ಬದಲಾಗುತ್ತಾ ಕರಾವಳಿಯ ವಿಮಾನ, ರೈಲ್ವೆ ನಿಲ್ದಾಣದ ಹೆಸರು.?

By Kannadaprabha NewsFirst Published Dec 9, 2020, 1:27 PM IST
Highlights

ದಕ್ಷಿಣ ಕನ್ನಡದಲ್ಲಿ ಇದೀಗ ಹೆಸರು ಬದಲಾವಣೆಯ ಹೋರಾಟದ ಪರ್ವ ಆರಂಭಗೊಂಡಿದೆ. ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣಗಳ ಹೆಸರು ಬದಲಾಗುತ್ತಾ..?

ಮಂಗಳೂರು (ಡಿ.09):  ಸದಾ ಒಂದಿಲ್ಲೊಂದು ಸುದ್ದಿಯಲ್ಲಿ ನಾಡಿನ ಗಮನ ಸೆಳೆಯುತ್ತಿರುವ ಕರಾವಳಿ ಜಿಲ್ಲೆ ಈಗ ಪ್ರಮುಖ ಸ್ಥಳಗಳಿಗೆ ಹೆಸರು ಇರಿಸುವ ವಿಚಾರದಲ್ಲಿ ಹೋರಾಟದ ಕೇಂದ್ರ ಬಿಂದುವಾಗಿದೆ.

ಕೊರೋನಾ ಅನ್‌ಲಾಕ್‌ ಶುರುವಾದ್ದೇ ತಡ ಕರಾವಳಿಗರಲ್ಲಿ ಸ್ಥಳಗಳಿಗೆ ಹೆಸರಿಗಾಗಿ ಪೈಪೋಟಿ ಆರಂಭವಾಗಿದೆ. ಒಂದೇ ಸ್ಥಳಕ್ಕೆ ಹಲವು ಹೆಸರು ಇರಿಸಬೇಕು ಎಂಬ ಬಲವಾದ ಆಗ್ರಹದ ವರೆಗೆ ಹೋರಾಟ ಬಂದು ನಿಂತಿದೆ.

ಹೆಸರಿನ ಪೈಪೋಟಿ ಎಲ್ಲೆಲ್ಲ?:

ಕರಾವಳಿಯಲ್ಲಿ ಈಗ ರಸ್ತೆ, ವಿಮಾನ ನಿಲ್ದಾಣ, ರೈಲು ನಿಲ್ದಾಣಗಳಿಗೆ ಹೆಸರು ಇರಿಸುವ ಭರಾಟೆ ನಡೆಯುತ್ತಿದೆ. ಈಗಾಗಲೇ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತುಳುನಾಡಿನ ಕಾರಣಿಕ ಪುರುಷರಾದ ಕೋಟಿ ಚೆನ್ನಯರ ಹೆಸರು ಇರಿಸಬೇಕು ಎಂಬ ಒತ್ತಾಯ, ಹೋರಾಟ ನಡೆಯುತ್ತಿದೆ. ಇದರ ಜೊತೆಗೆ ವಿಮಾನ ನಿಲ್ದಾಣಕ್ಕೆ ಪೋರ್ಚುಗೀಸರನ್ನು ಹಿಮ್ಮೆಟ್ಟಿಸಿದ ಉಳ್ಳಾಲದ ವೀರರಾಣಿ ಅಬ್ಬಕ್ಕ, ಕರಾವಳಿಯ ಬೃಹತ್‌ ಉದ್ದಿಮೆಗಳ ನಿರ್ಮಾತೃ ಶ್ರೀನಿವಾಸ ಮಲ್ಯ ಹಾಗೂ ಮಧ್ವಶಂಕರ ಹೆಸರು ಇರಿಸಬೇಕು ಎಂಬ ಇನ್ನೊಂದು ಬೇಡಿಕೆ ಕೇಳಿಬರುತ್ತಿದೆ. ಇದಾವುದೂ ಬೇಡ, ಎಲ್ಲವನ್ನೂ ಸಮ್ಮಿಳಿತಗೊಂಡ ತುಳುನಾಡು ಏರ್‌ಪೋರ್ಟ್‌ ಎಂದು ಹೆಸರು ಇರಿಸುವಂತೆ ಇನ್ನೊಂದು ಒತ್ತಾಯವೂ ಪ್ರಬಲವಾಗಿ ಕೇಳಿಬಂದಿದೆ.

ಮೈಸೂರು- ಮಂಗಳೂರು ವಿಮಾನ : ಯಾವಾಗಿಂದ ಆರಂಭ..? ...

ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ ಹೆಸರು ಇರಿಸುವಂತೆ 2019ರಲ್ಲಿ ಪಡುಪೆರಾರ ಗ್ರಾಮ ಪಂಚಾಯ್ತಿ ನಿರ್ಣಯ ಕೈಗೊಂಡಿತ್ತು. ಈ ನಿರ್ಣಯವನ್ನು ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಲ್ಲೂ ಅಂಗೀಕರಿಸಲಾಗಿತ್ತು. ಅಲ್ಲಿಂದ ರಾಜ್ಯ ಸರ್ಕಾರಕ್ಕೆ ಶಿಫಾರಸಿಗೆ ನಿರ್ಣಯವನ್ನು ಕಳುಹಿಸಲಾಗಿತ್ತು. ಆದರೆ ವಿಮಾನ ನಿಲ್ದಾಣಕ್ಕೆ ಹೆಸರು ಇರಿಸುವ ಅಧಿಕಾರ ತನಗೆ ಇಲ್ಲ ಎಂದು ರಾಜ್ಯ ಸರ್ಕಾರ ಮರುತ್ತರ ನೀಡಿ ಕೈತೊಳೆಯಿತು. ಇದೇ ವೇಳೆ ವಿಮಾನ ನಿಲ್ದಾಣ ನಿರ್ವಹಣೆಯನ್ನು ಕೇಂದ್ರ ಸರ್ಕಾರ ಅದಾನಿ ಗ್ರೂಪ್‌ಗೆ ನೀಡಿರುವುದು, ವಿಮಾನ ನಿಲ್ದಾಣ ಎದುರು ಅದಾನಿ ನಾಮಫಲಕ ಕಾಣಿಸಿರುವುದು ಹೊಸ ಹೆಸರು ಇರಿಸುವ ಬೇಡಿಕೆ ಮುನ್ನಲೆಗೆ ಬರಲು ಕಾರಣವಾಯಿತು.

ರೈಲು ನಿಲ್ದಾಣ ಹೆಸರಿಗೂ ಹೋರಾಟ:

ಈಗಾಗಲೇ ಬಾವುಟಗುಡ್ಡೆ ರಸ್ತೆಗೆ ಕರಾವಳಿಯ ವಿಜಯಾ ಬ್ಯಾಂಕ್‌ ಸ್ಥಾಪಕರಲ್ಲೊಬ್ಬರಾದ ಮೂಲ್ಕಿ ಸುಂದರಾಮ ಶೆಟ್ಟಿಹೆಸರು ಇರಿಸಲು ಸಾಕಷ್ಟುಹೋರಾಟ ನಡೆದಿದೆ. ಈಗ ಲೇಡಿಹಿಲ್‌ ವೃತ್ತಕ್ಕೆ ನಾರಾಯಣಗುರುಗಳ ಹೆಸರು ಇರಿಸಲು ಹೋರಾಟ ಪ್ರಾರಂಭ​ವಾ​ಗಿದೆ. ಇದೇ ಮುಂದುವರಿದು ಸೆಂಟ್ರಲ್‌ ಮತ್ತು ಜಂಕ್ಷನ್‌ ನಿಲ್ದಾಣಕ್ಕೆ ನಾರಾಯಣಗುರು ಹಾಗೂ ಕೊಂಕಣ ರೈಲ್ವೆ ರೂವಾರಿ ಜಾಜ್‌ರ್‍ ಫರ್ನಾಂಡಿಸ್‌ ಹೆಸರು ಇರಿಸುವ ಬಗ್ಗೆ ಪಾಲಿಕೆ ಸಭೆಗೆ ಅಜೆಂಡಾ ಮಂಡನೆ ಆಗಿದೆ. ಹೆಸರು ಇರಿಸುವ ವಿಚಾರದಲ್ಲೂ ಪಕ್ಷಗಳೊಗಳಗೆ ಜಗಳ್‌ಬಂದಿ ನಡೆದಿದೆ.

ಸದ್ಯದ ಪರಿಸ್ಥಿತಿಯಲ್ಲಿ ರಾಜಕೀಯ ಪಕ್ಷಗಳು, ವಿವಿಧ ಸಂಘಟನೆಗಳು ಜಾತಿ, ಧರ್ಮ ಆಧಾರಿತವಾಗಿ ಹೆಸರಿಡುವ ವಿಚಾರದಲ್ಲಿ ದಿನೇ ದಿನೇ ಕರಾವಳಿಯಲ್ಲಿ ಹೋರಾಟದ ಕಿಚ್ಚು ಹೆಚ್ಚಿಸಿಕೊಳ್ಳುವ ಧಾವಂತದಲ್ಲಿವೆ. ಜಾತಿ, ಧರ್ಮವಾರು ಹೆಸರು ಇರಿಸಲು ಹೊರಟಿರುವುದು ಅಪಾಯಕಾರಿ ಬೆಳವಣಿಗೆ ಎಂಬ ಆಕ್ಷೇಪಗಳೂ ಕೇಳಿಬರಲಾರಂಭಿಸಿದೆ.

