
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ
ಚಿತ್ರದುರ್ಗ (ಜೂ.05): ಉಪ್ಪಾರ ಸಮಾಜದ ಶ್ರೀ ಭಗೀರಥ ಪೀಠಕ್ಕೆ ಸಾಮಾಜಿಕ ಶೈಕ್ಷಣಿಕ ಚಟುವಟಿಕೆಗಳಿಗಾಗಿ 5 ಕೋಟಿ ರೂ. ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು. ಇಂದು ಹೊಸದುರ್ಗ ತಾಲ್ಲೂಕಿನ ಬ್ರಹ್ಮ ವಿದ್ಯಾನಗರದ ಭಗೀರಥ ಗುರುಪೀಠದಲ್ಲಿ ಶ್ರೀ ಭಗೀರಥ ಜಯಂತಿ, ಭಗೀರಥ ದೇವಾಲಯ ಲೋಕಾರ್ಪಣೆ ಹಾಗೂ ಉಪ್ಪಾರರ ಬೃಹತ್ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಉಪ್ಪಾರರು ಕಠಿಣ ಪರಿಶ್ರಮ, ಕಾಯಕ ನಿಷ್ಠೆ ಹೊಂದಿರುವ ಸಮುದಾಯ. ಅವರು ಗಂಗೆಯಷ್ಟೇ ಪವಿತ್ರರು ಎಂದು ಬಣ್ಣಿಸಿದ ಮುಖ್ಯಮಂತ್ರಿಗಳು, ಪುರುಷೋತ್ತಮಾನಂದ ಸ್ವಾಮೀಜಿಯವರು ಸಮಾಜದ ಅಭ್ಯುದಯಕ್ಕಾಗಿ ಶ್ರಮಿಸುತ್ತಿದ್ದಾರೆ. ಅವರ ಎಲ್ಲ ಯೋಜನೆಗಳಿಗೆ ನಮ್ಮ ಬೆಂಬಲ ಸದಾ ಇರುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಈ ಸಂದರ್ಭದಲ್ಲಿ ಮಠದ ಸಮೀಪ ಹರಿಯುವ ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯ ನಾಲೆಗೆ ಶ್ರೀಗಳ ಆಶಯದಂತೆ ಶ್ರೀ ಭಗೀರಥರ ಹೆಸರು ಇಡಲಾಗುವುದು ಎಂದು ಮುಖ್ಯಮಂತ್ರಿಯವರು ತಿಳಿಸಿದರು. ಇಂದು ನಮ್ಮ ದೇಶ ಆರ್ಥಿಕವಾಗಿ ಬೆಳೆಯುತ್ತಿದೆ.
ಕೇಂದ್ರ ಸರ್ಕಾರದಿಂದ ಭದ್ರಾ ಮೇಲ್ದಂಡೆ ಯೋಜನೆಗೆ 13 ಸಾವಿರ ಕೋಟಿ ಹಣ, ಸಿಎಂ ಬೊಮ್ಮಾಯಿ
ಸಾಮಾಜಿಕವಾಗಿಯೂ ಬೆಳವಣಿಗೆ ಹೊಂದುತ್ತಿದೆ. ಆದರೆ ಎಲ್ಲರನ್ನೂ ಒಳಗೊಂಡ ಆರ್ಥಿಕ ಬೆಳವಣಿಗೆ ಆದಾಗ ಮಾತ್ರ ಸಾಮಾಜಿಕ ಪರಿವರ್ತನೆ ಸಾಧ್ಯ ಎಂದು ಅವರು ನುಡಿದರು. ಹಲವು ನಾಯಕರು ಸಾಮಾಜಿಕ ನ್ಯಾಯದ ವಿಚಾರವನ್ನು ತಮ್ಮ ಭಾಷಣದಲ್ಲಿ ಬಳಸಿ ದೊಡ್ಡ ಸ್ಥಾನಕ್ಕೇರಿದ್ದಾರೆ. ಸಾಮಾಜಿಕ ನ್ಯಾಯದ ಮೆಟ್ಟಿಲೇರಿ ಸಾಮಾಜಿಕ ನ್ಯಾಯ ಕೊಡುವ ಸ್ಥಾನದಲ್ಲಿ ಕುಳಿತವರಿಗೆ ಆಗ ಸಾಮಾಜಿಕ ನ್ಯಾಯದ ಪ್ರಜ್ಞೆ ಎಲ್ಲಿತ್ತು? ಈಗ ಮತ್ತೆ ಅಧಿಕಾರಕ್ಕೆ ಬರಲು ಹವಣಿಸುತ್ತಿದ್ದಾರೆ ಎಂದು ಪರೋಕ್ಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ಟೀಕಿಸಿದರು. ದೇಶದಲ್ಲಿ ಬಡವರ ಹೆಸರಿನಲ್ಲಿ ಕಳೆದ 75 ವರ್ಷಗಳಿಂದ ರಾಜಕಾರಣ ನಡೆದಿದೆ.
