ಗೃಹಪ್ರವೇಶಕ್ಕೆ ಮಲ್ಲಘಟ್ಟದ ನೀರು ತೆಗೆದುಕೊಂಡಿದ್ದ ಡಿಕೆಶಿ: ಕಾರಣ ಬಿಚ್ಚಿಟ್ಟ ಸಿಎಂ!

Published : Jun 06, 2026, 05:18 PM IST
DK Shivakumar

ಸಾರಾಂಶ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಲ್ಲಘಟ್ಟದ ಗಂಗಾಧರೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ಮುಖ್ಯಮಂತ್ರಿ ಹುದ್ದೆ ಸ್ವೀಕರಿಸಿದ..

ಹಾಸನ (ಜೂ.06): ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಲ್ಲಘಟ್ಟದ ಗಂಗಾಧರೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ಮುಖ್ಯಮಂತ್ರಿ ಹುದ್ದೆ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಈ ಪವಿತ್ರ ಕ್ಷೇತ್ರಕ್ಕೆ ಬಂದಿರುವುದಾಗಿ ತಿಳಿಸಿದರು.

ಮಲ್ಲಘಟ್ಟ ಗಂಗಾಧರೇಶ್ವರ ಕ್ಷೇತ್ರವು ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವ ಹೊಂದಿರುವ ಸ್ಥಳವಾಗಿದ್ದು, ಹಲವು ವರ್ಷಗಳಿಂದ ಈ ಪ್ರದೇಶದೊಂದಿಗೆ ತಮ್ಮ ಆತ್ಮೀಯ ನಂಟಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು. "ಸುಮಾರು 25 ವರ್ಷಗಳಿಂದ ಈ ಜಾಗವನ್ನು ಗಮನಿಸುತ್ತಾ ಬಂದಿದ್ದೇನೆ. ಇಲ್ಲಿ ಬಂದಾಗ ಮನಸ್ಸಿಗೆ ನೆಮ್ಮದಿ ಹಾಗೂ ಸಂತೋಷ ಸಿಗುತ್ತದೆ. ಈ ಕ್ಷೇತ್ರದ ಮೇಲಿನ ಭಕ್ತಿ ಮತ್ತು ಗೌರವ ನನಗೆ ವಿಶೇಷವಾಗಿದೆ" ಎಂದು ಹೇಳಿದರು.

ತಮ್ಮ ಗೃಹಪ್ರವೇಶದ ಸಂದರ್ಭದಲ್ಲಿ ರಾಜ್ಯದ ವಿವಿಧ ಪವಿತ್ರ ಸ್ಥಳಗಳಿಂದ ನೀರು ತರಿಸಿಕೊಂಡಿದ್ದೆ. ಅದರಲ್ಲಿ ಮಲ್ಲಘಟ್ಟ ಕೆರೆಯ ನೀರೂ ಒಂದಾಗಿತ್ತು ಎಂದು ಅವರು ನೆನಪಿಸಿಕೊಂಡರು. "ಈ ಕೆರೆ ಸದಾ ತುಂಬಿ ತುಳುಕುತ್ತಿರಲಿ, ಈ ಭಾಗದ ಜನರು ಸುಖ-ಶಾಂತಿಯಿಂದ ಬದುಕಲಿ ಎಂಬುದು ನನ್ನ ಆಶಯ" ಎಂದರು.

ಈ ಭಾಗದ ಅಭಿವೃದ್ಧಿಗಾಗಿ ಸುಮಾರು 35 ಕೋಟಿ ರೂಪಾಯಿ ವೆಚ್ಚದ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಂಡಿರುವುದಾಗಿ ತಿಳಿಸಿದ ಅವರು, ರೈತರಿಗೆ ಅನುಕೂಲವಾಗುವಂತೆ ಕಾಲುವೆ ವ್ಯವಸ್ಥೆ, ಸಂಪನ್ನ ಮಂಟಪ, ಅತಿಥಿ ಗೃಹ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದರು. ಈ ಸಂಬಂಧ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಕಾಡಸಿದ್ಧೇಶ್ವರ ಮಠದವರೊಂದಿಗೆ ಚರ್ಚೆ ನಡೆಸಿರುವುದಾಗಿಯೂ ಹೇಳಿದರು.

