ಬೆಂಗಳೂರಲ್ಲಿ ಮುಂದುವರಿದ ಪಿರಿಪಿರಿ ಮಳೆ, ಚಳಿಗಾಳಿ...!

By Kannadaprabha NewsFirst Published Dec 7, 2020, 7:20 AM IST
Highlights

ಭಾನುವಾರ ಸಂಜೆ ಬಿರುಸಿನ ಮಳೆ| ಇನ್ನೂ 3 ದಿನ ಸಿಲಿಕಾನ್‌ ಸಿಟಿ ಗಡ ಗಡ| ಹಲವು ಪ್ರದೇಶಗಳಲ್ಲಿ ತುಂತುರು ಮಳೆ ನಿರೀಕ್ಷೆ| ಸಿಗೇಹಳ್ಳಿ ಮತ್ತು ದೊಮ್ಮಲೂರಿನಲ್ಲಿ ಅಧಿಕ ಮಳೆ| 

ಬೆಂಗಳೂರು(ಡಿ.07): ನಗರದಲ್ಲಿ ಭಾನುವಾರವು ಚಳಿ ಹಾಗೂ ಮೋಡ ಕವಿದ ವಾತಾವರಣ ಮುಂದುವರೆದಿದ್ದು, ಸಂಜೆ ಜೋರು ಮಳೆ ಸುರಿಯಿತು. ಕನ್ಯಾಕುಮಾರಿ ಭಾಗದಲ್ಲಿರುವ ಚಂಡಮಾರುತದ ಪ್ರಭಾವ ಸಂಪೂರ್ಣ ತಗ್ಗದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬಿಸಿಲಿನ ದರ್ಶನವಾಗಿಲ್ಲ. ಮೋಡ ಕವಿದ ವಾತಾವರಣ ಕಂಡು ಬಂದಿದ್ದು, ಸಿಗೇಹಳ್ಳಿ ಮತ್ತು ದೊಮ್ಮಲೂರಿನಲ್ಲಿ ಅಧಿಕ ಮಳೆ ಬಿದ್ದಿದೆ.\

ಬೆಳಗ್ಗೆಯಿಂದ ತೇವಾಂಶ ಸಹಿತ ಗಾಳಿ ಕಂಡು ಬಂತು. ಮೆಜೆಸ್ಟಿಕ್‌, ಶೇಷಾದ್ರಿಪುರಂ, ಶಿವಾನಂದ ವೃತ್ತ, ಜಯನಗರ, ಜೆ.ಪಿ.ನಗರ, ರಾಜಾಜಿನಗರ, ಮಲ್ಲೇಶ್ವರಂ, ವಿಜಯನಗರ ಸೇರಿದಂತೆ ವಿವಿಧೆಡೆ ಸಂಜೆ 4.30ರ ವೇಳೆಗೆ ಏಕಾಎಕಿ ಜೋರು ಮಳೆ ಸುರಿಯಿತು.

ಬುರೆವಿ ಅಬ್ಬರ ಕ್ಷೀಣಿಸಿದ್ರೂ ಬೆಂಗ್ಳೂರಲ್ಲಿ ಹೆಚ್ಚಾದ ಚಳಿ

ಇನ್ನೂ 3 ದಿನ ಇದೇ ವಾತಾವರಣ:

ನಗರದಲ್ಲಿ ಗರಿಷ್ಠ 24, ಕನಿಷ್ಠ 19 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ. ಡಿ.9ರವರೆಗೂ ನಗರದಲ್ಲಿ ಚಳಿ ಹಾಗೂ ಮೋಡ ಕವಿದ ವಾತಾವರಣ ಮುಂದುವರಿಯಲಿದೆ. ಹಲವು ಪ್ರದೇಶಗಳಲ್ಲಿ ತುಂತುರು ಮಳೆ ನಿರೀಕ್ಷೆ ಇದೆ ಎಂದು ಉಸ್ತುವಾರಿ ಕೇಂದ್ರ ಮುನ್ಸೂಚನೆ ನೀಡಿದೆ.

ಎಲ್ಲೆಲ್ಲಿ ಎಷ್ಟು ಮಳೆ?

ರಾತ್ರಿ 8.30ರ ವೇಳೆಗೆ 2.08 ಮಿ.ಮೀ. ಸರಾಸರಿ ಮಳೆಯಾಗಿದ್ದು, ದೊಮ್ಮಲೂರು ಮತ್ತು ಸಿಗೇಹಳ್ಳಿ ಅಧಿಕ ಮಳೆ ತಲಾ 9.5 ಮಿ.ಮೀ. ದಾಖಲಾಗಿದೆ. ಉಳಿದಂತೆ ಹೂಡಿ 9, ಕಾಡುಗೋಡಿ 8.5, ಕೆ.ಆರ್‌.ಪುರಂ, ಹೊನ್ನಾರಪೇಟೆ ಹಾಗೂ ಆವಲಹಳ್ಳಿ ತಲಾ 7.5, ಸಂಪಂಗಿರಾಮನಗರ 7, ಹೊಯ್ಸಳನಗರ 6.5, ರಾಮಮೂರ್ತಿ ನಗರ ಮತ್ತು ನಾಗರಭಾವಿ ತಲಾ 5, ಬಾಣಸವಾಡಿ, ಕಾಟನ್‌ಪೇಟೆ ಮತ್ತು ಪುಲಕೇಶಿನಗರ ತಲಾ 4.5, ಆರ್‌.ಆರ್‌.ನಗರ ಮತ್ತು ಕುಶಾಲನಗರ ತಲಾ 3.5, ಅಗ್ರಹಾರ ದಾಸರಹಳ್ಳಿ 3 ಮಿ.ಮೀ. ಮಳೆ ದಾಖಲಾಗಿದೆ. ಮಳೆಯಿಂದಾಗಿ ಎಲ್ಲಿಯೂ ಹಾನಿ ಸಂಭವಿಸಿಲ್ಲ ಎಂದು ಬಿಬಿಎಂಪಿ ಸಹಾಯವಾಣಿ ಮಾಹಿತಿ ನೀಡಿದೆ.
 

click me!