ಬಿಎಸ್‌ವೈ ಪಾದಕ್ಕೆ ಕೋಟಿ ಕೋಟಿ ನಮನ : ಆನಂದ ಸಿಂಗ್‌

By Kannadaprabha NewsFirst Published Oct 3, 2021, 7:55 AM IST
Highlights
  • ವಿಜಯನಗರ ಜಿಲ್ಲೆ ಅಸ್ತಿತ್ವ ಪಡೆಯಲು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರೇ ಮೂಲ ಕಾರಣ
  • ಜಿಲ್ಲೆಯ ಪ್ರಗತಿಗೆ ಅವರದ್ದೇ ಬಹುದೊಡ್ಡ ಕೊಡುಗೆ. ಅವರ ಪಾದಗಳಿಗೆ ಕೋಟಿ ಕೋಟಿ ನಮನ

 ಹೊಸಪೇಟೆ (ಅ.03):  ವಿಜಯನಗರ ಜಿಲ್ಲೆ (Vijayanagara) ಅಸ್ತಿತ್ವ ಪಡೆಯಲು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರೇ (BS Yediyurappa) ಮೂಲ ಕಾರಣರು. ಈ ಜಿಲ್ಲೆಯ ಪ್ರಗತಿಗೆ ಅವರದ್ದೇ ಬಹುದೊಡ್ಡ ಕೊಡುಗೆ. ಅವರ ಪಾದಗಳಿಗೆ ಕೋಟಿ ಕೋಟಿ ನಮನ ಎಂದು ಪ್ರವಾಸೋದ್ಯಮ ಹಾಗೂ ಬಳ್ಳಾರಿ-ವಿಜಯನಗರ ಜಿಲ್ಲಾ ಉಸ್ತುವಾರಿ ಮಂತ್ರಿ ಆನಂದಸಿಂಗ್‌ (Anand singh) ಧನ್ಯವಾದ ಸಮರ್ಪಿಸಿದ್ದಾರೆ.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ವಿಜಯನಗರ-ಬಳ್ಳಾರಿ ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಂಡಿದ್ದ ‘ವಿಜಯನಗರ ಜಿಲ್ಲೆ’ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಯಡಿಯೂರಪ್ಪ ಅವರನ್ನು ಪ್ರಶಂಸಿಸಿದರು.

ಉದಯವಾಯ್ತು ವಿಜಯನಗರ: ಕಲರ್ ಫುಲ್ ಚಿತ್ರಗಳು

ಜನರ ಅನುಕೂಲ ದೃಷ್ಟಿಯಿಂದ ಹೊಸ ಜಿಲ್ಲೆಯಾಗಬೇಕು. ಈ ಭಾಗ ಪ್ರಗತಿಯತ್ತ ಮುನ್ನಜ್ಜೆ ಇಡಬೇಕು ಎಂಬ ಆಶಯ ನನ್ನದಾಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರ ಹೇಳಿದಂತೆ ನಾನು ಹಠವಾದಿ. ಜನರಿಗಾಗಿ ನಾನು ಹಠವಾದಿಯಾಗುತ್ತೇನೆ. ಈ ಭಾಗದ ಜನರ ಕಲ್ಯಾಣವಾಗಬೇಕು. ಹಿಂದುಳಿದ ಪ್ರದೇಶಗಳು ಪ್ರಗತಿ ಕಾಣಬೇಕು ಎಂಬುದು ನನ್ನ ಹಠವಾಗಿದೆ. ಮುಖ್ಯಮಂತ್ರಿಗಳು ಸೇರಿದಂತೆ ಎಲ್ಲ ಸಚಿವ ಸಹದ್ಯೋಗಿಗಳು ನನಗೆ ಸಹಕಾರ ನೀಡುತ್ತಿದ್ದು, ವಿಜಯನಗರ ಜಿಲ್ಲೆ ಸಮಗ್ರ ಅಭಿವೃದ್ಧಿ ಕಾಣಲಿದೆ ಎಂದು ಆನಂದಸಿಂಗ್‌ ವಿಶ್ವಾಸ ವ್ಯಕ್ತಪಡಿಸಿದರು.

ತಂದೆಯ ನೆನೆದು ಭಾವುಕರಾದ ಸಚಿವ ಸಿಂಗ್‌

ವಿಜಯನಗರ ಜಿಲ್ಲೆ ಉದ್ಘಾಟನಾ ಸಮಾರಂಭದಲ್ಲಿ ನನ್ನ ತಂದೆ ಇರಬೇಕಿತ್ತು. ಅದೆಲ್ಲೋ ಕುಳಿತು ನನ್ನ ತಂದೆ ಈ ಸಮಾರಂಭ ನೋಡುತ್ತಿದ್ದಾರೆ ಎಂದೆನಿಸುತ್ತಿದೆ ಎಂದು ಸಚಿವ ಆನಂದಸಿಂಗ್‌ ಅವರು ತಮ್ಮ ತಂದೆಯನ್ನು ನೆನೆದು ಭಾವುಕರಾದರು. ಎರಡು ತಿಂಗಳ ಹಿಂದೆ ನನ್ನ ತಂದೆಯವರು ಮೃತರಾದರು. ನನ್ನಪ್ಪ ಇಲ್ಲಿರಬೇಕಿತ್ತು. ವಿಜಯನಗರ ಜಿಲ್ಲೆ ಉದಯವಾಗಬೇಕು ಎಂಬ ಆಸೆ ಅವರಲ್ಲಿ ಬಲವಾಗಿತ್ತು. ಈ ಸಂತಸದ ಕ್ಷಣಗಳಲ್ಲಿ ಅವರಿಲ್ಲ ಎಂದು ಕಣ್ಣಾಲಿ ತುಂಬಿಕೊಂಡರು.

ಉಜ್ಜಯಿನಿ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಸಲಹೆ, ಡಾ.ಸಂಗನಬಸವ ಸ್ವಾಮಿಗಳು ಸೇರಿದಂತೆ ಅನೇಕ ವಿವಿಧ ಮಠಾಧೀಶರು, ಪಕ್ಷಾತೀತವಾಗಿ ಎಲ್ಲ ಜನಪ್ರತಿನಿಧಿಗಳ ಸಹಕಾರದಿಂದ ‘ವಿಜಯನಗರ ಜಿಲ್ಲೆ’ ಹೊಸ ಹುಟ್ಟು ಪಡೆದಿದೆ. ವಿಜಯನಗರ ಜಿಲ್ಲೆಯನ್ನು ಅಸ್ತಿತ್ವಕ್ಕೆ ತರಬೇಕು ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪರನ್ನು ಭೇಟಿ ಮಾಡಿ ಮನವಿ ಮಾಡಿಕೊಂಡಾಗ ಸ್ಪಂದಿಸಿದರಲ್ಲದೆ, ಈ ಜಿಲ್ಲೆ ಹುಟ್ಟು ಪಡೆಯಲು ಬೇಕಾದ ಎಲ್ಲ ಸಲಹೆ, ಸಹಕಾರಗಳನ್ನು ನೀಡಿ ಆಶೀರ್ವದಿಸಿದರು. ಸಹೋದರನಂತೆ ಇರುವ ಬಿ.ಶ್ರೀರಾಮುಲು, ರಾಜುಗೌಡ ಜತೆಗಿದ್ದು ಬೆಂಬಲಿಸಿದರು ಎಂದ ಸ್ಮರಿಸಿದರು

click me!