ರಾಜಕಾರಣಕ್ಕಿಂತ ಮಾನವೀಯತೆ ಮತ್ತು ಭಕ್ತಿ ಮುಖ್ಯ

ಇತ್ತೀಚೆಗೆ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ವಿವಿಧ ಧರ್ಮಗಳ ಪೀಠಾಧಿಪತಿಗಳನ್ನು ಆಹ್ವಾನಿಸಿದ್ದ ವಿಚಾರಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, "ನನಗೆ ರಾಜಕಾರಣಕ್ಕಿಂತ ಮಾನವೀಯತೆ ಮತ್ತು ಭಕ್ತಿ ಮುಖ್ಯ. ರಾಜ್ಯದ ಹಿತ ಕಾಪಾಡುವ ಜವಾಬ್ದಾರಿ ಹೊತ್ತಾಗ ಎಲ್ಲ ಧರ್ಮಗಳ ಆಶೀರ್ವಾದ ಪಡೆಯುವುದು ಅಗತ್ಯ. ಅದಕ್ಕಾಗಿ ಹಿಂದೂ, ಮುಸ್ಲಿಂ, ಕ್ರೈಸ್ತ, ಸಿಖ್, ಬೌದ್ಧ ಸೇರಿದಂತೆ ಎಲ್ಲಾ ಧರ್ಮಗಳ ಪ್ರತಿನಿಧಿಗಳನ್ನು ಆಹ್ವಾನಿಸಿದ್ದೆ" ಎಂದು ಸ್ಪಷ್ಟಪಡಿಸಿದರು.

ತಾವು ಯಾವುದೇ ಹರಕೆ ಹೊತ್ತು ಈ ಕ್ಷೇತ್ರಕ್ಕೆ ಬಂದಿಲ್ಲ ಎಂದು ಹೇಳಿದ ಡಿ.ಕೆ.ಶಿವಕುಮಾರ್, "ಇದು ನನ್ನ ಭಕ್ತಿ ಮತ್ತು ನಂಬಿಕೆಯ ಅಭಿವ್ಯಕ್ತಿ ಮಾತ್ರ. ರಾಜ್ಯದಲ್ಲಿ ಉತ್ತಮ ಮಳೆ ಬೆಳೆ ಆಗಲಿ, ಜನರು ಸುಖಶಾಂತಿಯಿಂದ ಬದುಕಲಿ, ನನಗೆ ಸಿಕ್ಕಿರುವ ಅಧಿಕಾರವನ್ನು ಜನರ ಸೇವೆಗೆ ಸಮರ್ಪಿಸಲು ಶಕ್ತಿ ಸಿಗಲಿ ಎಂಬ ಪ್ರಾರ್ಥನೆಯೊಂದಿಗೆ ದೇವರ ದರ್ಶನಕ್ಕೆ ಬಂದಿದ್ದೇನೆ" ಎಂದು ಹೇಳಿದರು.

ಮಲ್ಲಘಟ್ಟದ ಗಂಗಾಧರೇಶ್ವರ ಸ್ವಾಮಿಯ ಆಶೀರ್ವಾದದಿಂದ ರಾಜ್ಯದಲ್ಲಿ ಸಮೃದ್ಧಿ ನೆಲೆಸಲಿ ಹಾಗೂ ಈ ಭಾಗದ ಕೆರೆಗಳು ಸದಾ ನೀರಿನಿಂದ ಕಂಗೊಳಿಸಲಿ ಎಂಬ ಆಶಯವನ್ನು ಮುಖ್ಯಮಂತ್ರಿ ವ್ಯಕ್ತಪಡಿಸಿದರು.

PREV
Read more Articles on
click me!

Recommended Stories

ಮತ್ತೆ ಶುರುವಾಯ್ತು ಕಾವೇರಿ ಕದನ.. ಕರ್ನಾಟಕಕ್ಕೆ ವಿಲನ್ ಆಗ್ತಾರಾ ತಮಿಳುನಾಡು ಸಿಎಂ ವಿಜಯ್?
ರಾಮಲಿಂಗಾ ರೆಡ್ಡಿ 4 ಸಾಲಿನ ರಾಜೀನಾಮೆ ಪತ್ರದಲ್ಲಿ ಇಷ್ಟೊಂದು ದೋಷ? ಜೈ ಕನ್ನಡಾಂಬೆ- ಜಾಲತಾಣದಲ್ಲಿ ಟ್ರೋಲ್​