ವಿಭಾಗದ ಉಪ ಕುಲಸಚಿವ ಪ್ರೊ.ಮಹದೇವಮೂರ್ತಿ, ಜಿಲ್ಲಾ ಕಸಾಪ ಕೋಶಾಧ್ಯಕ್ಷ ಜಿ. ಪ್ರಕಾಶ್‌, ವೇದಿಕೆಯ ಅಧ್ಯಕ್ಷ ಆರ್‌. ವಾಸುದೇವ, ಉಪಾಧ್ಯಕ್ಷ ಭಾಸ್ಕರ್‌, ಕಾರ್ಯದರ್ಶಿ ವಿನೋದ್‌, ಸಹ ಕಾರ್ಯದರ್ಶಿ ಯೋಗೇಶ್‌,ಖಜಾಂಚಿ ಶಿವಕುಮಾರ್‌, ಉಪನ್ಯಾಸಕಿ ಡಾ.ಬಿ.ಎಸ್‌. ದಿನಮಣಿ, ಚೆಲುವಾಂಬಿಕೆ, ಆನಂದ್‌ ಮೊದಲಾದವರು ಇದ್ದರು. ಮಹಾರಾಣಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ವಿ.ಆರ್‌. ರಮೇಶ್‌ ಬಾಬು ನಿರೂಪಿಸಿದರು.

--ಚಿರಸ್ಥಾಯಿಯಾಗಲಿ--

ಚಾಮರಾಜ ಕ್ಷೇತ್ರದ ಕಾಂಗ್ರೆಸ್‌ ಮುಖಂಡ ಕೆ. ಹರೀಶ್‌ಗೌಡ ಮಾತನಾಡಿ, ಧ್ರುವನಾರಾಯಣ ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯಬೇಕು. ಇದಕ್ಕಾಗಿ ಮೈಸೂರು ವಿವಿಯಲ್ಲಿ ದತ್ತಿನಿಧಿ ಸ್ಥಾಪಿಸಿ, ವಿದಾರ್ಥಿಗಳಿಗೆ ಬಹುಮಾನ ನೀಡುವುದಾದರೇ ತಾವು ಅದಕ್ಕೆ ತಗಲುವ ವೆಚ್ಚ ಭರಿಸುವುದಾಗಿ ಭರವಸೆ ನೀಡಿದರು.

click me!