ಕೊಡಗು[ಜು.19]: ಈ ಬಾರಿ ಮುಂಗಾರು ಮಳೆಯ ಅಬ್ಬರ ಜೋರಾಗಿ ಬೇಗನೆ ರಾಜ್ಯದ ಎಲ್ಲಾ ಜಲಾಶಯಗಳು ಭರ್ತಿಯಾಗಿವೆ. ಕೊಡಗಿನಲ್ಲೂ ಕೂಡ ಧಾರಾಕಾರ ಮಳೆಯಾದ ಹಿನ್ನೆಲೆಯಲ್ಲಿ ಹಾರಂಗಿ ಜಲಾಶಯ ಕೂಡ ಎರಡು ವಾರಗಳ ಹಿಂದೆಯೇ ಭರ್ತಿಯಾಗಿತ್ತು.
ಹಾರಂಗಿ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಸಿಎಂ ಕುಮಾರಸ್ವಾಮಿ ಪತ್ನಿ ಸಮೇತ ಆಗಮಿಸಿ ಬಾಗಿನ ಅರ್ಪಿಸಿದರು. ಸಿಎಂ ಕುಮಾರಸ್ವಾಮಿ ಅವರಿಗೆ ರೇವಣ್ಣ ಸೇರಿದಂತೆ ಸಂಪುಟ ಸಚಿವರು ಬಾಗಿನಕ್ಕೆ ಜೊತೆಯಾದರು .ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಬಳಿಕ ಹಾರಂಗಿ ಜಲಾಶಯಕ್ಕೆ ಬಾಗಿನ ಅರ್ಪಿಸುತ್ತಿರುವ ಎರಡನೇ ಮುಖ್ಯಮತ್ರಿ ಅನ್ನುವ ಹೆಗ್ಗಳಿಕೆ ಹೆಚ್.ಡಿ ಕುಮಾರಸ್ವಾಮಿ ಅವರದ್ದಾಗಿದೆ.
ಸತತ ಮಳೆಯಿಂದ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಒಂದಾದ ಹಾರಂಗಿ ಜಲಾಶಯ ಎರಡು ವಾರಗಳ ಹಿಂದೆಯೇ ಭರ್ತಿಯಾಗಿದೆ. ಸಿಎಂ ಬಾಗಿನ ಸಮರ್ಪಣೆ ಮಾಡೋ ವೇಳೆಯಲ್ಲಿ ಕೂಡ ತುಂತುರು ಮಳೆಯ ಸಿಂಚನವಾಗಿತ್ತು. ಬಾಗಿನ ಅರ್ಪಿಸಿದ ಬಳಿಕ ಮಾತನಾಡಿದ ಸಿಎಂ, ಜಿಲ್ಲೆಯಲ್ಲಿ 35 ವರ್ಷಗಳ ಬಳಿಕ ಉತ್ತಮ ಮಳೆಯಾಗಿದ್ದು, ಸತತ ಮಳೆಯಿಂದ ಜಿಲ್ಲೆಯ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಕೊಡಗಿನ ಜನರ ಸಮಸ್ಯೆಗೆ ರಾಜ್ಯ ಸರ್ಕಾರ ಸ್ಪಂದಿಸಲಿದೆ ಎಂದು ತಿಳಿಸಿದರು.
ಸಭೆ ನಡೆಸಿದ ಸಿಎಂ
ಇನ್ನೂ ಹಾರಂಗಿ ಜಲಾಶಯದಲ್ಲಿ ಬಾಗಿನ ಅರ್ಪಿಸಿದ ಬಳಿಕ ಡಿಸಿ ಕಚೇರಿಯಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಮಾನವ-ಕಾಡಾನೆ ಸಂಘರ್ಷ, ಹುಲಿದಾಳಿಯ ಬಗ್ಗೆಯೂ ಅಧಿಕಾರಿಗಳ ಜೊತೆ ಸಿಎಂ ಮಾಹಿತಿ ಪಡೆದರು. ಅಲ್ಲದೇ ಸತತ ಮಳೆಯಿಂದ ಅತಿವೃಷ್ಟಿ ಉಂಟಾಗಿ ಜಿಲ್ಲೆಯ ಜನರು ಎದುರಿಸುತ್ತಿರೋ ಬೆಳೆ ಹಾನಿ, ಸಮರ್ಪಕ ರಸ್ತೆ ಮುಂತಾದ ಹತ್ತು ಹಲವು ಸಮಸ್ಯೆಗಳ ಬಗ್ಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಿಎಂ ಕುಮಾರಸ್ವಾಮಿ ಅಧಿಕಾರಿಗಳ ಜೊತೆ ಚರ್ಚಿಸಿದರು.
ತಲಕಾವೇರಿಗೆ ಭೇಟಿ
ಇಂದು ರಾತ್ರಿ ಕೂಡ ಮಡಿಕೇರಿಯಲ್ಲೇ ವಾಸ್ತವ್ಯ ಹೂಡಲಿದ್ದು,ನಾಳೆ ಮುಂಜಾನೆಯೇ ಜೀವನದಿಯ ಉಗಮಸ್ಥಾನ ತಲಕಾವೇರಿ ಹಾಗೂ ಭಾಗಮಂಡಲದ ಭಗಂಡೇಶ್ವರ ದೇವಾಲಯಕ್ಕೆ ವಿಶೇಷ ಪೂಜೆ ಕೂಡ ಸಲ್ಲಿಸಲಿದ್ದಾರೆ.