ಗಡಿ ವಿವಾದದಲ್ಲಿ ಕಾಲುಕೆದರಿ ಜಗಳಕ್ಕೆ ಬರುವ ಮಹಾರಾಷ್ಟ್ರ ಸರ್ಕಾರಕ್ಕೆ ಬೆಳಗಾವಿಯಲ್ಲೇ ನಿಂತು ಪರೋಕ್ಷ ಸಂದೇಶ ನೀಡುವ ಜತೆಗೆ, ಗಡಿ ಕನ್ನಡಿಗರಿಗೂ ಧೈರ್ಯ ತುಂಬುವ ಕೆಲಸ ಮಾಡಿದ ಸಿಎಂ ಬೊಮ್ಮಾಯಿ
ಬೆಳಗಾವಿ(ಡಿ.03): ಕರ್ನಾಟಕ-ಮಹಾರಾಷ್ಟ್ರ ಗಡಿ ಸಂಘರ್ಷ ಮತ್ತೆ ಭುಗಿಲೆದ್ದಿರುವ ನಡುವೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗಡಿ ಜಿಲ್ಲೆ ಬೆಳಗಾವಿಗೆ ಭೇಟಿ ನೀಡಿ ರಾಜ್ಯದ ಗಡಿಭಾಗದ ಅಭಿವೃದ್ಧಿ, ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂಬ ಘೋಷಣೆ ಮಾಡಿದ್ದಾರೆ. ಈ ಮೂಲಕ ಗಡಿ ವಿವಾದದಲ್ಲಿ ಕಾಲುಕೆದರಿ ಜಗಳಕ್ಕೆ ಬರುವ ಮಹಾರಾಷ್ಟ್ರ ಸರ್ಕಾರಕ್ಕೆ ಬೆಳಗಾವಿಯಲ್ಲೇ ನಿಂತು ಪರೋಕ್ಷ ಸಂದೇಶ ನೀಡುವ ಜತೆಗೆ, ಗಡಿ ಕನ್ನಡಿಗರಿಗೂ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.
ರಾಮದುರ್ಗ ತಾಲೂಕಿನ ಸಾಲಹಳ್ಳಿಯ ಡಾ.ಶ್ಯಾಮ ಪ್ರಸಾದ ಮುಖರ್ಜಿ ವೇದಿಕೆಯಲ್ಲಿ ಶುಕ್ರವಾರ ತಾಲೂಕಿನ ಅಂದಾಜು .671.28 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಗಡಿಭಾಗದ ಶಾಲೆಗಳ ಅಭಿವೃದ್ಧಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಇದೇ ವರ್ಷ .100 ಕೋಟಿ ಖರ್ಚು ಮಾಡಲಾಗುವುದು. ಗಡಿಯಾಚೆ ಇರುವವರೂ ನಮ್ಮವರು. ಅಲ್ಲಿನ ಕನ್ನಡ ಶಾಲೆಗಳನ್ನು ಅಲ್ಲಿನ ರಾಜ್ಯ ಸರ್ಕಾರ ಕಡೆಗಣಿಸಿರುವುದರಿಂದ ಮೂಲಸೌಕರ್ಯ ಕಲ್ಪಿಸುವುದು ಸಾಧ್ಯವಾಗಿಲ್ಲ. ಹೀಗಾಗಿ ಅಲ್ಲಿನ ಗಡಿ ಶಾಲೆಗಳನ್ನು ನಮ್ಮ ಸರ್ಕಾರದಿಂದಲೇ ಅಭಿವೃದ್ಧಿ ಮಾಡಲಾಗುವುದು. ಗೋವಾದಲ್ಲಿ .10 ಕೋಟಿ ವೆಚ್ಚದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಈಗಾಗಲೇ ನಿರ್ಧಾರ ಮಾಡಲಾಗಿದೆ. ಅದೇ ರೀತಿ ಮಹಾರಾಷ್ಟ್ರದ ಸೊಲ್ಲಾಪುರ ಹಾಗೂ ಕೇರಳದ ಕಾಸರಗೋಡಿನಲ್ಲೂ ಕನ್ನಡ ಭವನ ನಿರ್ಮಾಣಕ್ಕೆ ತಲಾ .10 ಕೋಟಿಯನ್ನು ಸರ್ಕಾರ ನೀಡಲಿದೆ ಎಂದರು.
undefined
ಗಡಿ ವಿವಾದ: ಬೆಳಗಾವಿಯಲ್ಲಿ ಮಹಾರಾಷ್ಟ್ರ ಸಚಿವರ ಸರಣಿ ಸಭೆ
ಗಡಿಯೀಚೆ ಹಾಗೂ ಗಡಿಯಾಚೆಗಿನ ಕನ್ನಡಿಗರ ಅಭಿವೃದ್ಧಿ ಹಾಗೂ ರಕ್ಷಣೆ ಸರ್ಕಾರದ ಜವಾಬ್ದಾರಿ. ಜನಪರ ಸರ್ಕಾರ ಇದ್ದಾಗ ಮಾತ್ರ ಕಟ್ಟಕಡೆಯ ಗ್ರಾಮಕ್ಕೂ ಅಭಿವೃದ್ಧಿ ಯೋಜನೆಗಳು ತಲುಪುತ್ತವೆ. ನಮ್ಮ ಸರ್ಕಾರ ಸಮಗ್ರ ಕರ್ನಾಟಕದ ಅಭಿವೃದ್ಧಿ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಮಹಾರಾಷ್ಟ್ರ, ತಮಿಳುನಾಡು, ಗೋವಾ ಹಾಗೂ ತೆಲಂಗಾಣ ರಾಜ್ಯದ ಗಡಿಭಾಗದಲ್ಲಿರುವ ರಾಜ್ಯದ ಜಿಲ್ಲೆಗಳಲ್ಲಿ 1,800 ಗ್ರಾಪಂಗಳನ್ನು ಅಭಿವೃದ್ಧಿಪಡಿಸುವ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಅದೇ ರೀತಿ ಗಡಿಭಾಗದ ರಸ್ತೆಗಳ ಸುಧಾರಣೆಗೆ ವಿಶೇಷ ಕಾರ್ಯಕ್ರಮವನ್ನೂ ರೂಪಿಸಲಾಗಿದೆ ಎಂದ ಅವರು, ಗಡಿಭಾಗದ ಗ್ರಾಮಗಳಿಗೆ ಪ್ರಧಾನಿ ಮೋದಿ ಅವರ ಜಲಜೀವನ್ ಮಿಷನ್‌ನಡಿ ಕುಡಿಯುವ ನೀರಿನ ವ್ಯವಸ್ಥೆ ಇದೇ ವರ್ಷ ಅನುಷ್ಠಾನಕ್ಕೆ ಬರಲಿದೆ ಎಂದು ಭರವಸೆ ನೀಡಿದರು.
671 ಕೋಟಿ ಕಾಮಗಾರಿಗೆ ಶಂಕು
ರಾಮದುರ್ಗ ತಾಲೂಕಿನ ಸಾಲಹಳ್ಳಿಯಲ್ಲಿ 671 ಕೋಟಿ ರು.ಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸರ್ಕಾರಿ ಯೋಜನೆಗಳ ಫಲಾನುಭವಿಗಳಿಗೆ ಪ್ರಮಾಣಪತ್ರ ವಿತರಿಸಿದರು.