ಶೀಘ್ರದಲ್ಲೇ ತುಮಕೂರಿನ ಶಿರಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದ್ದು, ಬಿಜೆಪಿ ದೇವೇಗೌಡರ ವಿರುದ್ಧ ಪ್ರಯೋಗಿಸಿದ್ದ ಅಸ್ತ್ರವನ್ನೇ ಮತ್ತೆ ಪ್ರಯೋಗಿಸಲು ಮುಂದಾಗಿದೆ,
ವರದಿ : ಉಗಮ ಶ್ರೀನಿವಾಸ್
ತುಮಕೂರು (ಸೆ.23): ಕಳೆದ ಲೋಕಸಭಾ ಚುನಾವಣೆಯಲ್ಲಿ ತುಮಕೂರಿನಿಂದ ಜೆಡಿಎಸ್, ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ದೇವೇಗೌಡರು ಸ್ಪರ್ಧಿಸಿದ್ದಾಗ ‘ಗಂಗೆ ಶಾಪ’ ಅಸ್ತ್ರ ಪ್ರಯೋಗಿಸಿ ಬಿಜೆಪಿ ಚುನಾವಣೆಯಲ್ಲಿ ಗೆದ್ದಿದ್ದು ಇತಿಹಾಸ. ಈಗ ಮದಲೂರು ಕೆರೆಗೆ ನೀರು ಹರಿಸುವ ಅಸ್ತ್ರ ಪ್ರಯೋಗಿಸಿ ಶಿರಾ ಉಪಚುನಾವಣಾ ಅಖಾಡಕ್ಕೆ ಬಿಜೆಪಿ ಧುಮುಕಿದೆ.
ನಂಜುಂಡಪ್ಪ ವರದಿ ಪ್ರಕಾರ ಹಿಂದುಳಿದ ತಾಲೂಕು ಪೈಕಿ ಶಿರಾ ಕೂಡ ಒಂದಾಗಿದ್ದು ಜೆಡಿಎಸ್ ಶಾಸಕ ಬಿ. ಸತ್ಯನಾರಾಯಣ ಅವರ ನಿಧನದಿಂದಾಗಿ ಉಪಚುನಾವಣೆ ನಡೆಯಲಿದೆ. ಈಗಾಗಲೇ ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ಪೈಕಿ 4ರಲ್ಲಿ ಗೆದ್ದಿರುವ ಬಿಜೆಪಿ ಉಪಚುನಾವಣೆಯಲ್ಲಿ ಗೆಲ್ಲುವ ಉಮೇದಿನಲ್ಲಿದೆ. ಈಗಾಗಲೇ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ. ಸುರೇಶಗೌಡ ಅವರು ಕ್ಷೇತ್ರದಲ್ಲಿ ಮೊಕ್ಕಾಂ ಹೂಡಿದ್ದಾರೆ. ಎರಡನೇ ಬಾರಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಬಳಿಕ ಅವರು ಎದುರಿಸುತ್ತಿರುವ ಮೊದಲ ಚುನಾವಣೆ ಇದಾಗಿದೆ.
ಪ್ರತಿಭಟನೆಗೆ ಡಿಕೆ ಶಿವಕುಮಾರ್ ಬೆಂಬಲ: ಹೆಚ್ಚಿದ ರೈತರ ಬಲ ...
ಈಗಾಗಲೇ ಹಿಂದೂ ದೇವಾಲಯಗಳಿಗೆ ಅನುದಾನ ಘೋಷಿಸಿರುವ ಬಿಜೆಪಿ ಮದಲೂರು ಕೆರೆಗೆ ನೀರು ಹರಿಸುವ ಭರವಸೆಯನ್ನು ನೀಡಿದೆ. ಅಲ್ಲದೇ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಕೂಡ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಶಿರಾ ಉಪಚುನಾವಣೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಜೆಡಿಎಸ್‌ನ ಭದ್ರಕೋಟೆಯಾಗಿದ್ದ ಮಂಡ್ಯ ಜಿಲ್ಲೆ ಕೆಆರ್ ಪೇಟೆ ತಾಲೂಕಿನಲ್ಲಿ ಬಿಜೆಪಿ ಖಾತೆ ತೆರೆದ ರೀತಿಯೇ ಶಿರಾ ಉಪಚುನಾವಣೆಯಲ್ಲಿ ಗೆಲುವು ಸಾಧಿಸುವ ವಿಶ್ವಾಸವನ್ನು ಈಗಾಗಲೇ ವಿಜಯೇಂದ್ರ ಪ್ರಕಟಿಸಿದ್ದಾರೆ.
ಕುಂಚಿಟಿಗ ಒಕ್ಕಲಿಗರು, ಮುಸ್ಲಿಂರು, ಹಿಂದುಳಿದ ವರ್ಗ ಹೀಗೆ ಬಹು ಜಾತಿಗಳನ್ನೊಳಗೊಂಡ ಮತದಾರರು ಇಲ್ಲಿದ್ದು ಹಿಂದುಳಿದ ವರ್ಗಗಳ ಮತ ಹಾಗೂ ಕುಂಚಿಟಿಗ ಮತಗಳನ್ನು ವಿಭಜಿಸಿ ಹೆಚ್ಚುವರಿ ಮತ ಪಡೆಯುವ ಕಾರ್ಯತಂತ್ರದಲ್ಲಿ ಬಿಜೆಪಿ ತೊಡಗಿದೆ. ಇನ್ನು ಕಾಂಗ್ರೆಸ್‌ಗೂ ಕೂಡ ಇದು ಪ್ರತಿಷ್ಠೆಯ ಕ್ಷೇತ್ರ. ಈಗಾಗಲೇ 6 ಬಾರಿ ಶಾಸಕರಾಗಿದ್ದ ಜಯಚಂದ್ರ ಅವರು ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಇನ್ನು ಡಿ.ಕೆ. ಶಿವಕುಮಾರ್ ಅಧ್ಯಕ್ಷರಾದ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆಯಾಗಿರುವುದರಿಂದ ಅವರಿಗೂ ಈ ಕ್ಷೇತ್ರ ಗೆಲ್ಲಿಸಿಕೊಳ್ಳುವ ಅನಿವಾರ್ಯತೆ ಇತ್ತು. ಇನ್ನು ಜೆಡಿಎಸ್ ಕ್ಷೇತ್ರವೇ ಇದಾಗಿರುವುದರಿಂದ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲೇಬೇಕಾಗಿದೆ.
