ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಬದ್ಧ: ಸಿಎಂ ಯಡಿಯೂರಪ್ಪ

By Kannadaprabha NewsFirst Published Jun 10, 2020, 2:34 PM IST
Highlights

ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆಂದೇ ಬಜೆಟ್‌ನಲ್ಲಿ 500 ಕೋಟಿ ರು. ಅನುದಾನ: ಸಿಎಂ| ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘ ಉದ್ಘಾಟನೆ| ಭಾಗದ ಜನರಲ್ಲಿ ಕೌಶಲ್ಯ ಸುಧಾರಿಸಿ ಉತ್ಪಾದನೆ ಮತ್ತು ಸೇವಾ ವಲಯಗಳಲ್ಲಿ ಪರಿಣಾಮಕಾರಿ ಬೆಳವಣಿಗೆ ಸಾಧಿಸುವುದು ನಮ್ಮ ಗುರಿ|

ಕಲಬುರಗಿ(ಜೂ.10): ‘ಕಲ್ಯಾಣ ಕರ್ನಾಟಕ’ ಭಾಗದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬಜೆಟ್‌ನಲ್ಲಿ 500 ಕೋಟಿ ರು. ತೆಗೆದಿರಿಸಿದ್ದು, ಈ ಪ್ರದೇಶದ ಆರು ಜಿಲ್ಲೆಗಳ ಅಭಿವೃದ್ಧಿಗೆ ಹೊಸ ಆಯಾಮ ನೀಡುವುದು ಸರ್ಕಾರದ ಗುರಿಯಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

ಮಂಗಳವಾರ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಸ್ಥಾಪಿಸಿರುವ ‘ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘ’ದ ಕಲಬುರಗಿ ವಿಭಾಗವನ್ನು ವಿಡಿಯೋ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಈ ಭಾಗದ ಜನರಲ್ಲಿ ಕೌಶಲ್ಯ ಸುಧಾರಿಸಿ ಉತ್ಪಾದನೆ ಮತ್ತು ಸೇವಾ ವಲಯಗಳಲ್ಲಿ ಪರಿಣಾಮಕಾರಿ ಬೆಳವಣಿಗೆ ಸಾಧಿಸುವುದು ನಮ್ಮ ಗುರಿಯಾಗಿದೆ. ಈ ಗುರಿ ಸಾಧಿಸುವ ನಿಟ್ಟಿನಲ್ಲಿ ಸಂಘ ಪೂರಕ ಕಾರ್ಯಕ್ರಮ ಹಮ್ಮಿಕೊಳ್ಳಲಿದೆ ಎಂದರು.

