ಚಿಕ್ಕಮಗಳೂರು: ಅತಿವೃಷ್ಟಿ, ಕಾಫಿಗೆ ಕವಡೆ ಕಾಸಿನ ಪರಿಹಾರ

By Kannadaprabha News  |  First Published Aug 23, 2019, 11:50 AM IST

ಮೂಡಿಗೆರೆ ತಾಲೂಕಿನ ಮಲೆಮನೆ, ಚನ್ನಹಡ್ಲು, ಬಾಳೂರು ಹೊರಟ್ಟಿಯಲ್ಲಿ ಹಲವು ಮಂದಿ ಕಾಫಿ ಬೆಳೆಗಾರರು ಅತಂತ್ರವಾಗಿದ್ದಾರೆ. ಲಕ್ಷಾಂತರ ರು. ಆದಾಯ ಬರುತ್ತಿದ್ದ ಕಾಫಿ ತೋಟಗಳು, ಅಲ್ಲೇ ನೆರಳು ಮಾಡಿಕೊಂಡಿರುವ ಮನೆಗಳು ಭಾರೀ ಮಳೆ, ಧರೆ ಕುಸಿತಕ್ಕೆ ಸಿಲುಕಿ ನೆಲಸಮವಾಗಿ ಹೋಗಿವೆ. ದಾನ ಮಾಡಿದ ಕೈಗಳು ನೆರವಿಗಾಗಿ ಚಾಚುತ್ತಿವೆ. 


ಚಿಕ್ಕಮಗಳೂರು(ಆ.23): ಅತಿವೃಷ್ಟಿ ಹಾಗೂ ನೆರೆಯಿಂದ ಹಾಳಾಗಿರುವ ಕಾಫಿ ಸೇರಿದಂತೆ ಇತರೆ ಬೆಳೆಗಳು ಹಾಗೂ ಜನ, ಜಾನುವಾರು, ಮನೆಗಳಿಗೆ ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್‌) ಮಾರ್ಗ ಸೂಚಿಯಲ್ಲಿ ನಿಗದಿಪಡಿಸಿರುವ ಪರಿಹಾರಧನ ಕವಡೆ ಕಾಸಿನಷ್ಟಿದೆ. ಈ ಪರಿಹಾರ ಧನ ಪರಿಷ್ಕರಣೆಯಾಗಬೇಕೆಂಬುದು ಬೆಳೆಗಾರರ ಹಕ್ಕೊತ್ತಾಯವಾಗಿದೆ. ಸದ್ಯದ ಮಾರ್ಗ ಸೂಚಿ ಪ್ರಕಾರ ನೀಡುವ ಪರಿಹಾರ ಅತ್ಯಂತ ಕೆಳಸ್ತರದಲ್ಲಿದೆ.

ಲಕ್ಷಾಂತರ ರು. ಆದಾಯ ಬರುತ್ತಿದ್ದ ಕಾಫಿ ತೋಟಗಳು, ಅಲ್ಲೇ ನೆರಳು ಮಾಡಿಕೊಂಡಿರುವ ಮನೆಗಳು ಭಾರೀ ಮಳೆ, ಧರೆ ಕುಸಿತಕ್ಕೆ ಸಿಲುಕಿ ನೆಲಸಮವಾಗಿ ಹೋಗಿವೆ. ಚಿಕ್ಕಮಗಳೂರು, ಕೊಡಗು ಹಾಗೂ ಹಾಸನ ಜಿಲ್ಲೆಗಳಲ್ಲಿ ಶೇ. 40 ರಷ್ಟುಕಾಫಿ ಬೆಳೆಗೆ ಹಾನಿ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಇದರಲ್ಲಿ ಶೇ. 15 ರಷ್ಟುಮಂದಿ ಮನೆ ಮತ್ತು ತೋಟಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಮೂಡಿಗೆರೆ ತಾಲೂಕಿನ ಮಲೆಮನೆ, ಚನ್ನಹಡ್ಲು, ಬಾಳೂರು ಹೊರಟ್ಟಿಯಲ್ಲಿ ಹಲವು ಮಂದಿ ಕಾಫಿ ಬೆಳೆಗಾರರು ಅತಂತ್ರವಾಗಿದ್ದಾರೆ. ದಾನ ಮಾಡಿದ ಕೈಗಳು ನೆರವಿಗಾಗಿ ಚಾಚುತ್ತಿವೆ.

Latest Videos

undefined

ಸವಾಲುಗಳು:

