ಬೆಂಬಲ ಬೆಲೆಗೆ ಕೊಬ್ಬರಿ ಖರೀದಿಸಲು ತೆರೆದಿದ್ದ ಕೇಂದ್ರ ಸ್ಥಗಿತ : ರೈತರ ಆಕ್ರೋಶ

By Kannadaprabha NewsFirst Published Sep 23, 2020, 9:37 AM IST
Highlights

ಕೇಂದ್ರದ ಬೆಂಬಲ ಬೆಲೆಗೆ ಕೊಬ್ಬರಿ ಖರೀದಿಸಲು ತೆರೆದಿದ್ದ ಕೇಂದ್ರವನ್ನು ಸರ್ಕಾರ ಏಕಾಏಕಿ ಸ್ಥಗಿತಗೊಳಿಸುವ ಮೂಲಕ ಕೊಬ್ಬರಿ ಬೆಳೆಗಾರರಿಗೆ ಅನ್ಯಾಯವೆಸಗುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಿಪಟೂರು (ಸೆ.23): ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಸಹಕಾರ ಮಾರಾಟ ಮಂಡಳಿಯ ನ್ಯಾಫೆಡ್‌ ಸಂಸ್ಥೆವತಿಯಿಂದ ಕೇಂದ್ರದ ಬೆಂಬಲ ಬೆಲೆಗೆ ಕೊಬ್ಬರಿ ಖರೀದಿಸಲು ತೆರೆದಿದ್ದ ಕೇಂದ್ರವನ್ನು ಸರ್ಕಾರ ಏಕಾಏಕಿ ಸ್ಥಗಿತಗೊಳಿಸುವ ಮೂಲಕ ಕೊಬ್ಬರಿ ಬೆಳೆಗಾರರಿಗೆ ಅನ್ಯಾಯವೆಸಗುತ್ತಿದೆ ಎಂದು ಇಲ್ಲಿನ ಬೆಳೆಗಾರರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಂದು ಕಾಲದಲ್ಲಿ ಕೊಬ್ಬರಿ ನಾಡು ತಿಪಟೂರು ಮತ್ತು ಇಲ್ಲಿನ ಪ್ರಮುಖ ಕೊಬ್ಬರಿ ಬೆಳೆಗಾರರಿಗೆ ಎಲ್ಲಿಲ್ಲದ ಗೌರವ, ಬೆಲೆ ಇತ್ತು. ಕಲ್ಪತರು ನಾಡು ತಿಪಟೂರು ಕೊಬ್ಬರಿ ದೇಶಾದ್ಯಂತ ಪ್ರಸಿದ್ಧಿಯಾದ ಕಾಲವೊಂದಿತ್ತು. ಆದರೆ ಇತ್ತೀಚಿನ ದಿನಮಾನಗಳಲ್ಲಿ ಇಲ್ಲಿನ ರೈತರ ಜೀವನಾಧಾರ ವಾಣಿಜ್ಯ ಬೆಳೆ ತೆಂಗು ಹಾಗೂ ಕೊಬ್ಬರಿ ಬೆಲೆ ಕೈಕೊಟ್ಟಿದೆ. ತೀವ್ರತರ ಬರಗಾಲ, ಬಿಟ್ಟೂಬಿಡದೆ ಕಾಡುತ್ತಿರುವ ರೋಗರುಜಿನಗಳು ಸೇರಿದಂತೆ ಪ್ರಮುಖವಾಗಿ ಬಿದ್ದು ಹೋಗಿರುವ ಕೊಬ್ಬರಿ ಬೆಲೆ ಪರಿಣಾಮ ತೆಂಗು ರೈತನಿಗೆ ಎದ್ದೇಳಲಾರದಷ್ಟುಹೊಡೆತ ನೀಡಿರುವುದು ನಿಜಕ್ಕೂ ಆಘಾತ ತಂದೊಡ್ಡಿದೆ. ಇತ್ತೀಚೆಗೆ ತೆಂಗು ಇಳುವರಿಯೂ ಕುಂಠಿತವಾಗಿದ್ದು, ಕಾಯಿ ಮತ್ತು ಕೊಬ್ಬರಿ ಧಾರಣೆಗಳು ಕಡಿಮೆಯಾಗಿದ್ದು, ತೆಂಗು ಬೆಳೆಗಾರರ ಬದುಕು ಅಕ್ಷರಶಃ ಮೂರಾಬಟ್ಟೆಯಾಗಿದೆ.

ಕೃಷಿ ಕಾಯಿದೆ ಗುಟ್ಟುಗಳೇನು? ರೈತ ವಿರೋಧಿಯಾ-ಸ್ನೇಹಿಯಾ? ...

