ಅಧಿಕಾರಸ್ಥರಿಗೆ ಸತ್ಯ ಹೇಳೋದೇ ಸವಾಲ್‌: ಸಿಎಂ ಬಸವರಾಜ ಬೊಮ್ಮಾಯಿ

By Kannadaprabha NewsFirst Published Oct 3, 2021, 8:01 AM IST
Highlights

*  ಪವರ್‌ ಪಾಲಿಟಿಕ್ಸ್‌ಗೆ ಸತ್ಯ ಜತೆಗಿನ ಸಂಬಂಧ ಕಡಿಮೆ
*  ಸುಳ್ಳು ಹೇಳಿ ಕರುಣೆ ಗಿಟ್ಟಿಸುವ ಪ್ರಯತ್ನ
*  ಗಾಂಧಿ ಜಯಂತಿಯಲ್ಲಿ ಬೊಮ್ಮಾಯಿ ಉವಾಚ
 

ಬೆಂಗಳೂರು(ಅ.03):  ಅಧಿಕಾರದಲ್ಲಿರುವ ಜನರಿಗೆ ಸತ್ಯದ ಜೊತೆಗಿನ ಸಂಬಂಧ ಕಡಿಮೆ ಇರುತ್ತದೆ. ಸುಖಾಸುಮ್ಮನೆ ಸುಳ್ಳು ಹೇಳುವವರೇ ಹೆಚ್ಚಾಗಿದ್ದಾರೆ. ಸುಳ್ಳು ಹೇಳಿ ಕರುಣೆ ಗಿಟ್ಟಿಸುವ ಪ್ರಯತ್ನ ಮಾಡುತ್ತಾರೆ. ಅಧಿಕಾರದಲ್ಲಿ ಇರುವವರಿಗೆ ಸತ್ಯ ಹೇಳುವುದೇ ದೊಡ್ಡ ಸವಾಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ವ್ಯಾಖ್ಯಾನಿಸಿದ್ದಾರೆ.

ವಾರ್ತಾ ಇಲಾಖೆ ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯಿಂದ ಕುಮಾರಕೃಪ ರಸ್ತೆಯ ಗಾಂಧಿ ಭವನದಲ್ಲಿ ಶನಿವಾರ ಆಯೋಜಿಸಿದ್ದ ಮಹಾತ್ಮ ಗಾಂಧೀಜಿಯವರ(Mahatma Gandhi) ಜನ್ಮದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ, 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಲಾಂಛನ ಲೋಕಾರ್ಪಣೆ ಹಾಗೂ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಅಧಿಕಾರ ರಾಜಕಾರಣ(Politics) (ಪವರ್‌ ಪಾಲಿಟಿಕ್ಸ್‌) ಮಾಡುವವರಿಗೆ ಸತ್ಯದ ಜೊತೆಗಿನ ಒಡನಾಟ ಕಡಿಮೆ ಇರುತ್ತದೆ. ಸುಳ್ಳು ಹೇಳಿ ಕರುಣೆ ಗಿಟ್ಟಿಸಿಕೊಳ್ಳಲು ನೋಡುತ್ತಾರೆ. ಸತ್ಯ ಹೇಳುವುದೇ ಸವಾಲಾಗುತ್ತದೆ. ಹಿಂದೆ ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡುತ್ತಿದ್ದರು. ಆದರೆ ಈಗ ಪ್ರಾಣ ಕೊಡುವುದು ಬೇಕಿಲ್ಲ. ದೇಶದ ಒಳಿತಿಗಾಗಿ ಬದುಕುವುದೇ ನಿಜವಾದ ದೇಶಭಕ್ತಿ ಎಂದು ತಿಳಿಸಿದರು.