ವರ್ಷವಿಡೀ ತಮ್ಮ ತೋಟಗಳಲ್ಲಿ ಕಾರ್ಮಿಕರಿಗೆ ಕೂಲಿ ಕೆಲಸ ಕೊಟ್ಟು, ಸಾಧ್ಯವಾದರೆ ತಮ್ಮ ತೋಟಗಳಲ್ಲೇ ಮನೆಗಳನ್ನು ನಿರ್ಮಾಣ ಮಾಡಿಕೊಡುತ್ತಿರುವ ಕಾಫಿ ಬೆಳೆಗಾರರು ಅನಾದಿ ಕಾಲದಿಂದಲೂ ಇದೇ ರೀತಿಯಲ್ಲಿ ತಮ್ಮ ಜೀವನ ಶೈಲಿಯನ್ನು ರೂಢಿಸಿಕೊಂಡು ಬಂದಿದ್ದಾರೆ. ಆದರೆ, ಧರೆ ಕುಸಿತದಲ್ಲಿ ತೋಟ ಮತ್ತು ಮನೆಗಳನ್ನು ಕಳೆದುಕೊಂಡಿರುವ ಬೆಳೆಗಾರರು ಹಿಂದಿನ ಶೈಲಿಯಲ್ಲಿ ಜೀವನ ನಡೆಸಲು ಸಾಧ್ಯವಿಲ್ಲ. ಕಾರಣ, ಮನೆ, ತೋಟಗಳನ್ನು ಕಳೆದುಕೊಂಡಿದ್ದಾರೆ. ಮನೆಗಳ ನಿರ್ಮಾಣಕ್ಕೆ ಸರ್ಕಾರ ಸಹಾಯಧನ ನೀಡುತ್ತದೆ. ತೋಟಗಳ ಹಾನಿಗೆ ಪರಿಹಾರ ನೀಡುತ್ತದೆ. ಮನೆಯನ್ನು ಹೇಗೋ ಕಟ್ಟಿಕೊಳ್ಳಬಹುದು. ತೋಟ ಕಟ್ಟಲು ಸಾಧ್ಯವಿಲ್ಲ. ಒಂದು ತೋಟ ಫಸಲಿಗೆ ಬರಬೇಕಾದರೆ ಕನಿಷ್ಠ 7 ವರ್ಷ ಕಾಯಬೇಕು. ಅಂದರೆ ಮುಂದಿನ ಜೀವನ ಕಷ್ಟವಾಗಲಿದೆ. ಹಲವು ವರ್ಷಗಳಿಂದ ಗೌರವದಿಂದ ಬದುಕಿದ್ದ ಕೆಲವು ಕಾಫಿ ತೋಟಗಳ ಮಾಲೀಕರು, ಇದೀಗ ಅತಂತ್ರರಾಗಿದ್ದಾರೆ. ಹಲವು ಮಂದಿಗೆ ತೋಟಗಳ ನಿರ್ವಹಣೆ ಹೊರತುಪಡಿಸಿ ಬೇರೆನೂ ಕೆಲಸ ಗೊತ್ತಿಲ್ಲ.

ಪರಿಹಾರ ಎಷ್ಟು:

ಅತಿವೃಷ್ಟಿಯಿಂದ ಒಂದು ಹೆಕ್ಟೇರ್‌ ಕಾಫಿ ತೋಟ ನಾಶವಾದರೆ, ಎನ್‌ಡಿಆರ್‌ಎಫ್‌ ಮಾರ್ಗಸೂಚಿಯ ಪ್ರಕಾರ .16,000 ಸಾವಿರ ರು. ಪರಿಹಾರಧನ ಸಿಗಲಿದೆ. ಗರಿಷ್ಠ 2 ಹೆಕ್ಟೇರ್‌ವರೆಗೆ ಪರಿಹಾರ ಪಡೆಯಲು ಅವಕಾಶ ಇದೆ. ಒಂದು ವರ್ಷದಲ್ಲಿ ಒಂದು ಎಕರೆ ತೋಟ ನಿರ್ವಹಣೆಗೆ ಕನಿಷ್ಠ . 80,000 ಸಾವಿರ ರು. ಖರ್ಚಾಗಲಿದೆ. ಅಂದರೆ, ತೋಟಗಳ ನಿರ್ವಹಣೆಗೆ ಖರ್ಚು ಮಾಡಿರುವ ಹಣ ಪರಿಹಾರಧನದಲ್ಲಿ ಸಿಗುತ್ತಿಲ್ಲ. ಅದುದರಿಂದ ಪರಿಹಾರಧನ ಕಾಫಿ ಬೆಳೆಗಾರರ ಕಣ್ಣೀರು ಒರೆಸಲು ಸಾಧ್ಯವಿಲ್ಲ.

ಹೊಸದಾಗಿ ಮನೆಗಳ ನಿರ್ಮಾಣಕ್ಕೆ 5 ಲಕ್ಷ ರು. ಸಹಾಯಧನ ನೀಡಲು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. 100 ಚದರ ಅಡಿ ಮನೆಯಲ್ಲಿ ಜೀವನ ನಡೆಸಿದ್ದವರು . 5 ಲಕ್ಷ ರು. ವೆಚ್ಚದ ಮನೆಯಲ್ಲಿ ಜೀವನ ನಡೆಸುವುದು ಕಷ್ಟವಾಗಲಿದೆ. ಖಾಸಗಿ ಕಂಪನಿಗಳು ಕಾಫಿ ಬೆಳೆಗಾರರ ನೆರವಿಗೆ ಬಂದರೆ ಮಾತ್ರ ಚೇತರಿಸಿಕೊಳ್ಳಲು ಸಾಧ್ಯ.

ಮಳೆ ಮತ್ತು ಭೂ ಕುಸಿತದಿಂದ ಕಾಫಿ ಬೆಳೆಗೆ ಹಾನಿಯ ವಿವರ (ಹೆಕ್ಟೇರ್‌)

ತಾಲೂಕು ಹೆಕ್ಟೇರ್‌ ನಷ್ಟ(ರು.ಲಕ್ಷಗಳಲ್ಲಿ)

ಚಿಕ್ಕಮಗಳೂರು - 2650 1386

ಕೊಪ್ಪ - 1250 650

ಮೂಡಿಗೆರೆ - 24000 12480

ಎನ್‌.ಆರ್‌.ಪುರ - 350 185

ಶೃಂಗೇರಿ - 250 130

ಒಟ್ಟು - 28500 14831

- ಆರ್‌. ತಾರಾನಾಥ್‌

click me!