ಲುಂಗಿ, ಬನಿಯನ್ ತೊಟ್ಟು ನಾಟಿ ಮಾಡ್ತಾರಂತೆ ಸಿಎಂ!

By Kannadaprabha NewsFirst Published Aug 9, 2018, 1:32 PM IST
Highlights

ವರುಣ ಈ ವರ್ಷ ನಮ್ಮ ಮೇಲೆ ಕೃಪೆ ತೋರಿದ್ದಾನೆ. ಬರದಿಂದ ಕಂಗೆಟ್ಟ ರಾಜ್ಯದ ಹಲವು ಜಿಲ್ಲೆಗಳ ರೈತರ ಮೊಗದಲ್ಲಿ ಸಂತಸ ಮೂಡಿದೆ. ಮುಖ್ಯಮಂತ್ರಿ ಸ್ಥಾನ ಅಲಂಕರಿಸಿರುವ ಎಚ್.ಡಿ.ಕುಮಾರಸ್ವಾಮಿ ಪ್ರಕೃತಿಯ ಕೃಪೆಗೆ ಋಣಿಯಾಗಿದ್ದಾರೆ. ಇದೇ ಸಂತೋಷದಲ್ಲಿ ಅವರು ಗದ್ದೆಗಿಳಿದು, ನಾಟಿ ಮಾಡಲಿದ್ದಾರೆ. ಎಲ್ಲಿ? ಯಾವಾಗ?

- ಕೆ.ಎನ್.ರವಿ
ಮಂಡ್ಯ: ನಂಗೆ ಒಂದು ಆಸೆ ಇತ್ತು.... 
ಡಾ.ರಾಜ್‌ಕುಮಾರ್ ನಟಿಸಿರುವ ಬಂಗಾರದ ಮನುಷ್ಯ ಚಿತ್ರದ ರಾಜೀವಪ್ಪನ ಪಾತ್ರ ನೆನಪಿಸುವ ರೀತಿಯಲ್ಲಿ ರೈತರ ಬಗ್ಗೆ ಅಪಾರ ಕಾಳಜಿ ಇರುವ, ಅವರ ಸಂಕಷ್ಟಕ್ಕೆ ಸ್ಪಂದಿಸುವ ಮುಖ್ಯಮಂತ್ರಿ ಕುಮಾರಣ್ಣ ಅವರು ಗದ್ದೆ ಕೆಲಸ ಮಾಡುವುದನ್ನು ನೋಡಬೇಕು ಎನ್ನುವುದು. ಹೀಗಾಗಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಆಶಯದಂತೆಯೇ ಆ.11ರಂದು ಭತ್ತ ನಾಟಿ ಮಾಡಲು ರೈತರೊಂದಿಗೆ ಗದ್ದೆ ಇಳಿಸಿ, ರೈತ ರ ಕಷ್ಟ, ಸುಖ ನಾಡಿನ ದೊರೆ ಗಮನಕ್ಕೆ ತರುವ ಒಂದು ಪ್ರಯತ್ನ ಮಾಡುತ್ತಿದ್ದೇವೆ ಎನ್ನುತ್ತಾರೆ ಮಂಡ್ಯಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು.

ಸಿಎಂ ಕುಮಾರಣ್ಣನಿಗೆ ನಟ ಡಾ.ರಾಜ್‌ಕುಮಾರ್ ಎಂದರೆ ಪಂಚ ಪ್ರಾಣ. ಬಂಗಾರದ ಮನುಷ್ಯ ಚಿತ್ರದಲ್ಲಿ ರಾಜ್‌ಕುಮಾರ್, ಸಾಮಾನ್ಯ ರೈತನ ರೀತಿಯಲ್ಲಿ ಕೆಲಸ ಮಾಡಿ, ದುಡಿಮೆಯ ನಂಬಿ ಬದುಕು, ಅದರಲ್ಲಿ ದೇವರ ಹುಡುಕು ಎಂದು ಹಾಡಿದ್ದಾರೆ. ಈ ನಾಡಿನ ರೈತರು ದುಡಿಮೆಯನ್ನೇ ನಂಬಿ ಬದುಕಿದ್ದಾರೆ. ಆದರೆ ಕಷ್ಟಗಳು ಮಾತ್ರ ತಪ್ಪಿಲ್ಲ. ಅದಕ್ಕಾಗಿ ರೈತರ ಸಂಕಷ್ಟ ಅರಿಯುವ ಸಲುವಾಗಿ ನೀರು ತುಂಬಿದ ಗದ್ದೆಗೆ ಸಿಎಂ 
ಅವರನ್ನೇ ಇಳಿಸಿ, ಭತ್ತದ ನಾಟಿ ಮಾಡಲು 150 ಮಂದಿ ರೈತ ಮಹಿಳೆಯರು, 50 ಮಂದಿ ರೈತರು ಹಾಗೂ 25 ಜೋಡಿ ಎತ್ತಿಗಳನ್ನು ಬಳಕೆ ಮಾಡಲಾಗುವುದು ಎಂದು ಪುಟ್ಟರಾಜು ಸುವರ್ಣನ್ಯೂಸ್.ಕಾಮ್‌ನ ಸಹೋದರ ಸಂಸ್ಥೆ ‘ಕನ್ನಡ ಪ್ರಭ’ಕ್ಕೆ ತಿಳಿಸಿದರು.