ಬಿಎಸ್‌ವೈ ಸರ್ಕಾರಕ್ಕೆ ಇಕ್ಕಟ್ಟು ತಂದಿಟ್ಟ ಸಿದ್ದರಾಮಯ್ಯ .
ಸದ್ಯ ಕಾಂಗ್ರೆಸ್ ತನ್ನ ಅಭ್ಯರ್ಥಿಯಾಗಿ ಟಿ.ಬಿ. ಜಯಚಂದ್ರ ಅವರನ್ನು ಅಂತಿಮಗೊಳಿಸಿದೆ. ಇನ್ನು ಜೆಡಿಎಸ್ ಮತ್ತು ಬಿಜೆಪಿ ತನ್ನ ಅಭ್ಯರ್ಥಿಯನ್ನು ಘೋಷಿಸಿಲ್ಲ. ಜೆಡಿಎಸ್ ಪಕ್ಷ ತನ್ನ ಅಭ್ಯರ್ಥಿಯನ್ನಾಗಿ ಬಿ. ಸತ್ಯನಾರಾಯಣ ಕುಟುಂಬದ ಯಾರಿಗಾದರೂ ಕೊಡಬೇಕೆ ಅಥವಾ ಬೇರೆಯವರಿಗೆ ಕೊಡಬೇಕೆ ಎಂಬ ಜಿಜ್ಞಾಸೆಯಲ್ಲಿದೆ. ಬಿಜೆಪಿ ಕೂಡ ಇಲ್ಲಿಯವರೆಗೂ ಅಭ್ಯರ್ಥಿ ಬಗ್ಗೆ ಗುಟ್ಟು ಬಿಟ್ಟು ಕೊಟ್ಟಿಲ್ಲ. ಆದರೆ ಕ್ಷೇತ್ರದಾದ್ಯಂತ ಪಕ್ಷದ ಮುಖಂಡರು ಸರಣಿ ಸಭೆಗಳನ್ನು ಮಾಡುತ್ತಿದ್ದಾರೆ.
ನೀರಿನ ಅಸ್ತ್ರ ಫಲ ನೀಡಿತೆ? : ಶಿರಾ ತಾಲೂಕಿನಲ್ಲಿ ಕಳೆದ ಹಲವಾರು ದಶಕಗಳಿಂದ ಕ್ಷೇತ್ರದ ಜನತೆ ಇಡುತ್ತಿರುವ ಪ್ರಮುಖ ಬೇಡಿಕೆ ಮದಲೂರು ಕೆರೆಗೆ ಹೇಮಾವತಿ ನೀರು ಹರಿಸುವುದೇ ಆಗಿದೆ. ಈಗಾಗಲೇ ಬಿಜೆಪಿ ಮದಲೂರು ಕೆರೆಗೆ ನೀರು ಹರಿಸುವ ಘೋಷಣೆ ಮಾಡಿಯೇ ಬಿಟ್ಟಿದೆ. ಕಳೆದ ಲೋಕಸಭಾ ಚುನಾವಣೆ ವೇಳೆ ತುಮಕೂರಿಗೆ ನಿಗದಿಯಾಗಿರುವ ನೀರನ್ನು ಹರಿಸಲು ಹಾಸನ ಜಿಲ್ಲೆಯ ದೇವೇಗೌಡ ಹಾಗೂ ಅವರ ಮಕ್ಕಳು ಅಡ್ಡಗಾಲು ಹಾಕುತ್ತಿದ್ದಾರೆ. ಹೀಗಾಗಿ ತುಮಕೂರಿನಿಂದ ಸ್ಪರ್ಧಿಸಿದ್ದ ದೇವೇಗೌಡರಿಗೆ ಗಂಗೆ ಶಾಪ ತಗುಲಲಿದೆ ಎಂಬ ಅಸ್ತ್ರವನ್ನು ಬಿಜೆಪಿ ಬಿಟ್ಟಿತ್ತು. ದೇವೇಗೌಡರು ಆ ಚುನಾವಣೆಯಲ್ಲಿ ಪರಾಭವಗೊಂಡು ಬಿಜೆಪಿ ಅಭ್ಯರ್ಥಿ ಬಸವರಾಜು ಸಂಸದರಾಗಿ ಆಯ್ಕೆಯಾಗಿದ್ದರು. ಈಗ ಮದಲೂರು ಕೆರೆಗೆ ನೀರು ಹರಿಸುವ ಘೋಷಣೆ ಮಾಡುವ ಮೂಲಕ ಮತ್ತೆ ಬಿಜೆಪಿ ಬರದ ನಾಡಿನಲ್ಲಿ ನೀರಿನ ಅಸ್ತ್ರ ಪ್ರಯೋಗಿಸಿದೆ. ಅದು ಎಷ್ಟರ ಮಟ್ಟಿಗೆ ವರವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.