ಅವರು ಹಲವಾರು ಬಾರಿ ಅಧಿಕಾರಕ್ಕೆ ಬಂದರು. ಅಧಿಕಾರಕ್ಕೆ ಬರುವ ಮುನ್ನ ಬಡವರ ಜಪ ಮಾಡುವ ಅವರು ಅಧಿಕಾರಕ್ಕೆ ಬಂದ ನಂತರ ಬಡವರೂ ಇಲ್ಲ; ದಲಿತರೂ ಇಲ್ಲ. ಹೀಗೆ ಮನುಷ್ಯನನ್ನು ನಿರಂತರವಾಗಿ ಮೋಸ ಮಾಡಲಾಗದು. ಸಮಾಜ ಜಾಗೃತವಾಗಿದೆ ಎಂದು ನುಡಿದರು. ಉಪ್ಪಾರ ಸಮಾಜದವರು ಆರ್ಥಿಕವಾಗಿ, ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಬೇಕು. ಇದಕ್ಕೆ ನೆರವಾಗಲು ಸರ್ಕಾರ ಹಲವಾರು ಯೋಜನೆಗಳನ್ನು ಉಪ್ಪಾರರ ನಿಗಮದ ಮೂಲಕ ಜಾರಿಗೊಳಿಸುತ್ತಿದೆ. ನಿಗಮದ ಅನುದಾನ ಹೆಚ್ಚಿಸಲು ಸಹ ಕ್ರಮ ಕೈಗೊಂಡಿದ್ದು, ಸಮಾಜದ ಯುವಕರು ಈ ಸೌಲಭ್ಯಗಳ ಅನುಕೂಲ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
Chitradurga ಏತ ನೀರಾವರಿ ಯೋಜನೆಗೆ ಬೊಮ್ಮಾಯಿ ಚಾಲನೆ
21ನೇ ಶತಮಾನ ಜ್ಞಾನದ ಶತಮಾನ. ಜ್ಞಾನಿಗಳು ದೇಶವನ್ನು ಆಳುತ್ತಾರೆ. ಆದ್ದರಿಂದ ಜ್ಞಾನ ಪಡೆದು ಉತ್ತಮ ಸಾಧನೆ ಮಾಡಿ. ಸ್ವಾಮಿ ವಿವೇಕಾನಂದರ ಮಾತಿನಂತೆ ಸಾವಿನ ನಂತರವೂ ಸಾಧನೆಗಳಲ್ಲಿ ಬದುಕುವಂತಹ ಸಾಧಕರಾಗಿ. ನಾವು ನೀವೆಲ್ಲರೂ ಒಂದಾಗಿ ನವ ಕರ್ನಾಟಕ ನಿರ್ಮಾಣದ ಮೂಲಕ ಮೋದಿಜಿ ಅವರ ಕನಸಿನ ನವ ಕರ್ನಾಟಕ ನಿರ್ಮಾಣ ಮಾಡೋಣ ಎಂದು ಯುವಕರಿಗೆ ಸಲಹೆ ನೀಡಿದರು.