ಬಿಬಿಎಂಪಿಯ ಆಡಳಿತ ವಿಕೇಂದ್ರಿಕರಣ ಮತ್ತು ಜನರ ಸಮಸ್ಯೆಗಳು ವಲಯ ಮಟ್ಟದಲ್ಲೇ ಇತ್ಯರ್ಥವಾಗುವಂತೆ ಕ್ರಮ ಕೈಗೊಳ್ಳುವ ಉದ್ದೇಶದಿಂದ ಪಾಲಿಕೆಯ ಎಂಟು ವಲಯಗಳಿಗೆ ನಾಲ್ಕು ಮಂದಿ ವಿಶೇಷ ಆಯುಕ್ತರನ್ನು ನೇಮಿಸಲು ಮುಖ್ಯಮಂತ್ರಿ ಸೂಚಿಸಿದ್ದಾರೆ.
ಬೆಂಗಳೂರು [ಸೆ.17]: ಬಿಬಿಎಂಪಿಯ ಆಡಳಿತ ವಿಕೇಂದ್ರಿಕರಣ ಹಾಗೂ ಆಯುಕ್ತರ ಕೆಲಸ ಒತ್ತಡ ಇಳಿಸುವ ಉದ್ದೇಶದಿಂದ ವಿಶೇಷ ಆಯುಕ್ತರಿಗೆ ತಲಾ ಎರಡು ವಲಯಗಳ ಹೊಣೆಗಾರಿಕೆಯನ್ನು ವಹಿಸಲು ರಾಜ್ಯ ಸರ್ಕಾರ ಬಿಬಿಎಂಪಿ ಆಯುಕ್ತರಿಗೆ ಸೂಚಿಸಿದೆ. ಜತೆಗೆ, ಆಯುಕ್ತರು ಮತ್ತು ವಿಶೇಷ ಆಯುಕ್ತರ ನಡುವಿನ ಅಧಿಕಾರ ಹಂಚಿಕೆ ಮಾಡಿ ಆದೇಶ ಹೊರಡಿಸಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೆ.6ರಂದು ಬೆಂಗಳೂರು ನಗರದ ಅಭಿವೃದ್ಧಿ ಕುರಿತ ಸಭೆಯಲ್ಲಿ ಬಿಬಿಎಂಪಿಯ ಆಡಳಿತ ವಿಕೇಂದ್ರಿಕರಣ ಮತ್ತು ಜನರ ಸಮಸ್ಯೆಗಳು ವಲಯ ಮಟ್ಟದಲ್ಲೇ ಇತ್ಯರ್ಥವಾಗುವಂತೆ ಕ್ರಮ ಕೈಗೊಳ್ಳುವ ಉದ್ದೇಶದಿಂದ ಪಾಲಿಕೆಯ ಎಂಟು ವಲಯಗಳಿಗೆ ನಾಲ್ಕು ಮಂದಿ ವಿಶೇಷ ಆಯುಕ್ತರನ್ನು ನೇಮಿಸಿ ಎರಡು ವಲಯಗಳ ಜವಾಬ್ದಾರಿ ನೀಡುವಂತೆ ಸೂಚನೆ ನೀಡಿದರು. ಅದರಂತೆ ಸೋಮವಾರ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ. ಇದರಿಂದಾಗಿ ತಮ್ಮ ಹೊಣೆಗಾರಿಕೆಯ ವಲಯದಲ್ಲಿ ಆಡಳಿತಕ್ಕೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳುವ ಸ್ವತಂತ್ರ ಅಧಿಕಾರಿ ವಿಶೇಷ ಆಯುಕ್ತರಿಗೆ ದೊರೆತಂತಾಗಿದೆ.
