ಬಿಎಸ್‌ವೈ ಕ್ಷಮೆ ಕೋರಿದ ಸಿಎಂ !

By Web DeskFirst Published Aug 29, 2018, 6:16 PM IST
Highlights

ಯಡಿಯೂರಪ್ಪ ಅವರು ತಮ್ಮ ಭಾಷಣದಲ್ಲಿ ಕುಮಾರಸ್ವಾಮಿ ಅವರ ಹೆಸರನ್ನು ಪ್ರಸ್ತಾಪಿಸಿದರು. ಆದರೆ ಕುಮಾರಸ್ವಾಮಿ ಅವರು ತಮ್ಮ ಭಾಷಣದ ಆರಂಭದಲ್ಲಿ ಯಡಿಯೂರಪ್ಪ ಅವರ ಹೆಸರು ಹೇಳುವುದು ಮರೆತರು.

ಮೈಸೂರು[ಆ.29]: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಒಂದೇ ವೇದಿಕೆಯಲ್ಲಿ ಅಕ್ಕಪಕ್ಕ ಕುಳಿತುಕೊಂಡು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಘಟನೆ ಮಂಗಳವಾರ ನಂಜನಗೂಡು ತಾಲೂಕು ಸುತ್ತೂರು ಕ್ಷೇತ್ರದಲ್ಲಿ ನಡೆಯಿತು.

ಡಾ. ಶ್ರೀ ರಾಜೇಂದ್ರ ಸ್ವಾಮೀಜಿಯ 103ನೇ ಜಯಂತಿ ಮಹೋತ್ಸವದ ಕಾರ್ಯಕ್ರಮ ಇದಕ್ಕೆ ಸಾಕ್ಷಿಯಾಯಿತು. ವಿಧಾನಸಭಾ ಚುನಾವಣೆ ನಂತರ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಎದುರಾಳಿಗಳಾಗಿರುವ ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಅವರು ಸುತ್ತೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ವೇದಿಕೆಗೆ ಆಗಮಿಸುತ್ತಿದ್ದಂತೆಯೇ ಇಬ್ಬರೂ ಪರಸ್ಪರ ಹಸ್ತಲಾಘವ ಮಾಡಿ ಹಸನ್ಮುಖಿಗಳಾಗಿ ಕೆಲಕಾಲ ಮಾತುಕತೆ ನಡೆಸಿದರು.

ಯಡಿಯೂರಪ್ಪ ಅವರು ತಮ್ಮ ಭಾಷಣದಲ್ಲಿ ಕುಮಾರಸ್ವಾಮಿ ಅವರ ಹೆಸರನ್ನು ಪ್ರಸ್ತಾಪಿಸಿದರು. ಆದರೆ ಕುಮಾರಸ್ವಾಮಿ ಅವರು ತಮ್ಮ ಭಾಷಣದ ಆರಂಭದಲ್ಲಿ ಯಡಿಯೂರಪ್ಪ ಅವರ ಹೆಸರು ಹೇಳುವುದು ಮರೆತರು. ಬಳಿಕ ನೆನಪು ಮಾಡಿಕೊಂಡ ಅವರು, ಕ್ಷಮಿಸಿ ಯಡಿಯೂರಪ್ಪನವರ ಹೆಸರು ಹೇಳುವುದನ್ನು ಮರೆತೆ, ಕ್ಷಮೆ ಇರಲಿ ಎಂದರು. ಭಾಷಣ ಮುಗಿಸಿ ತಮ್ಮ ಆಸನಕ್ಕೆ ತೆರಳಿದ ಮೇಲೂ ಯಡಿಯೂರಪ್ಪ ಅವರಿಗೆ ಅನ್ಯತಾ ಭಾವಿಸದಂತೆ ಕೋರಿದರು. 

ಬಾರದ ಸಿದ್ದು: 
ಆದರೆ ಇದೇ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಹ್ವಾನಿತರಾಗಿದ್ದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರೂ ಆದ ಮಾಜಿ ಸಿಎಂ ಸಿದ್ದರಾಮಯ್ಯ ಗೈರುಹಾಜರಾಗಿದ್ದರು. ನಾಲ್ಕು ದಿನಗಳ ಬಾದಾಮಿ ಕ್ಷೇತ್ರದ ಪ್ರವಾಸ ನಿಗದಿಯಾಗಿರುವುದರಿಂದ ಇವತ್ತಿನ ಕಾರ್ಯಕ್ರಮಕ್ಕೆ ಬರಲಾಗುವುದಿಲ್ಲ ಎಂದು ಸಿದ್ದರಾಮಯ್ಯ ಭಾನುವಾರವೇ ಸುತ್ತೂರು ಮಠಕ್ಕೆ ಭೇಟಿ ನೀಡಿ, ಶ್ರೀಗಳೊಂದಿಗೆ ಸಮಾಲೋಚಿಸಿದ್ದರು. ರಾಜ್ಯಪಾಲ ವಿ.ಆರ್. ವಾಲಾ, ಕೇಂದ್ರ ಸಚಿವ ಎಚ್.ಎನ್. ಅನಂತಕುಮಾರ್ ಅವರ ಸಹ ಬಂದಿರಲಿಲ್ಲ.

click me!