ಪತ್ನಿಗೆ ಸೀರೆ ಖರೀದಿಸಿದ ಸಿಎಂ: ಸೀರೆ ಸರಿ ಇಲ್ಲ ಅಂತ ಹೆಂಡತಿ ಬೈಯದಿದ್ರೆ ಸಾಕು ಎಂದ ಬೊಮ್ಮಾಯಿ

ಗಾಂಧೀಜಿಯವರ ಹೋರಾಟಕ್ಕೆ ತಾತ್ವಿಕ, ಸೈದ್ಧಾಂತಿಕ ಹಾಗೂ ವೈಜ್ಞಾನಿಕ ಹಿನ್ನೆಲೆಯಿದೆ. ಜನರಿಂದ ಉತ್ಪಾದನಾ ಚಟುವಟಿಕೆಗಳು ನಡೆಯಬೇಕು ಎಂದು ಗಾಂಧೀಜಿ ಬಯಸಿದ್ದರು. ದುಡಿಮೆಯಲ್ಲಿ ಆರ್ಥಿಕತೆಯಿದೆ, ದುಡ್ಡಿನಲ್ಲಿ ಅಲ್ಲ. ಅದಕ್ಕಾಗಿಯೇ ಬಸವಣ್ಣನವರು ಕಾಯಕವೇ ಕೈಲಾಸ ಎಂದು ನುಡಿದರು. ಪೂಜೆಗಿಂತಲೂ ಮಿಗಿಲಾದದ್ದು ಕಾಯಕವಾಗಿದ್ದು, ಸ್ವರ್ಗ ಸಮಾನ ಎಂದು ನುಡಿದರು.

ಸಚಿವರಾದ ಗೋವಿಂದ ಕಾರಜೋಳ, ಹಾಲಪ್ಪ ಆಚಾರ್‌, ಸಂಸದರಾದ ಶಿವಕುಮಾರ್‌ ಉದಾಸಿ, ಡಾ. ಎಲ್‌.ಹನುಮಂತಯ್ಯ, ನಿವೃತ್ತ ನ್ಯಾಯಾಧೀಶ ನ್ಯಾ.ಅಶೋಕ್‌ ಬಿ.ಹಿಂಚಗೇರಿ, ಮಾಜಿ ಸಚಿವ ಎಚ್‌.ಕೆ.ಪಾಟೀಲ್‌, ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೆ ಪಿ.ಕೃಷ್ಣ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್‌.ಮಂಜುನಾಥ್‌ ಪ್ರಸಾದ್‌, ವಾರ್ತಾ ಇಲಾಖೆ ಆಯುಕ್ತ ಜಿ.ಜಗದೀಶ್‌ ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲೆಗಳಲ್ಲಿ ಗಾಂಧಿ ಭವನ ನಿರ್ಮಾಣ ಶೀಘ್ರ ಪೂರ್ಣ

ಹಿಂದೆ ಗಾಂಧಿ ಭವನದ ಕಾರ್ಯಕ್ರಮಗಳಿಗೆ ಆಗಮಿಸುತ್ತಿದ್ದ ಮುಖ್ಯಮಂತ್ರಿಗಳಿಗೆ ಗಟ್ಟಿಯಾಗಿ ಆಗ್ರಹಿಸುತ್ತಿದ್ದರು. ಗಟ್ಟಿಯಾಗಿ ಹೇಳಿದರೆ ಮಾತ್ರ ಕೆಲಸ ಮಾಡುವ ಮುಖ್ಯಮಂತ್ರಿಗಳು ಇದ್ದರು. ಆದರೆ ಈಗ ಸೂಕ್ಷ್ಮವಾಗಿ ಹೇಳಿದರೆ ಕೆಲಸವಾಗುತ್ತದೆ ಎಂದು ಗೊತ್ತಾಗಿ ನನ್ನ ಕಿವಿಯಲ್ಲಿ ಬೇಡಿಕೆ ಮಂಡಿಸಿದ್ದಾರೆ. ಅದರಂತೆ, ಜಿಲ್ಲೆಗಳಲ್ಲಿ ಬಾಕಿ ಇರುವ ಗಾಂಧಿ ಭವನ ನಿರ್ಮಾಣ ಕಾರ್ಯಗಳನ್ನು ಶೀಘ್ರ ಪೂರ್ಣಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಗಾಂಧಿ ಭವನ(Gandhi Bhavan) ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ 18 ಜಿಲ್ಲೆಗಳಲ್ಲಿ ಗಾಂಧಿ ಭವನ ನಿರ್ಮಾಣವಾಗಿದ್ದು, ಉಳಿದ 12 ಜಿಲ್ಲೆಗಳಲ್ಲಿಯೂ ಕೂಡಲೇ ನಿರ್ಮಾಣ ಮಾಡಿ ಲೋಕಾರ್ಪಣೆ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
 

click me!