* ಶಾಹಿ ಎಕ್ಸ್ ಪೋರ್ಟ್ಸ್ ನ ಸಿದ್ಧ ಉಡುಪು ತಯಾರಿಕಾ ಘಟಕಕ್ಕೆ ಭೂಮಿಪೂಜೆ
* ಶಿಗ್ಗಾವಿ ತಾಲ್ಲೂಕನ್ನು ಭಾರತದ ಟೆಕ್ಸ್ ಟೈಲ್ ಮತ್ತು ಸಿದ್ದಉಡುಪು ಹಬ್ ಆಗಿಸುವ ಕನಸು
* ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ
ವರದಿ- ಪವನ್ ಕುಮಾರ್ , ಏಷ್ಯಾನೆಟ್ ಸುವರ್ಣ ನ್ಯೂಸ್ ಹಾವೇರಿ
ಹಾವೇರಿ, (ಏಪ್ರಿಲ್ 28) : ಶಿಗ್ಗಾವಿ ತಾಲ್ಲೂಕನ್ನು ಭಾರತದ ಒಂದು ಟೆಕ್ಸ್ ಟೈಲ್ ಮತ್ತು ಸಿದ್ದಉಡುಪು ಹಬ್ ಆಗಿಸುವ ಕನಸು ನನ್ನದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇಂದು (ಗುರುವಾರ) ಶಾಹಿ ಎಕ್ಸ್ ಪೋರ್ಟ್ಸ್ ನ ಸಿದ್ಧ ಉಡುಪು ತಯಾರಿಕಾ ಘಟಕಕ್ಕೆ ಭೂಮಿಪೂಜೆ, ಶಂಕುಸ್ಥಾಪನೆ ನೆರವೇರಸಿ ಮಾತನಾಡಿದ ಅವರು, ರಾಜ್ಯದ ಜನರ ಕೈಗೆ ಉದ್ಯೋಗ ದೊರೆತು ಸ್ವಾಭಿಮಾನ, ಸ್ವಾವಲಂಬಿ ಬದುಕನ್ನು ಬದುಕಬೇಕು. ಶಿಗ್ಗಾವಿಯಲ್ಲಿ ಟೆಕ್ಸ್ ಟೈಲ್ ಪಾರ್ಕ್ ಪ್ರಾರಂಭ ವಾಗುತ್ತಿದ್ದು, 29 ಕೋಟಿ ರೂ.ಗಳಿಗೆ ಅನುಮೋದನೆ ನೀಡಲಾಗಿದೆ. 8-10 ಸಾವಿರ ಜನರಿಗೆ ಬರುವ ಏಪ್ರಿಲ್- ಮೇ ಮಾಹೆಯಲ್ಲಿ ಉದ್ಯೋಗ ನೀಡುವ ಕೆಲಸ ಕ್ಷೇತ್ರದಲ್ಲಿ ಆಗಲಿದೆ ಎಂದು ಭರವಸೆ ನೀಡಿದರು.
undefined
ಕೃಷ್ಣಾ ಮೇಲ್ದಂಡೆ 3ನೇ ಹಂತ ಅನುಷ್ಠಾನಕ್ಕೆ ಕಟಿಬದ್ಧ, ಸಿಎಂ ಬೊಮ್ಮಾಯಿ!
ತಿರುಪ್ಪೂರದ ಜವಳಿ ಉದ್ಯಮದಂತೆ ಬೆಂಗಳೂರಿನಲ್ಲಿ ದೊಡ್ಡ ಗಾರ್ಮೆಂಟ್ ಫ್ಯಾಕ್ಟರಿ ಬಂದಿದೆ. ಅದೇ ರೀತಿ ಶಿಗ್ಗಾವಿಯೂ ಆಗಬೇಕು. ಹಾವೇರಿಯಲ್ಲಿ 1000 ಎಕರೆ ಪ್ರದೇಶದಲ್ಲಿ ಟೌನ್ ಶಿಪ್ ಗಳನ್ನು ಮಾಡಲು ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ. ಮುಂಬೈ ಚೆನ್ನೈ ಕಾರಿಡಾರ್ ನಲ್ಲಿ ಬೆಳಗಾವಿ, ಹಾವೇರಿ,ದಾವಣಗೆರೆ , ಚಿತ್ರದುರ್ಗ, ತುಮಕೂರು ವರೆಗೂ ಟೌನ್ ಶಿಪ್ ಆಗುತ್ತಿದ್ದು, ಔದ್ಯೋಗಿಕ ಕ್ರಾಂತಿ ಆಗಲಿದೆ. ದುಡಿಯುವ ವರ್ಗಕ್ಕೆ ಲಾಭ ತಲುಪುವಂತಾಗಬೇಕು. ಹಾವೇರಿಯಲ್ಲಿ ಮೆಗಾ ಡೈರಿ ಕೆಲಸ ಪ್ರಾರಂಭವಾಗಿದೆ. ಹಾವೇರಿ ಹಾಲು ಒಕ್ಕೂಟ ಸ್ಥಾಪನೆಗೆ 30 ಕೋಟಿ ರು. ಮೀಸಲಿಡಲಾಗಿದೆ ಎಂದರು.
