ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರ ಬಹು ವರ್ಷಗಳ ಬೇಡಿಕೆಯಾಗಿದ್ದ ಕಳಸಾ ಬಂಡೂರಿ ಯೋಜನೆ ಜಾರಿಯಲ್ಲಿ ಬಿಜೆಪಿ ಸರ್ಕಾರ ನುಡಿದಂತೆ ನಡೆದುಕೊಂಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನರಗುಂದ (ಜ.01): ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರ ಬಹು ವರ್ಷಗಳ ಬೇಡಿಕೆಯಾಗಿದ್ದ ಕಳಸಾ ಬಂಡೂರಿ ಯೋಜನೆ ಜಾರಿಯಲ್ಲಿ ಬಿಜೆಪಿ ಸರ್ಕಾರ ನುಡಿದಂತೆ ನಡೆದುಕೊಂಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಅವರು ವಿಜಯಪುರಕ್ಕೆ ಹೋಗುವ ಸಂದರ್ಭದಲ್ಲಿ ಪಟ್ಟಣಕ್ಕೆ ಆಗಮಿಸಿ ಸಚಿವ ಸಿ.ಸಿ. ಪಾಟೀಲರ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದರು. ಉತ್ತರ ಕರ್ನಾಟಕ ಭಾಗದ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರು ಕಳೆದ ಹಲವು ವರ್ಷಗಳಿಂದ ಈ ಭಾಗದ 4 ಜಿಲ್ಲೆ 11 ತಾಲೂಕಿನ ರೈತರು ಕಳಸಾ ಬಂಡೂರಿ ಯೋಜನೆ ಜಾರಿ ಮಾಡಬೇಕೆಂದು ಹೋರಾಟ ಮಾಡಿದ್ದರು.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಶೇಖಾವತ್, ರಾಜ್ಯ ನೀರಾವರಿ ಸಚಿವ ಗೋವಿಂದ ಕಾರಜೋಳ ಅವರ ನಿರಂತರ ಪ್ರಯತ್ನದಿಂದ ಈಗ ನಮಗೆ ಕೇಂದ್ರ ಜಲ ಆಯೋಗದಿಂದ ಡಿಪಿಆರ್ ದೊರೆತಿರುವುದು ಹರ್ಷ ತಂದಿದೆ. ಕಳಸಾ ಬಂಡೂರಿ ಜಾರಿಗಾಗಿ ಈ ಭಾಗದ ರೈತರು ಹಲವು ವರ್ಷಗಳಿಂದ ಅವಿರತವಾಗಿ ಹೋರಾಟ ಮಾಡಿದ್ದರು. ಇದನ್ನು ಆಲಿಸಿದ ಬಿಜೆಪಿ ಸರ್ಕಾರ ಕಾನೂನು ತೊಡಕುಗಳನ್ನು ನಿವಾರಣೆ ಮಾಡಿದ್ದರಿಂದ ಈ ಯೋಜನೆ ಜಾರಿಯಾಗಲು ಸಾಧ್ಯವಾಗಿದೆ ಎಂದರು.
