* ಹಿರೇಕೆರೂರು ಕ್ಷೇತ್ರದ ವಿವಿಧ ಏತ ನೀರಾವರಿ ಯೋಜನೆಗಳಿಗೆ ಚಾಲನೆ
* ಕೋವಿಡ್ ನಿಯಮ ಪಾಲಿಸಿದ ಸಿಎಂ
* 13 ಕೆರೆಗಳ ತುಂಬಿಸುವ ಏತ ನೀರಾವರಿ ಯೋಜನೆ ಲೋಕಾರ್ಪಣೆ
ಹಿರೇಕೆರೂರು(ಆ.29): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿಗೆ ಆಗಮಿಸಿ ಗ್ರಾಮ ದೇವತೆ ದುರ್ಗಾದೇವಿಗೆ ಪೂಜೆ ಸಲ್ಲಿಸಿ ಕೆರೆಗೆ ಬಾಗಿನ ಅರ್ಪಿಸಿದ್ದಾರೆ.
ನಂತರ ತಾಲೂಕು ಚನ್ನೇನಹಳ್ಳಿಯಲ್ಲಿ ಹಿರೇಕೆರೂರು ಪಟ್ಟಣದ ಶ್ರೀ ದುರ್ಗಾದೇವಿ ಕೆರೆ, ಗುಂಡಗಟ್ಟಿ ಗ್ರಾಮದ ಕೊಪ್ಪದ ಕೆರೆ, ದೂದಿಹಳ್ಳಿ ಗ್ರಾಮದ ಒಟ್ಟಾರೆ ಎಂಟು ಕರೆ ತುಂಬಿಸುವ 23.25 ಕೋಟಿ ರು. ವೆಚ್ಚದ ಬಹುಗ್ರಾಮ ಕೆರೆ ತುಂಬಿಸುವ ಯೋಜನೆಗಳ ಹಾಗೂ 20.31 ಕೋಟಿ ರು. ವೆಚ್ಚದಲ್ಲಿ ಹಿರೇಕೆರೂರು-ರಟ್ಟಿಹಳ್ಳಿ ತಾಲೂಕು ಗುಡ್ಡದ ಮಾದಾಪೂರ ಸೇರಿದಂತೆ 13 ಕೆರೆಗಳ ತುಂಬಿಸುವ ಏತ ನೀರಾವರಿ ಯೋಜನೆ ಲೋಕಾರ್ಪಣೆಗೊಳಿಸಿದರು.
ರಾಜ್ಯದ ಅಭಿವೃದ್ಧಿಯ ಕನಸುಗಳನ್ನು ಬಿಚ್ಚಿಟ್ಟ ಸಿಎಂ ಬೊಮ್ಮಾಯಿ
ಹಿರೇಕೆರೂರು ಪಟ್ಟಣದ ಪೊಲೀಸ್ ಪರೇಡ್ ಮೈದಾನದಲ್ಲಿ ಕ್ಷೇತ್ರ ವ್ಯಾಪ್ತಿಯ 56.26 ಲಕ್ಷ ಮೊತ್ತದ 11 ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, 2 ಕೋಟಿ ರು. ಮೊತ್ತದ ಒಂದು ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಕೃಷಿ ಸಚಿವ ಬಿ.ಸಿ. ಪಾಟೀಲ, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ, ಸಂಸದ ಶಿವಕುಮಾರ ಉದಾಸಿ ಸೇರಿದಂತೆ ಅನೇಕ ಜನಪ್ರತಿಧಿಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಕೋವಿಡ್ ನಿಯಮ ಪಾಲಿಸಿದ ಸಿಎಂ
ಹಿರೇಕೆರೂರ, ರಾಣಿಬೆನ್ನೂರು, ಹಾವೇರಿ ನಗರದ ವಿವಿಧ ಅಭಿವೃದ್ಧಿಗಳ ಉದ್ಘಾಟನೆ ಹಾಗೂ ಶಂಕು ಸ್ಥಾಪನೆಗೆ ಆಗಮಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿ ತಾವೇ ಹೊರಡಿಸಿರುವ ಕೋವಿಡ್ ನಿಯಮ ಪಾಲಿಸಿ ಮಾದರಿಯಾದರು. ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ್ದ ಬೊಮ್ಮಾಯಿ ಎಲ್ಲಿಯೂ ಹೆಚ್ಚು ಜನರನ್ನು ಸೇರಿಸಿ ಸಮಾವೇಶ ಮಾಡಲಿಲ್ಲ. ಎಲ್ಲ ಕಡೆಯೂ ಕೇವಲ ಸರಳ ಉದ್ಘಾಟನಾ ಸಮಾರಂಭಗಳನ್ನು ಮಾತ್ರ ನೆರವೇರಿಸಿದರು. ಸಂಜೆ ವೇಳೆ ನೂತನ ಡೇರಿ ಮತ್ತು ಯುಎಚ್‌ಬಿ ಹಾಲು ಪ್ಯಾಕಿಂಗ್ ಘಟಕದ ಭೂಮಿ ಪೂಜೆ ನೆರವೇರಿಸಿ ಮಾಧ್ಯಮದೊಂದಿಗೆ ಮಾತನಾಡಿ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳ ಕುರಿತು ಮಾಹಿತಿ ಹಂಚಿಕೊಂಡರು.