undefined
ವಿಶೇಷ ಆಯುಕ್ತರ ಹೊಣೆಗಾರಿಕೆ
ವಿಶೇಷ ಆಯುಕ್ತರು ಹಾಲಿ ತಾವು ನಿರ್ವಹಿಸುತ್ತಿರುವ ಹೊಣೆಗಾರಿಕೆಯ ಜತೆಗೆ ಎರಡು ವಲಯಗಳ ಸಂಪೂರ್ಣ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ. ಈ ವಲಯಗಳಲ್ಲಿ ಇದುವರೆಗೂ ಆಯುಕ್ತರ ವ್ಯಾಪ್ತಿಯ ಅಧಿಕಾರವು ಇನ್ನು ವಿಶೇಷ ಆಯುಕ್ತರಿಗೆ ರವಾನೆಯಾಗಲಿದೆ. ಸದರಿ ವಲಯಗಳಲ್ಲಿ ಘನತ್ಯಾಜ್ಯ, ತೋಟಗಾರಿಕೆ, ವಿದ್ಯುತ್, ವಲಯ ಯೋಜನೆ, ಗೃಹ ನಿರ್ಮಾಣ, ಕಾಮಗಾರಿ, ನಗರ ಯೋಜನೆ, ಆಸ್ತಿಗಳ ನಿರ್ವಹಣೆ, ಕಲ್ಯಾಣ ಶಿಕ್ಷಣ, ಆರೋಗ್ಯ ಮತ್ತಿತರ ಯೋಜನೆಗಳ ಕುರಿತಂತೆ ಸಂಪೂರ್ಣ ಹೊಣೆಗಾರಿಕೆ ವಿಶೇಷ ಆಯುಕ್ತರದ್ದೇ ಆಗಿರುತ್ತದೆ. ಹಾಗೆಯೇ ತಮ್ಮ ವಲಯಗಳಲ್ಲಿ ಆದಾಯ ಕ್ರೋಢಿಕರಣದ ಹೊಣೆಯೂ ವಿಶೇಷ ಆಯುಕ್ತರದ್ದಾಗಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಆಯುಕ್ತರ ಅಧಿಕಾರ ವ್ಯಾಪ್ತಿ:
ಇನ್ನು ಪಾಲಿಕೆ ಆಯುಕ್ತರಿಗೆ ಪಾಲಿಕೆ ನೀತಿ ವಿಷಯ ಮತ್ತು ವಿವಿಧ ಇಲಾಖೆಗಳ ಸಮನ್ವಯ ಹಾಗೂ ಸಮಗ್ರ ಉಸ್ತುವಾರಿ ವಹಿಸುವುದು. ಪಾಲಿಕೆ ಆಯವ್ಯಯ, ವಿಶೇಷ ಅನುದಾನ, ಆಯವ್ಯಯದ ಯೋಜನೆಗಳಿಗೆ ಅನುಮೋದನೆ ನೀಡುವುದು. ವಿಶೇಷ ಆಯುಕ್ತರಿಗೆ ಹಂಚಿಕೆಯಾಗದ ವಿಷಯ ಮತ್ತು ಶಾಖೆ ಜವಾಬ್ದಾರಿ. ಪಾಲಿಕೆ ಕೌನ್ಸಿಲ್ ಸಭೆ ಮತ್ತು ಸ್ಥಾಯಿ ಸಮಿತಿಗೆ ಪ್ರಸ್ತಾವನೆ ಮಂಡನೆ ಮಾಡುವುದು. ಸರ್ಕಾರ ಹಾಗೂ ಇತರೆ ಇಲಾಖೆಯೊಂದಿಗೆ ಪತ್ರ ವ್ಯವಹಾರ ನಿರ್ವಹಿಸುವುದು. ಕೆಎಂಸಿ ಕಾಯ್ದೆಯಡಿ ಆಯುಕ್ತರು ಮಾತ್ರ ನಿರ್ವಹಿಸಬಹುದಾದ ಅಧಿಕಾರಿ ಚಲಾವಣೆ ಹಾಗೂ ಸರ್ಕಾರದ ಹಂತದ ಸಭೆ, ಸಮಿತಿಗಳಲ್ಲಿ ಪಾಲಿಕೆಯಿಂದ ಆಯುಕ್ತರು ಪ್ರತಿನಿಧಿಸುವ ಹೊಣೆಗಾರಿಕೆ ನೀಡಲಾಗಿದೆ.
ವಲಯ ಉಸ್ತುವಾರಿ
ವಿಶೇಷ ಆಯುಕ್ತ (ಯೋಜನೆ ವಿಭಾಗ) ಡಾ.ರವಿಕುಮಾರ್ ಸುರಪುರ- ಪೂರ್ವ ಮತ್ತು ಯಲಹಂಕ
ವಿಶೇಷ ಆಯುಕ್ತ(ಹಣಕಾಸು) ಎಂ.ಲೋಕೇಶ್- ದಕ್ಷಿಣ ಮತ್ತು ಆರ್.ಆರ್.ನಗರ
ವಿಶೇಷ ಆಯುಕ್ತ (ಆಡಳಿತ) ಅನ್ಬುಮಾರ್- ಪಶ್ಚಿಮ ಮತ್ತು ದಾಸರಹಳ್ಳಿ
ಡಿ.ರಂದೀಪ್ (ಘನತ್ಯಾಜ್ಯ ನಿರ್ವಹಣೆ)- ಮಹಾದೇವಪುರ ಮತ್ತು ಬೊಮ್ಮನಹಳ್ಳಿ