ಮಂಡ್ಯದ ಪಕ್ಷೇತರ ಸಂಸದೇ ಸುಮಲತಾ ಅಂಬರೀಶ್ ಬೆಂಬಲ ಉಪ ಚುನಾವಣೆಯಲ್ಲಿ ಯಾರಿಗೆ ಎನ್ನುವುದು ಇನ್ನಷ್ಟೇ ನಿರ್ಧಾರವಾಗಬೇಕಿದೆ. ಇದೇ ಬೆನ್ನಲ್ಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸುಮಲತಾ ಬೆಂಬಲಿಗರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಮೈಸೂರು [ನ.27]: ಕೆ.ಆರ್. ಪೇಟೆ ಉಪ ಚುನಾವಣೆ ವಿಚಾರವಾಗಿ ಮಂಡ್ಯ ಸಂಸದೆ ಸುಮಲತಾ ಆಪ್ತರನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭೇಟಿಯಾಗಿ ಕೆಲಕಾಲ ಮಾತುಕತೆ ನಡೆಸಿದರು.
ಸುಮಲತಾ ಆಪ್ತ ಇಂಡುವಾಳು ಸಚ್ಚಿದಾನಂದ, ಇತರರನ್ನು ಮೈಸೂರಲ್ಲಿ ಭೇಟಿಯಾದ ಯಡಿಯೂರಪ್ಪ ಉಪ ಚುನಾವಣೆಗೆ ಸಂಬಂಧಿಸಿ ಚರ್ಚೆ ನಡೆಸಿದರು.
ಈ ವಿಚಾರವಾಗಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಇಂಡುವಾಳು ಸಚ್ಚಿದಾನಂದ, ನಮ್ಮ ಸಂಸದರು ಮತ್ತು ಅವರ ಬೆಂಬಲಿಗರು ಬಿಜೆಪಿ ಅಭ್ಯರ್ಥಿ ಬೆಂಬಲಿಸಬೇಕು ಎಂದು ಬಿ.ಎಸ್.ಯಡಿಯೂರಪ್ಪ ಕೇಳಿದ್ದಾರೆ.
ಯಡಿಯೂರಪ್ಪನವರು ಸಂಸದೆ ಸುಮಲತಾ ಅವರ ಜೊತೆ ಎರಡ್ಮೂರು ಬಾರಿ ಈಗಾಗಲೇ ಮಾತನಾಡಿದ್ದಾರೆ. ಬೆಂಬಲದ ವಿಚಾರಕ್ಕೆ ಸಂಬಂಧಿಸಿ ಇನ್ನೊಂದೆರಡು ದಿನ ಸುಮಲತಾ ತಮ್ಮ ನಿರ್ಧಾರ ಪ್ರಕಟಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕೆ.ಆರ್.ಪೇಟೆ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಅನರ್ಹರಾಗಿದ್ದ ನಾರಾಯಣ ಗೌಡ ಕಣಕ್ಕೆ ಇಳಿದಿದ್ದು, ಸುಮಲತಾ ಬೆಂಬಲ ಯಾರಿಗೆ ಎನ್ನುವುದು ಇನ್ನಷ್ಟೇ ನಿರ್ಧಾರವಾಗಬೇಕಿದೆ.
ಡಿಸೆಂಬರ್ 5 ರಂದು ರಾಜ್ಯದಲ್ಲಿ ಉಪ ಚುನಾವಣೆ ನಡೆಯಲಿದ್ದು, ಡಿಸೆಂಬರ್ 9 ರಂದು ಫಲಿತಾಂಶ ಪ್ರಕಟವಾಗಲಿದೆ.