
ಧಾರವಾಡ (ಡಿ.07): ನಾವೆಲ್ಲರೂ ಮನುಷ್ಯರು, ಮನುಷ್ಯರಾಗಿ ಬದುಕಬೇಕು. ಈ ಹಿನ್ನೆಲೆಯಲ್ಲಿ ಅಂತರ ಜಾತಿಯ ವಿವಾಹಗಳು ಹೆಚ್ಚೆಚ್ಚು ಆಗಬೇಕು. ಆದರೆ, ದೇಶದಲ್ಲಿ ಜನಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ ಸಾಮೂಹಿಕ ಮದುವೆಯಲ್ಲಿ ಭಾಗಿಯಾದವರೆಲ್ಲರಿಗೂ ಒಂದು ಅಥವಾ ಎರಡು ಮಕ್ಕಳನ್ನ ಮಾತ್ರ ಮಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಶಾಸಕ ಕೋನರೆಡ್ಡಿ ಅವರ ಪುತ್ರ ನವೀನ್ ಮತ್ತು ಸಹನಾ ವಿವಾಹ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಕೋನರೆಡ್ಡಿ ಅವರು ಕೇವಲ ಮಗನ ಮದುವೆಯನ್ನು ಮಾಡದೇ, 75 ಜೋಡಿಗಳಿಗೆ ಸಾಮೂಹಿಕ ವಿವಾಹವನ್ನು ಏರ್ಪಡಿಸಿರುವುದು ಅತ್ಯಂತ ಸಂತೋಷಕರ ಮತ್ತು ಮಾದರಿ ಕೆಲಸ. ಕೋನರೆಡ್ಡಿ ಅವರು ಈ ಕಾರ್ಯಕ್ರಮಕ್ಕೆ 1 ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸಿದ್ದು, ಇದು ಕೇವಲ ಮದುವೆ ಅಷ್ಟೆ ಅಲ್ಲ, ಒಂದು ದೊಡ್ಡ ಜಾತ್ರೆಯಂತೆ ಭಾಸವಾಗುತ್ತಿದೆ ಎಂದು ಬಣ್ಣಿಸಿದರು.
ಈ ಸಾಮೂಹಿಕ ವಿವಾಹ ಸಮಾವೇಶದಲ್ಲಿ ಜಾತ್ಯತೀತ ಮೌಲ್ಯಗಳನ್ನು ಎತ್ತಿಹಿಡಿದ ಸಿಎಂ ಸಿದ್ದರಾಮಯ್ಯ ಅವರು, 'ಮುಸ್ಲಿಂ, ಕ್ರಿಶ್ಚಿಯನ್ ಜನಾಂಗದವರೂ ಹಿಂದೂಗಳ ಜೊತೆ ಮದುವೆ ಮಾಡಿಕೊಳ್ಳುತ್ತಿದ್ದಾರೆ. ನಾವೆಲ್ಲರೂ ಮನುಷ್ಯರು, ಮನುಷ್ಯರಾಗಿ ಬದುಕಬೇಕು. ಈ ಹಿನ್ನೆಲೆಯಲ್ಲಿ ಅಂತರ ಜಾತಿಯ ವಿವಾಹಗಳು ಹೆಚ್ಚೆಚ್ಚು ಆಗಬೇಕು' ಎಂದು ಕರೆ ನೀಡಿದರು. ಹಿಂದೂ ಧರ್ಮದಲ್ಲಿನ ಜಾತಿ ಪದ್ಧತಿಯನ್ನು ಪ್ರಶ್ನಿಸಿದ ಅವರು, ಬಸವಣ್ಣನವರು ದಲಿತರು ಮತ್ತು ಮೇಲ್ಜಾತಿಯವರ ನಡುವೆ ಮದುವೆ ಮಾಡಿಸಿದ್ದರು ಎಂಬುದನ್ನು ಸ್ಮರಿಸಿದರು. ಇಂತಹ ಸಾಮೂಹಿಕ ವಿವಾಹಗಳು ಸಮಾಜದಲ್ಲಿ ಸಮಾನತೆಯನ್ನು ತರಲು ಸಹಕಾರಿ ಎಂದು ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ ಅವರು, ತಮಿಳುನಾಡಿನ ಸಂಸ್ಕೃತಿಯನ್ನು ರಾಜ್ಯದಲ್ಲಿ ಅನುಸರಿಸುವ ಪ್ರಯತ್ನ ನಡೆಯುತ್ತದೆ ಎಂದೂ ಪ್ರಸ್ತಾಪಿಸಿದರು.
ಸಿಎಂ ಸಿದ್ದರಾಮಯ್ಯ ಅವರು ಸಾಮೂಹಿಕ ವಿವಾಹದಲ್ಲಿ ಭಾಗವಹಿಸಿದ ಎಲ್ಲ ನವದಂಪತಿಗಳಿಗೆ ಒಂದು ಪ್ರಮುಖ ಕಿವಿಮಾತನ್ನು ಹೇಳಿದರು. ದೇಶದಲ್ಲಿ ಜನಸಂಖ್ಯೆ ಬಹಳ ಹೆಚ್ಚು ಇದೆ. ಹಾಗಾಗಿ, ಶಾಸಕ ಕೋನರೆಡ್ಡಿ ಅವರ ಪುತ್ರ ನವೀನ್ ಮತ್ತು ಸಹನಾ ಅವರಿಗೆ ಮತ್ತು ಸಾಮೂಹಿಕ ಮದುವೆಯಲ್ಲಿ ಭಾಗಿಯಾದವರೆಲ್ಲರಿಗೂ ನನ್ನದೊಂದು ಸಲಹೆ ಇದೆ, ಅದೇನೆಂದರೆ ನೀವು ಒಂದು ಮತ್ತು ಎರಡು ಮಕ್ಕಳನ್ನ ಮಾತ್ರ ಮಾಡಿಕೊಳ್ಳಬೇಕು' ಎಂದು ಒತ್ತಿ ಹೇಳಿದರು.
ಅಂತಿಮವಾಗಿ, ಎಲ್ಲ ನವದಂಪತಿಗಳಿಗೆ ಶುಭವಾಗಲಿ ಮತ್ತು ಒಳ್ಳೆಯದಾಗಲಿ ಎಂದು ಹಾರೈಸಿದರು. ಸಿಎಂ ಸಿದ್ದರಾಮಯ್ಯ ಅವರ ಈ ಭಾಷಣ ಸಾಮಾಜಿಕ ಸಮಾನತೆ ಮತ್ತು ಜನಸಂಖ್ಯೆ ನಿಯಂತ್ರಣದ ಎರಡು ಪ್ರಮುಖ ವಿಷಯಗಳ ಮೇಲೆ ಬೆಳಕು ಚೆಲ್ಲಿದೆ.