undefined
ರಾಜ್ಯ ಬಿಜೆಪಿಗೆ ಅಮಿತ್ ಶಾ 3 ಗುರಿ: ಹಳೆ ಮೈಸೂರು ಬಗ್ಗೆ 2 ತಾಸು ಚರ್ಚೆ
ಕಳಸಾ ಬಂಡೂರಿ ಯೋಜನೆ ಜಾರಿಗಾಗಿ ಈ ಹಿಂದೆ ನಾವು ಧಾರವಾಡದಿಂದ 250 ಕಿಮೀಗಳ ಪಾದಯಾತ್ರೆ ಮಾಡಿ 69 ದಿನಗಳ ಕಾಲ ಅಹೋರಾತ್ರಿ ಧರಣಿ ಮಾಡಿ ಅಂದಿನ ಸರ್ಕಾರಕ್ಕೆ ನಾವು ರಕ್ತದಲ್ಲಿ ಪತ್ರ ಬರೆದುಕೊಟ್ಟು ಬೇಗ ಈ ಯೋಜನೆ ಜಾರಿಗೊಳಿಸಲು ಒತ್ತಾಯಿಸಿದ್ದೆವು. ಕಾಂಗ್ರೆಸ್ ಸರ್ಕಾರದಿಂದ ಆಗದ ಈ ಕಾರ್ಯವನ್ನು ನಮ್ಮ ಬಿಜೆಪಿ ಸರ್ಕಾರವು ಅಧಿಕಾರಕ್ಕೆ ಬಂದ ಮೇಲೆ ಯೋಜನೆ ಸಾಫಲ್ಯಗೊಳಿಸಿದೆ. ಇದಕ್ಕಾಗಿ ಹೋರಾಟ ಮಾಡಿದ ರೈತ ಸಮುದಾಯ, ಮಠಾಧೀಶರು, ಸಾಹಿತಿಗಳು, ವಿವಿಧ ಸಂಘ- ಸಂಸ್ಥೆಗಳ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಆದಷ್ಟುಬೇಗ ಈ ಯೋಜನೆಗೆ ಟೆಂಡರ್ ಕರೆದು ಕಾಮಗಾರಿ ಆರಂಭಿಸುವ ಮೂಲಕ ನುಡಿದಂತೆ ನಡೆದುಕೊಳ್ಳುತ್ತೇವೆ ಎಂದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಈ ಯೋಜನೆ ಜಾರಿಯಾಗಿರುವುದು ವಿರೋಧ ಪಕ್ಷದ ನಾಯಕರ ನಿದ್ದೆಗೆಡಿಸಿದೆ. ಕಾಂಗ್ರೆಸ್‌ನವರು ಡಿಪಿಆರ್‌ದಲ್ಲಿ ದಿನಾಂಕ ನಮೂದಾಗಿಲ್ಲ, ಬಿಜೆಪಿಯವರು ಚುನಾವಣೆಯಲ್ಲಿ ಈ ರೀತಿಯ ಗಿಮಿಕ್ ಮಾಡುತ್ತಿದ್ದಾರೆ ಎಂದು ಹೇಳಿಕೆ ನೀಡುತ್ತಿರುವುದು ಹಾಸ್ಯಾಸ್ಪದ. ಕಾಂಗ್ರೆಸ್‌ನವರದ್ದು ಏನಿದ್ದರೂ ಮೊಸರಲ್ಲಿ ಕಲ್ಲು ಹುಡುಕುವ ಬುದ್ದಿ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಅಮಿತ್ ಶಾ ಕಾಲಿಟ್ಟ ಮೇಲೆ ಬಿಜೆಪಿ ಪರ ಸುನಾಮಿ: ಸಿಎಂ ಬೊಮ್ಮಾಯಿ
ಈ ವೇಳೆ ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ. ಪಾಟೀಲ, ನೀರಾವರಿ ಸಚಿವ ಗೋವಿಂದ ಕಾರಜೋಳಿ, ಶಾಸಕ ಅರವಿಂದ ಬೆಲ್ಲದ, ಎಸ್.ಬಿ. ಕರಿಗೌಡರ, ಬಿ.ಬಿ. ಐನಾಪೂರ, ಪ್ರಕಾಶಗೌಡ ತಿರಕನಗೌಡ್ರ, ಬಿಜೆಪಿ ಮಂಡಲದ ಅಧ್ಯಕ್ಷ ಅಜ್ಜುಗೌಡ ಪಾಟೀಲ, ಪ್ರಶಾಂತ ಜೋಶಿ, ಅಜ್ಜಪ್ಪ ಹುಡೇದ, ಮಲ್ಲಪ್ಪ ಮೇಟಿ. ಡಾ. ಆರ್.ಬಿ. ರಾಚನಗೌಡ್ರ, ಬಿ.ಎಸ್.ಪಾಟೀಲ, ಯಲ್ಲಪ್ಪ ದೊಡ್ಡಮನಿ, ಸುನೀಲ ಕುಷ್ಟಗಿ, ಬಸು ಪಾಟೀಲ, ಮಂಜು ಮೆಣಸಗಿ, ಸುರೇಶ ಸಾತಣ್ಣವರ, ಎನ್.ವೈ. ಮೇಟಿ, ಪರಪ್ಪ ಸಹಕಾರ, ಸಿದ್ದು ಹೂಗಾರ, ಹನಮಂತ ಹವಾಲ್ದಾರ ಸೇರಿದಂತೆ ಹಲವರಿದ್ದರು.