ದಶಕಗಳಿಂದಲೂ ತೆಂಗುಬೆಳೆಗಾರರ ಮೇಲೆ ಒಂದರ ಮೇಲೊಂದು ನಿರಂತರ ಹೊಡೆತಗಳು ಬಿದ್ದ ಪರಿಣಾಮ ಬ್ಯಾಂಕು-ಖಾಸಗಿಗಳಲ್ಲಿ ಮಾಡಿಕೊಂಡಿರುವ ಸಾಲಗಳ ಮೇಲಿನ ಬಡ್ಡಿಯನ್ನೂ ಕಟ್ಟಲಾಗದೆ ಅತ್ತ ಸಾಲ ತೀರಿಸಲಾಗದೆಯೂ ವಿಲವಿಲ ಒದ್ದಾಡುವಂತಹ ಪರಿಸ್ಥಿತಿ ರೈತರಿಗೆ ಬಂದೊದಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರಿಗೆ ಆ ಯೋಜನೆ ಇದೆ ಈ ಯೋಜನೆ ತಂದಿದ್ದೇವೆ ಎಂದು ಬರೀ ಬೊಗಳೆ ಬಿಡುತ್ತಾರೆ. ಆದರ ಯೋಜನೆಗಳ ಲಾಭ ರೈತರಿಗೆ ದೊರಕುತ್ತಿಲ್ಲ. ರೈತರಿಗೋಸ್ಕರ ಸರ್ಕಾರಗಳಿವೆ ಎಂದು ಹೇಳುವ ಜನಪ್ರತಿನಿಧಿಗಳು ರೈತರನ್ನು ಕಡೆಗಣಿಸುತ್ತಿದ್ದಾರೆ.

ಕಳೆದ 2ವರ್ಷಗಳ ಹಿಂದೆ ಇಲ್ಲಿ ಕ್ವಿಂಟಲ್‌ ಕೊಬ್ಬರಿಗೆ ರು. 15ಸಾವಿರದ ಆಸುಪಾಸಿನಲ್ಲಿತ್ತು. ಇತ್ತೀಚೆಗೆ ಆ ಬೆಲೆ ಕೊಬ್ಬರಿ ಬೆಂಬಲ ಬೆಲೆಗಿಂತ ಕಡಿಮೆ ಅಂದರೆ ಕ್ವಿಂಟಲ್‌ಗೆ 8ರಿಂದ 9 ಸಾವಿರಕ್ಕೆ ಇಳಿಯಿತು. ನಂತರ ಸಾಕಷ್ಟುಹೋರಾಟಗಳಾದ ಮೇಲೆ ಕೇಂದ್ರದ ಬೆಂಬಲ ಬೆಲೆ ರು. 10,300ಕ್ಕೆ ಸರ್ಕಾರ ನಫೆಡ್‌ವತಿಯಿಂದ ಖರೀದಿ ಕೇಂದ್ರ ತೆರೆದಿತ್ತು. ಇದಕ್ಕೆ ಪೂರಕವಾಗಿ ರಾಜ್ಯಸರ್ಕಾರ ಕ್ವಿಂಟಲ್‌ಗೆ ರು. 1ಸಾವಿರ ಪ್ರೋತ್ಸಾಹ ಬೆಲೆ ಸೇರಿ ಕ್ವಿಂಟಲ್‌ ಕೊಬ್ಬರಿಗೆ ರು. 11,300ರಂತೆ ರೈತರಿಂದ ಕಳೆದ 2ತಿಂಗಳಿಂದ ಕೊಂಡುಕೊಳ್ಳುತ್ತಿತ್ತು.

ಕೃಷಿ ಮಸೂದೆ ಖಂಡಿಸಿ ಸರ್ಕಾರದ ವಿರುದ್ಧ ಅನ್ನದಾತರ ಸಮರ; ಬೀದಿಗಿಳಿದಿದ್ದಾರೆ ರೈತರು

ಈಗ ಸಂಸ್ಥೆ ದಿಢೀರ್‌ ಖರೀದಿ ನಿಲ್ಲಿಸಿದ್ದು ಕೊಬ್ಬರಿ ಬೆಳೆಗಾರರಿಗೆ ಹೊಡೆತ ನೀಡಿದ್ದು ಸರ್ಕಾರ ಕೂಡಲೆ ಎಚ್ಚೆತ್ತು ಖರೀದಿ ಕೇಂದ್ರ ಮುಂದುವರಿಸಿದಲ್ಲಿ ಮಾರುಕಟ್ಟೆಯ ಧಾರಣೆಯು ಸಹ ಸ್ಥಿರವಾಗಿ ನಿಲ್ಲುವುದು ಎಂಬುದು ಇಲ್ಲಿನ ಮಾರುಕಟ್ಟೆಯ ಅಧ್ಯಕ್ಷ ಎಚ್‌.ಬಿ.ದಿವಾಕರ್‌ ಹಾಗೂ ಕಾರ್ಯದರ್ಶಿ ಸಿದ್ದುನ್ಯಾಮೇಗೌಡರ ಅಭಿಪ್ರಾಯ ಹಾಗೂ ರೈತ ಮುಖಂಡರುಗಳ ಒತ್ತಾಯವಾಗಿದೆ.

click me!