ಎರೆಡು ಗಂಟೆ ಭತ್ತ ನಾಟಿ: ಬಂಗಾರದ ಮನುಷ್ಯ ಚಿತ್ರ ರಾಜೀವಪ್ಪನ ಪಾತ್ರದ ಮಾದರಿಯಲ್ಲೇ ರೈತರೊಂದಿಗೆ ಸೇರಿಕೊಂಡು ಮಣ್ಣಿನ ಮಗನಾಗಿ ಗದ್ದೆ ಇಳಿದು ನಾಟಿ ಮಾಡಲಿದ್ದಾರೆ. ಸಿಎಂ ಆ ದಿನದ ಉಡುಪೂ ಕೂಡ ಬದಲಾಗಲಿದೆ ಆಗಲಿದೆ. ಮಂಡ್ಯ ಚೆಡ್ಡಿ, ಬಣ್ಣ ಬಣ್ಣದ ಲುಂಗಿ, ಬಿಳಿ ಬನಿಯನ್, ತಲೆಗೊಂದು ಟವಲ್ ಹಾಕಿಕೊಂಡು ಗೆದ್ದ ಕೆಲಸ ಮಾಡಲಿದ್ದಾರೆ. ಐದು ಎಕರೆ ಪ್ರದೇಶದಲ್ಲಿ ರೈತರೊಂದಿಗೆ ಸುಮಾರು ಎರಡು ಗಂಟೆಗಳ ಕಾಲ ಭತ್ತ ನಾಟಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಪಾಲ್ಗೊಳ್ಳಲಿದ್ದಾರೆಂದು ವಿವರಿಸಿದರು.

ಸಮೃದ್ಧ ಮಳೆಗೆ ಸಿಎಂ ಸಂತೃಪ್ತಿ
ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಂದಲೇ ಯಾಕೆ ಭತ್ತ ನಾಟಿ ಮಾಡಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವ ಪುಟ್ಟರಾಜು, ಮಂಡ್ಯ ಜಿಲ್ಲೆಯಲ್ಲಿ 4 ವರ್ಷಗಳಿಂದಲೂ ಬರದಿಂದಾಗಿ ರೈತರು ಭತ್ತ ನಾಟಿ ಮಾಡಿರಲಿಲ್ಲ. ಈ ಬಾರಿ ಸಮೃದ್ಧ ಮಳೆಯಾಗಿದೆ. ಕೆಆರ್‌ಎಸ್ ಅಣೆಕಟ್ಟೆ ಭರ್ತಿಯಾಗಿದೆ. ರೈತ ಮುಖದಲ್ಲಿ ಈಗ ಸಂತಸ ಅರಳಿದೆ. ಈ ವರ್ಷದ ಭತ್ತದ ಪೈರು ರೈತರಿಗೆ ಸಮೃದ್ಧಿ ಯಾಗಿ ಸಿಗಲಿದೆ ಎಂಬ ಕಾರಣಕ್ಕಾಗಿ ಭತ್ತ ನಾಟಿ ಕಾರ್ಯಕ್ಕೆ ಸಿಎಂ ನೀಡಿದರೆ ರೈತರ ಉತ್ಸಾಹ, ಬದುಕಿನ ಭರವಸೆ, ಆತ್ಮಸ್ಥೈರ್ಯ ಹೆಚ್ಚಾಗುತ್ತದೆ ಎಂಬ ಕಾರಣಕ್ಕಾಗಿ ಸಿಎಂ ಆ ಕಾರ್ಯಕ್ರಮದಲ್ಲಿ ತುಂಬಾ ಪ್ರೀತಿಯಿಂದ ಪಾಲ್ಗೊಳ್ಳಲಿದ್ದಾರೆಂದು ಹೇಳಿದರು.
 

click me!