ಹೊಸ ಹೆಸರಿದ್ದರೂ ಮೂಲ ಹೆಸರಿಗೆ ಧಕ್ಕೆ ಇಲ್ಲ!

ರಸ್ತೆ, ನಿಲ್ದಾಣ, ವೃತ್ತಗಳಿಗೆ ಮಹನೀಯ ಸಾಧಕರ ಹೆಸರು ಇರಿಸಿದರೂ ಅವುಗಳನ್ನು ಮೂಲ ಹೆಸರಿನಿಂದಲೇ ಕರೆಯುವುದು ವಾಡಿಕೆಯಾಗಿ ಬಂದಿದೆ. ಯಾವುದೇ ವಿಮಾನ ನಿಲ್ದಾಣ, ಬಸ್‌ನಿ​ಲ್ದಾ​ಣ ಅಥವಾ ರೈಲು ನಿಲ್ದಾಣಗಳಿಗೆ ಹೊಸ ಹೆಸರಿನ ಬದಲು ಮೂಲ ಹೆಸರಿನಿಂದಲೇ ಕರೆಯುವುದು ಸಾಮಾನ್ಯ. ಹಾಗಾಗಿ ಹೆಸರಿಗಾಗಿ ಹೊಸ ಹೆಸರು ಇರಿಸಬಹುದೇ ವಿನಃ ಅದರಿಂದ ಮೂಲ ಹೆಸರಿಗೆ ತೊಡಕಾಗದು ಎಂಬುದು ಅಷ್ಟೇ ಸತ್ಯ ಎನ್ನುವುದು ಸಾಮಾನ್ಯವಾಗಿ ಕೇಳಿಬರುತ್ತಿರುವ ಮಾತು.

ಈಗಾಗಲೇ ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರು ಇರಿಸುವಂತೆ ಒತ್ತಾಯಿಸಿ ಹೋರಾಟ ನಡೆಸಲಾಗಿದೆ. ಮತ್ತೆ ಸಂಸದ ಡಿ.ಕೆ.ಸುರೇಶ್‌ ಮೂಲಕ ಕೇಂದ್ರ ಸಚಿವರನ್ನು ಭೇಟಿ ಮಾಡಿ ಆಗ್ರಹಿಸಲಾಗುವುದು. ಆಗಲೂ ಸ್ಪಂದನ ಸಿಗದಿದ್ದರೆ, ಸತ್ಯಾಗ್ರಹ ನಡೆಸಲಾಗುವುದು.

-ಮಿಥುನ್‌ ರೈ, ದ.ಕ. ಯುವ ಕಾಂಗ್ರೆಸ್‌ ಅಧ್ಯಕ್ಷ.

ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ ಹೆಸರು ಇರಿಸುವುದಕ್ಕೆ ವಿರೋಧವಿಲ್ಲ. ಮೊದಲೇ ಪ್ರಸ್ತಾವನೆ ಹೋಗಿರುವುದರಿಂದ ಅದನ್ನು ಅಂಗೀಕರಿಸಿದರೆ ಉತ್ತಮ. ಆದರೆ ಅಭಿವೃದ್ಧಿ ವಿಚಾರಗಳ ಬದಲು ಭಾವನಾತ್ಮಕ ಸಂಗತಿಗಳ ಬಗ್ಗೆ ಚರ್ಚೆ ಆಗುತ್ತಿರುವುದು ಖೇದಕರ. ಪಕ್ಷಗಳು ಹಾಗೂ ಸರ್ಕಾರ ಇದನ್ನು ವೈಭವೀಕರಿಸಬಾರದು, ಜಾತಿ, ಧರ್ಮವಾರು ಸಮಸ್ಯೆಗೆ ಒಳಗಾಗಬಾರದು.

-ಎಂ.ಜಿ.ಹೆಗಡೆ, ಸಾಮಾಜಿಕ ಕಾರ್ಯಕರ್ತ, ಮಂಗಳೂರು

ಸಂಸದರು ಈಗಾಗಲೇ ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ ಹೆಸರು ಇರಿಸುವ ಬಗ್ಗೆ ಆಶ್ವಾಸನೆ ನೀಡಿದ್ದಾರೆ. ಆದರೂ ರಾಜಕೀಯ ಕಾರಣಕ್ಕೆ ಹೋರಾಟ ನಡೆಸುವ ಮೂಲಕ ಗೊಂದಲ ನಿರ್ಮಿಸುವ ಹುನ್ನಾರ ನಡೆಯುತ್ತಿದೆ.

-ಸುದರ್ಶನ ಮೂಡುಬಿದಿರೆ, ಅಧ್ಯಕ್ಷ, ದ.ಕ. ಬಿಜೆಪಿ.

click me!