ಅಭಿವೃದ್ಧಿಯ ಹರಿಕಾರ, ಕಷ್ಟಕ್ಕಾಗುವ ಧೀರ, ಕಲಬುರಗಿ ಕಟ್ಟಾಳು ದತ್ತಾತ್ರೇಯ ಪಾಟೀಲ್

ಕಳೆದ ಫೆ.20ರಂದು ರಾಜ್ಯ ಸರ್ಕಾರ ‘ಹೈದರಾಬಾದ್‌ ಕರ್ನಾಟಕ’ ಭಾಗವನ್ನು ರಾಜ್ಯ ಸರ್ಕಾರ ‘ಕಲ್ಯಾಣ ಕರ್ನಾಟಕ’ ಎಂದು ಘೋಷಿಸಿತು. ಆದರೆ ಕೇವಲ ಹೆಸರಿನಿಂದ ಕರೆದರೆ ಅಭಿವೃದ್ಧಿ ಆಗುವುದಿಲ್ಲ. ಯಾವುದೇ ಅಭಿವೃದ್ಧಿ ಜನಕೇಂದ್ರಿತವಾಗಿರಬೇಕು ಮತ್ತು ಸ್ಥಳೀಯ ಸಂಪನ್ಮೂಲಗಳನ್ನು ಮತ್ತು ಸ್ಥಳೀಯ ಕೌಶಲ್ಯವನ್ನು ಆಧರಿಸಿ ಉತ್ಪಾದನೆ ಮತ್ತು ಸೇವೆಯನ್ನು ನೀಡಬೇಕು. ಸ್ಥಳೀಯ ಅಸ್ಮಿತೆ ಕಾಪಾಡಿಕೊಂಡು ಜಾಗತಿಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವ ಸಂದರ್ಭವನ್ನು ಕೊರೋನೋತ್ತರ ಬೆಳವಣಿಗೆಗಳು ಒದಗಿಸಿ ಕೊಟ್ಟಿವೆ. ಈ ನಿಟ್ಟಿನಲ್ಲಿ ಮಾಜಿ ಸಂಸದರಾಗಿರುವ ಡಾ.ಬಸವರಾಜ ಪಾಟೀಲ್‌ ಸೇಡಂ ನೇತೃತ್ವದ ಸಂಘ ಪರಿಣಾಮಕಾರಿಯಾಗಿ ಕ್ರಮ ಕೈಗೊಳ್ಳಲಿದೆ ಎಂಬ ವಿಶ್ವಾಸ ಹೊಂದಿರುವುದಾಗಿ ತಿಳಿಸಿದರು.

ಸಂಘದ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತರುವ ದೃಷ್ಟಿಯಿಂದ ಮೂರು ಸಾವಿರ ಸಂಪರ್ಕ ಕೇಂದ್ರಗಳನ್ನು ಸ್ಥಾಪಿಸಲು ಉದ್ದೇಶಿಸಿರುವುದು ಶ್ಲಾಘನೀಯ. ಜತೆಗೆ ಸಂಸ್ಥೆಯಿಂದ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಸಾವಯವ ಕೃಷಿ ಕೇಂದ್ರಗಳ ಸ್ಥಾಪನೆ, ವ್ಯಕ್ತಿತ್ವ ವಿಕಸನಕ್ಕಾಗಿ ವಿಚಾರ ಸಂಕಿರಣ, ಸ್ವಯಂ ಉದ್ಯೋಗ ಹಾಗೂ ಕೌಶಲ್ಯ ತರಬೇತಿ, ಆರೋಗ್ಯ ಶಿಬಿರಗಳನ್ನು ಆಯೋಜಿಸಲು ಉದ್ದೇಶಿಸಿರುವುದು ಸಕಾಲಿಕವಾಗಿದೆ. ಯುವ ಜನ ಹಾಗೂ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಲಾಗಿದೆಯಲ್ಲದೇ, ಗ್ರಾಮಗಳ ಸಬಲೀಕರಣಕ್ಕಾಗಿ ಆರ್ಥಿಕ ಉತ್ತೇಜನ ನೀಡುವುದರ ಜೊತೆಗೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಯಡಿಯೂರಪ್ಪ ಆಶಿಸಿದರು.

ಡಾ. ಬಸವರಾಜ ಪಾಟೀಲ್‌ ಸೇಡಂ ಅವರ ಅಧ್ಯಕ್ಷತೆಯಲ್ಲಿ 15 ಜನರ ಆಡಳಿತ ಮಂಡಳಿ ಸದಸ್ಯರ ಸಮಿತಿ ಕಲ್ಯಾಣ ಕರ್ನಾಟಕ ವಿಭಾಗದ ಎಲ್ಲ ಜಿಲ್ಲೆಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಿದೆ ಎಂಬ ನಂಬಿಕೆ ತಮಗಿದ್ದು, ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ಧ್ಯೇಯವನ್ನು ಎತ್ತಿ ಹಿಡಿದು ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಸಂಸ್ಥೆ ಕಾರಣಭೂತವಾಗಬೇಕು ಎಂದು ಅವರು ಹಾರೈಸಿದರು.
 

click me!