ಜವಳಿ ಉದ್ಯಮ –ಉದ್ಯೋಗ ಮತ್ತು ವಿದೇಶಿ ವಿನಿಮಯಕ್ಕೆ ಪೂರಕ :
ಜವಳಿ ಉದ್ಯಮ ಹೆಚ್ಚಿನ ಉದ್ಯೋಗಾವಕಾಶವನ್ನು ಒದಗಿಸುತ್ತದೆ. ಉದ್ಯೋಗಾವಕಾಶದ ಜೊತೆಗೆ ವಿದೇಶಿ ವಿನಿಮಯವನ್ನು ಜವಳಿ ಉದ್ಯಮ ಸಾಧ್ಯವಾಗಿಸುತ್ತದೆ. ದೇಶದ ಆರ್ಥಿಕತೆ ಹೆಚ್ಚಾಗಲು ಶಾಹಿ ಸಂಸ್ಥೆಯ ಕಾರ್ಖಾನೆಗಳು ಎಲ್ಲ ಪ್ರದೇಶಗಳಲ್ಲಿ ಬರಬೇಕು. ಗ್ರಾಮೀಣ ಭಾಗದಲ್ಲಿ ಇಂತಹ ಕಾರ್ಖಾನೆಗಳು ಬಂದಾಗ ಗ್ರಾಮೀಣ ಪ್ರದೇಶದ ಆರ್ಥಿಕತೆ ಅಭಿವೃದ್ಧಿ ಹಾಗೂ ಸ್ಥಳೀಯರಿಗೆ ಉದ್ಯೋಗಾವಕಾಶ ದೊರೆಯುತ್ತದೆ. ಸಂಸ್ಥೆಯ ಹತ್ತಾರು ಕಾರ್ಖಾನೆಗಳು ಸ್ಥಾಪನೆಯಾಗಿ ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸಲಿದೆ. ಸಂಸ್ಥೆಯಲ್ಲಿ ನಮ್ಮ ಮಹಿಳೆಯರು ಮತ್ತು ಪುರುಷರು ಉತ್ತಮವಾಗಿ ಕೆಲಸ ಮಾಡಿ ಸಿದ್ಧ ಉಡುಪುಗಳ ರಿಜೆಕ್ಷನ್ ಪ್ರಮಾಣವನ್ನು ಕಡಿಮೆ ಮಾಡುತ್ತಾರೆ. ನಿರಾಕರಣೆ ಕಡಿಮೆಯಾದರೆ ಲಾಭ ಜಾಸ್ತಿಯಾಗುತ್ತದೆ. ಎಂದು ಭರವಸೆ ನೀಡಿದರು.
ದೇಶವನ್ನು ಮುನ್ನಡೆಸುವುದು ರೈತ ಮತ್ತು ಕಾರ್ಮಿಕ :
21 ನೇ ಶತಮಾನ ಜ್ಞಾನದ ಶತಮಾನ, ವಿದ್ಯೆ, ಜ್ಞಾನ ಇದ್ದವರು ಮಾತ್ರ ಜಗತ್ತನ್ನು ಆಳುತ್ತಾರೆ. ರೈತರ ಮಕ್ಕಳಿಗೆ ರೈತ ವಿದ್ಯಾನಿಧಿ ಯೋಜನೆಯನ್ನು ಪ್ರಾರಂಭಿಸಿ 1000 ಕೋಟಿ ರೂ. ಮೀಸಲಿಡಲಾಗಿದೆ. ಈ ವರ್ಷ 14 ಲಕ್ಷ ರೈತ ಕುಟುಂಬಗಳು ಈ ಯೋಜನೆಯ ಲಾಭ ಪಡೆಯಲಿದ್ದಾರೆ. ದುಡಿಮೆಯೇ ದೊಡ್ಡಪ್ಪ ಎಂಬ ಈ ಕಾಲಮಾನದಲ್ಲಿ ದುಡಿಮೆಗೆ ಅವಕಾಶ ಮಾಡಿಕೊಡಲಾಗುವುದು. ರೈತ ಮತ್ತು ಕಾರ್ಮಿಕ ದೇಶವನ್ನು ಮುನ್ನಡೆಸುತ್ತಿದ್ದಾರೆ ಎಂದು ಹೇಳಿದರು.
ವಿದ್ಯೆ ಮತ್ತು ಉದ್ಯೋಗಕ್ಕೆ ಪ್ರಾಶಸ್ತ್ಯ:
ರೈತರಿಗಾಗಿ ನಂದಿನಿ ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ನಲ್ಲಿ ಹೈನುಗಾರಿಕೆ ಮಾತ್ರವಲ್ಲದೆ ಇನ್ನಿತರ ಕೃಷಿ ಕಸುಬುಗಳನ್ನು ಪ್ರೋತ್ಸಾಹಿಸಲಾಗುತ್ತಿದೆ. ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಮೂಲಕ ಯುವಜನತೆಯ ಆರ್ಥಿಕ ಸಬಲೀಕರಣಕ್ಕೆ ಪ್ರಯತ್ನಿಸಲಾಗುವುದು. ಶಿಕ್ಷಣ ಸಂಸ್ಥೆಗಳೂ ಇಲ್ಲಿ ಬರಲಿದೆ. ವಿದ್ಯೆ ಮತ್ತು ಉದ್ಯೋಗಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುವುದು. ಕೃಷಿ ಆಧಾರಿತ ಹಾಗೂ ಹತ್ತಿ ಆಧಾರಿತ ಬೆಳೆಗಾರರಿಗೆ ಅನುಕೂಲ ಕಲ್ಪಿಸಲಾಗುವುದು ಎಂದರು.